ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕೊರೊನಾ, ಸ್ವಚ್ಛತೆ ಮತ್ತು ಪರಿಸರ ಕುರಿತ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು.
ಕೊರೊನಾ ಎಂಬ ಖಾಯಿಲೆಯು ನಮಗೆ ಸ್ವಚ್ಛತೆ ಹಾಗೂ ಪರಿಸರ ಕಾಪಾಡಿಕೊಳ್ಳುವ ಅನಿವಾರ್ಯತೆಯನ್ನು ತಿಳಿಸಿಕೊಟ್ಟಿದೆ. ಈ ಮೂರೂ ವಿಚಾರವನ್ನು ಜನರಿಗೆ ಬೀದಿ ನಾಟಕದ ರೂಪದಲ್ಲಿ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
“ಬೇರು ಬೆವರು” ಕಲಾ ತಂಡದಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು ಸೇರಿದಂತೆ ಕೊರೊನಾ ವೈರಸ್ ಉಂಟು ಮಾಡುತ್ತಿರುವ ಹಾನಿಯ ಕುರಿತು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಬಿಡಿಸಿ ಮನಮುಟ್ಟುವಂತೆ ನಾಟಕ ಪ್ರದರ್ಶಿಸಿದರು. ಇದರೊಂದಿಗೆ ನಮ್ಮ ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿರಿಸಿಕೊಳ್ಳಬೇಕಾದ ಅಗತ್ಯ ಮತ್ತು ಪರಿಸರ ಕಾಪಾಡಬೇಕಾದ ರೀತಿಗಳನ್ನು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸರಹಳ್ಳಿ ಮತ್ತು ನಗರದ ಸಿದ್ಧಾರ್ಥ ನಗರದ ಶಾಲೆಯ ಬಳಿ “ಬೇರು ಬೆವರು” ಕಲಾ ತಂಡದವರು ಜನಜಾಗೃತಿ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್, ಮಹಿಳಾ ಜ್ಞಾನವಿಕಾಸ ಅಧಿಕಾರಿ ಲಕ್ಷ್ಮಿ, ಸೇವಾಪ್ರತಿನಿಧಿ ಲಾವಣ್ಯ, ಲಕ್ಷ್ಮಿ, “ಬೇರು ಬೆವರು” ಕಲಾ ತಂಡದ ಮಹೇಶ್, ಚಂದ್ರಶೇಖರ್, ಚಿ.ಮು.ಹರೀಶ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಕೆ.ವಿ.ತೇಜಸ್ (ಶೇ 96.48) ಮತ್ತು ಕೆ.ಸಿ.ಪಲ್ಲವಿ (ಶೇ 93.44) ಅವರ ಮನೆಗೆ ಗುರುವಾರ ತೆರಳಿ ಅಭಿನಂದಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊರೊನಾ ಕಾರಣದಿಂದ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು. ಆದರೂ ಶಿಕ್ಷಣ ಇಲಾಖೆಯ ಸಾಂಘಿಕ ಪ್ರಯತ್ನದಿಂದ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಿತಲ್ಲದೆ, ನಮ್ಮ ಜಿಲ್ಲೆ ಮೊದಲ ಸ್ಥಾನವನ್ನು ಪಡೆಯುವಂತಾಯಿತು. ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಅಂಕಗಳನ್ನು ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಇತರರಿಗೆ ಪ್ರೇರಣೆಯಾಗಲಿ ಹಾಗೂ ಅವರನ್ನು ಬೆನ್ನು ತಟ್ಟಿ ಅಭಿನಂದಿಸುವ ಮೂಲಕ ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಶಿಕ್ಷಣ ಇಲಾಖೆಯ ಆಶಯ. ಅದಕ್ಕಾಗಿ ಸಾಧಕ ವಿದ್ಯಾರ್ಥಿಯ ಮನೆಗೆ ತೆರಳಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರನ್ನು ಅಭಿನಂದಿಸುತ್ತಿರುವುದಾಗಿ ಹೇಳಿದರು.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಮೇಲೂರು, ಕುಂದಲಗುರ್ಕಿ, ಸಾದಲಿ ಮತ್ತು ಈ.ತಿಮ್ಮಸಂದ್ರ ಸರ್ಕಾರಿ ಪ್ರೌಢಶಾಲೆಗಳು ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿವೆ. ಇದು ಹೆಮ್ಮೆಯ ವಿಚಾರ ಎಂದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದ್ದು, ಜಿಲ್ಲಾಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಪರಿಶೀಲಿಸಿ, ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಕಳೆದ ಸುಮಾರು 15 ವರ್ಷಗಳಿಂದಲೂ ದಾಖಲಾತಿ, ಹಾಜರಾತಿಯನ್ನು ಕಾಯ್ದುಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ, ಎನ್‌ಎಂಎಂಎಸ್ ಪರೀಕ್ಷೆ, ಡ್ರಾಯಿಂಗ್ ಗ್ರೇಡ್ ಲೋಯರ್ ಮತ್ತು ಹೈಯರ್ ಪರೀಕ್ಷೆಗೆ ನೊಂದಾಯಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿನಿಧಿಸುವಂತಿದೆ ಎಂದರು.
ವಿವಿಧ ವಿಜ್ಞಾನ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು, ಕಳೆದ ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ನಾಲ್ಕುಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ ಉತ್ತಮ ಕಲಿಕಾಪರಿಸರವನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು.
ನರೇಗಾ ಯೋಜನೆಯಡಿ ಶಾಲೆಯ ಆವರಣದಲ್ಲಿ ಮಿನಿ ಉದ್ಯಾನವನ ನಿರ್ಮಿಸುತ್ತಿದ್ದು ವಿವಿದೋದ್ದೇಶಕ್ಕಾಗಿ ಬಳಸುವಂತಿದೆ. ಪ್ರಾರ್ಥನೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಪರಿಸರದೊಂದಿಗೆ ಚಟುವಟಿಕೆಗಳ ಮೂಲಕ ಕಲಿಸಲು ಪೂರಕವಾಗಿದ್ದು, ಮಕ್ಕಳ ಪ್ಲೇ ಏರಿಯಾವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಶಾಲೆಯಲ್ಲಿ ವಾಟರ್‌ಲೆಸ್ ಶೌಚಾಲಯವಿದ್ದು ಮತ್ತಷ್ಟು ಆಕರ್ಷಣಿಯಗೊಳಿಸಬೇಕು. ಎತ್ತರದ ಕಾಂಪೌಂಡ್ ನಿರ್ಮಾಣ, ಸಸಿನೆಡುವುದು, ಅಡುಗೆಕೋಣೆ ನಿರ್ಮಾಣ, ಶೌಚಾಲಯ ನಿರ್ಮಾಣ ಕಾಮಗಾರಿಗಳು ಶೀಘ್ರವಾಗಿ ಮುಗಿಸಬೇಕು. ಮಳೆನೀರುಕೊಯ್ಲು, ನೆನಸುಗುಂಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಶಾಲೆಯ ಮಕ್ಕಳ ಉಪಯೋಗಕ್ಕಾಗಿ ಸೈಕಲ್‌ಸ್ಟ್ಯಾಂಡ್ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಲಿಕಲಿ ಕೊಠಡಿಯನ್ನು ವೀಕ್ಷಿಸಿದ ಅವರು ಪ್ರಶಂಶಿಸಿ, ಗ್ರಂಥಾಲಯ, ಪ್ರಯೋಗಾಲಯಗಳು ಕಿರಿದಾಗಿದ್ದು, ಉತ್ತಮ ಶಾಲಾ ಪರಿಸರವನ್ನು ಹೊಂದಿರುವುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾದರಿ ಶಾಲೆ ಕ್ರಿಯಾಯೋಜನೆ ಕಿರು ಕೈಪಿಡಿಯನ್ನು ಹಸ್ತಾಂತರಿಸಿ ಮಾತನಾಡಿ, ಶಾಲೆಯ ಎಲ್ಲಾ ಶಿಕ್ಷಕರಿಗೂ ನವದೆಹಲಿಯ ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ವಾಟರ್ ಅಂಡ್ ಸ್ಯಾನಿಟೇಶನ್, ಮಿನಿಸ್ಟ್ರಿ ಆಫ್ ಯೂತ್ ಅಫೇರ‍್ಸ್ ಅಂಡ್ ಸ್ಪೋರ್ಟ್ಸ್, ಮಿನಿಸ್ಟ್ರಿ ಅಫ್ ಹ್ಯೂಮನ್ ರಿಸೋರ್ಸ್ ಡೆವೆಲಪ್‌ಮೆಂಟ್ ವತಿಯಿಂದ 2018-19 ರಲ್ಲಿ ಸ್ವಚ್ಚಭಾರತ್ ಸಮ್ಮರ್ ಇಂಟರ‍್ನ್‌ಶಿಪ್‌ನಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಸರ್ಟಿಫಿಕೇಟ್ ನೀಡಲಾಗಿದೆ ಎಂದರು.
ಪರೀಕ್ಷೆಗೆ ಅವಕಾಶ: ಶಾಲೆಯ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ವೋದಯ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗಾಂಧಿ ವಿಚಾರದರ್ಶಿನಿ, ಗಾಂಧಿಸಂಸ್ಕಾರ್ ಪರೀಕ್ಷೆಗೆ ಕೂರಿಸಿ ಸರ್ಟಿಫಿಕೇಟ್‌ಗಳನ್ನು ಕೊಡಿಸಲಾಗಿದೆ. ಪ್ರತಿವರ್ಷವೂ ಶೈಕ್ಷಣಿಕ ಪ್ರವಾಸ, ವಿಜ್ಞಾನಕೇಂದ್ರ, ತೋಟಗಾರಿಕಾ ಪ್ರದೇಶ, ಹಾಲುಶಿಥಿಲೀಕರಣ ಕೇಂದ್ರ, ಜಲಸಂಕರ‍್ಷಣಾ ಚೆಕ್‌ಡ್ಯಾಂಗಳಿಗೆ ಭೇಟಿ ನೀಡಲಾಗಿದೆ ಎಂದು ವಿವರಿಸಿದರು.
ಶಿಕ್ಷಕರಿಂದ ವರ್ಲಿ ಆರ್ಟ್: ಇಡೀ ಶಾಲೆಯ ಕಟ್ಟಡದ ಒಳಗೆ ಮತ್ತು ಹೊರಗೆ ಬಣ್ಣ ಹಾಕಿದ್ದು ಹೊರಭಾಗದಲ್ಲಿ ಗೋಡೆಗಳ ಮೇಲೆ ಶಿಕ್ಷಕರೇ ವರ್ಲಿ ಆರ್ಟ್ ಮಾಡುತ್ತಿದ್ದುದನ್ನು ವೀಕ್ಷಿಸಿ ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕುಪಂಚಾಯಿತಿ ಇಒ ಕೆ.ಬಿ.ಶಿವಕುಮಾರ್, ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್‌ಕುಮಾರ್, ಗುತ್ತಿಗೆದಾರರಾದ ಎಸ್.ಎ.ನಾಗೇಶ್‌ಗೌಡ, ಎಸ್.ಡಿ.ದೇವರಾಜು, ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ನಾರಾಯಣಸ್ವಾಮಿ, ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು.
ನಗರದ 26ನೇ ವಾರ್ಡ್‌ನ ಆಶ್ರಯ ಬಡಾವಣೆಯಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 15 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆ, ಚರಂಡಿ, ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರವನ್ನು ಕೊಳಗೇರಿ ಮುಕ್ತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಕ್ಷೇತ್ರದಲ್ಲಿರುವ ಕೊಳಗೇರಿ ಪ್ರದೇಶವನ್ನು ಗುರುತಿಸಿ ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ವಸತಿಹೀನರಿಗಾಗಿ ಸುಮಾರು 2 ಸಾವಿರ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡಿದ್ದೇವೆ ಎಂದರು.
ಆಶ್ರಯ ಬಡಾವಣೆಯ ಸಮೀಪದಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 140 ಮನೆಗಳನ್ನು ನಿರ್ಮಿಸಿ ಬಡ ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡಿದ್ದೇವೆ. ಸರ್ಕಾರದಿಂದ ನಗರೋತ್ಥಾನ ಯೋಜನೆಯಡಿ ವಿವಿಧ ಹಂತಗಳಲ್ಲಿ ಬಂದಿರುವ ಅನುದಾನವನ್ನು ಎಲ್ಲಿ ಬಳಕೆ ಮಾಡಿದ್ದಾರೆ ಯಾವ ಕಾಮಗಾರಿಗಳನ್ನು ನಡೆಸಿದ್ದಾರೆ ಎಂಬ ಮಾಹಿತಿ ಇಲ್ಲ. ಕೆರೆಗೆ ಹೊಂದಿಕೊಂಡಿರುವಂತೆ ನಿರ್ಮಿಸಿರುವ ಪೂಲ್ ಪಾಂಡ್ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ ಎಂದು ನಾಗರಿಕರು ದೂರಿದ್ದು ಈ ಕುರಿತು ತನಿಖೆ ನಡೆಸಬೇಕಿದೆ ಎಂದರು.
ರಾಜ್‌ಕುಮಾರ್, ಸಿದ್ದೀಖ್, ಬೈರರೆಡ್ಡಿ ವಾರ್ಡ್‌ನ ನಾಗರಿಕರು ಹಾಜರಿದ್ದರು.
ಶಿಟೊ ರಿಯೊ ಕರಾಟೆ ಡೊ ಇಂಡಿಯಾ ಅಕಾಡೆಮಿ ಹಾಗೂ ವೆಂಕಟ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಟ್ರೈನಿಂಗ್ ಸೆಂಟರ್ ಜೊತೆಗೂಡಿ ನಡೆಸಿದ್ದ ಮೊಟ್ಟಮೊದಲ ಆನ್ ಲೈನ್ ಓಪನ್ ಕತಾ ಚಾಂಪಿಯನ್ ಶಿಪ್ 2020 ರಲ್ಲಿ ಶಿಡ್ಲಘಟ್ಟದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆಪಟುಗಳು ಪದಕಗಳನ್ನು ಪಡೆದಿದ್ದಾರೆ.
ಬ್ಲೂ ಬೆಲ್ಟ್ ಕತಾ : ನರೇಂದ್ರ (ದ್ವಿತೀಯ), ಮೋಹಿತ್ (ತೃತೀಯ), ಪರ್ಪಲ್ ಬೆಲ್ಟ್ ಕತಾ : ವಿಕಾಸ್ (ಪ್ರಥಮ), ರಾಜೇಶ್ (ದ್ವಿತೀಯ), ಪವನ್ ಕಲ್ಯಾಣ್ (ಪ್ರಥಮ), ಬ್ರೌನ್ ಬೆಲ್ಟ್ ಕತಾ : ನಂದೀಶ್ (ಪ್ರಥಮ), ಹರ್ಷಿತ್ (ಪ್ರಥಮ), ಜಯಸಿಂಹ (ತೃತೀಯ) ಸ್ಥಾನ ಪಡೆದು ಮೆಡಲ್ ಹಾಗೂ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ತೆಲುಗು ಚಿತ್ರನಟ ರಾಜಕಾರಣಿ ಡಾಕ್ಟರ್ ಪದ್ಮಭೂಷಣ ಚಿರಂಜೀವಿ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಿಡ್ಲಘಟ್ಟ ತಾಲೂಕು ಮೆಗಾಸ್ಟಾರ್ ಚಿರಂಜೀವಿ ಅಸೋಶಿಯೇಷನ್ ವತಿಯಿಂದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ದಿನೇಶ್ ಬಾಬು, ಚಿರಂಜೀವಿ ಅಭಿಮಾನಿಗಳ ಬಳಗದ ಉಪಾಧ್ಯಕ್ಷರಾದ ದೇವರಾಜ್, ಕಸಾಪ ನಗರ ಘಟಕದ ಅಧ್ಯಕ್ಷ ಸಿ ಎನ್ ಮುನಿರಾಜ್, ರಾಮದಾಸ್, ವೆಂಕಟರೆಡ್ಡಿ, ವೆಂಕಟರಮಣ, ಬಂಗಾರು ಶ್ರೀನಿವಾಸ್, ದಾಮೋದರ್, ರಾಮಾಂಜನೇಯ, ರಾಧಾಕೃಷ್ಣ ಹಾಗೂ ಇನ್ನೂ ಮುಂತಾದ ಚಿರಂಜೀವಿಯ ಅಭಿಮಾನಿಗಳು ಸೇರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹೊಸಪೇಟೆ, ಜಂಗಮಕೋಟೆ, ಜೆ.ವೆಂಕಟಾಪುರ ಮುಂತಾದ ಗ್ರಾಮ ಪಂಚಾಯಿತಿಗಳಲ್ಲಿನ ನರೇಗಾ ಕಾಮಗಾರಿಗಳನ್ನು ವೀಕ್ಷಿಸಿ, ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ತ್ವರಿತವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಚೊಕ್ಕಂಡಹಳ್ಳಿಯ ಕಲ್ಯಾಣಿ, ಎದ್ದಲತಿಪ್ಪೇನಹಳ್ಳಿಯ ಕಲ್ಯಾಣಿ, ಹೊಸಪೇಟೆ ಗ್ರಾಮದ ಸಂತೆ ಮೈದಾನ, ಹೊಸಪೇಟೆ ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ತಡೆಯಲು ಕೈಗೊಂಡಿರುವ ಮುನ್ನೆಚ್ಚರಿಕೆಗಳು, ಸುಗಟೂರು ಸರ್ಕಾರಿ ಶಾಲೆ, ಜಂಗಮಕೋಟೆ ನಾಡಕಚೇರಿ, ಅಲ್ಲಿನ ಮಳೆಕೊಯ್ಲು ಕಾಮಗಾರಿ, ಹೊಸಪೇಟೆಯಲ್ಲಿ ರೈತರು ನರೇಗಾ ಯೋಜನೆಯಡಿ ಬೆಳೆದ ಹಿಪ್ಪುನೇರಳೆ ಸೊಪ್ಪು, ಮಲ್ಲೇನಹಳ್ಳಿಯ ಕಲ್ಯಾಣಿ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಪಿಡಿಒ ಗಳು ಹಾಜರಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ, ರೈತ, ಕೂಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆಯೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾಂಗ್ರೆಸ್ ಭವನದಿಂದ ಶಿಡ್ಲಘಟ್ಟ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ನೆರೆ ಹಾವಳಿ ಮತ್ತು ಕೊರೊನ ಸಂಕಷ್ಟದಿಂದ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸುವ ಬದಲಿಗೆ ಅವ್ಯವಹಾರಗಳ ವಿರುದ್ಧ ಧ್ವನಿ ಎತ್ತುವ ಕಾಂಗ್ರೆಸ್ ಮುಖಂಡರಿಗೆ ಲೀಗಲ್ ನೋಟೀಸ್ ನೀಡಿ ಹೆದರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗೆ ಹೆದರುವುದಿಲ್ಲ. ಬದಲಿಗೆ ಜನರೊಂದಿಗೆ ಸೇರಿಕೊಂಡು ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ಬ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳ ವಿರುದ್ದ ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.
ದೇಶದ ಬೆನ್ನೆಲುಬುಗಳಾದ ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುವ ಬದಲಿಗೆ ರೈತರ ಬೆನ್ನು ಮುರಿಯುವಂತಹ ಮಾರಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ರೈತ ವಿರೋಧಿ ಧೋರಣೆಯನ್ನು ಹೊಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವು ಕಲ್ಪಿಸುವುದು, ಹಾನಿಗೆ ಪರಿಹಾರ ಒದಗಿಸಲು ಹಾಗೂ ಕೊರೊನಾ ಭ್ರಷ್ಟಾಚಾರದ ಕುರಿತಾಗಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿ “ಜನಧ್ವನಿ” ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿ ಸಲ್ಲಿಸಿದರು.
ಕೆಎಂಎಫ್. ನಿರ್ದೇಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ಬಿ.ಸುಬ್ರಮಣಿ, ರಾಜ್ಯ ಮಹಿಳಾ ಕಾರ್ಯದರ್ಶಿ ಯಾಸ್ಮೀನ್ ತಾಜ್, ಮಹಮದ್ ಹಫೀಜ್, ಇಂತಿಯಾಜ್, ರಾಮಾಂಜಿ, ಚಿದಾನಂದಮೂರ್ತಿ, ಬಳೆ ರಘು, ರಾಜ್ ಕುಮಾರ್, ಮುನಿರಾಜು ಕುಟ್ಟಿ, ಶ್ರೀನಾಥ್ ಹಾಜರಿದ್ದರು.
ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಹಾಗೂ ದೇವರಾಜ್ ಅರಸ್ ಅವರ ಜನ್ಮದಿನದ ಸ್ಮರಣಾರ್ಥ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಮೊಬೈಲ್‍ಗಳನ್ನು ವಿತರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ ಮತ್ತು ತರಕಾರಿ ಉತ್ಪಾದನೆಯಲ್ಲಿ ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಸಹ ಸಾಧನೆ ಮಾಡುತ್ತಿರುವುದು ಸಂತಸದಾಯಕ ವಿಷಯ ಎಂದು ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶವಾದರೂ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ ಎಂಬುದು ಸಾಬೀತಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಶಿಕ್ಷಕರು, ಖಾಸಗಿ ಶಾಲಾ ಆಡಳಿತ ಮಂಡಳಿತದ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹ ಮತ್ತು ಪೋಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ ಅದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಸತತ ಪರಿಶ್ರಮದಿಂದ ಗುರಿ ಸಾಧಿಸಲು ಯಾವುದೇ ಅಡತಡೆಗಳು ಎದುರಾಗುವುದಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಐಎಎಸ್, ಐಪಿಎಸ್, ಕೆಎಎಸ್ ಸಹಿತ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಹಾಜಿರಾ, ಅಂಕಿತ, ಬಿಎಸ್‍ಸಿ ವಿದ್ಯಾರ್ಥಿನಿ ಲಾವಣ್ಯ ಅವರಿಗೆ ಮೊಬೈಲ್‍ಗಳನ್ನು ಅವರ ಮನೆಗಳಿಗೆ ತೆರಳಿ ಶಾಸಕರು ವಿತರಿಸಿ ಶುಭ ಹಾರೈಸಿದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಯಾಸ್ಮೀನ್ ತಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಮಹಮದ್ ಹಫೀಜ್, ನವಾಜ್, ನಗರಸಭಾ ಸದಸ್ಯ ಕೃಷ್ಣಮೂರ್ತಿ ಹಾಜರಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಗಸ್ಟ್ 29 ರಂದು ವಚನದಿನವನ್ನಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ನನ್ನ ಮೆಚ್ಚಿನ ಶರಣ” ಅಥವಾ “ಶರಣೆ” ಯರಲ್ಲಿ ಒಬ್ಬರನ್ನು ಕುರಿತು 3 ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಮತ್ತು ಅನುಷ್ಟಾನ” ಎಂಬುದರ ಬಗ್ಗೆ 4 ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.
ಆಸಕ್ತರು ಇಮೇಲ್, ವ್ಯಾಟ್ಸಪ್ ಅಥವಾ ವೈಯಕ್ತಿಕವಾಗಿ ಕೆಳಕಂಡ ವಿಳಾಸಕ್ಕೆ ಆಗಸ್ಟ್ 25 ರೊಳಗಾಗಿ ಕಳುಹಿಸಲು ಕೋರಲಾಗಿದೆ. ವಿಜೇತರನ್ನು ಆಗಸ್ಟ್ 29 ರಂದು ನಡೆಯುವ ವಚನದಿನದ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಎನ್.ಅಮೃತ್ ಕುಮಾರ್ ತಿಳಿಸಿದ್ದಾರೆ.
ವಿಳಾಸ :
ಎಸ್.ಎನ್.ಅಮೃತ್ ಕುಮಾರ್, ಶೆಟ್ಟಿಹಳ್ಳಿ ಬಡಾವಣೆ, ಮೊದಲನೇ ತಿರುವು, ಸರ್ಕಾರಿ ಕಾಲೇಜು ಹಿಂಭಾಗ, ಎಂ.ಜಿ.ರಸ್ತೆ, ಚಿಕ್ಕಬಳ್ಳಾಪುರ 562101.
ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಗಣೇಶ ಚತುರ್ಥಿ ಬಂದಿದೆ. ಮಣ್ಣಿನಿಂದ ಮಾಡಿರುವ ನೈಸರ್ಗಿಕ ಬಣ್ಣ ಬಳಿದ ನಾಲ್ಕು ಅಡಿಗಿಂತ ಕಡಿಮೆ ಎತ್ತರದ ಗಣೇಶನ ಮೂರ್ತಿಗಳನ್ನು ಸ್ಥಾಪಿಸಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ತಿಳಿಸಿದರು. ಗಣೇಶನ ಹಬ್ಬಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಿದ್ದು, ಮೆರವಣಿಗೆ ಮೂಲಕ ಗಣೇಶನ ಮೂರ್ತಿಯನ್ನು ತರುವುದಾಗಲಿ ಅಥವಾ ವಿಸರ್ಜನೆ ಮಾಡುವುದಾಗಲೀ ಸಂಪೂರ್ಣ ನಿಷೇಧ ಮಾಡಲಾಗಿದೆ. ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಸೋಂಕು ಹರಡುವ ಭೀತಿಯ ಕಾರಣ ಹೆಚ್ಚು ಜನರು ಸೇರುವಂತಿಲ್ಲ. ಗಣೇಶನ ಮೂರ್ತಿಗಳನ್ನು ಸಾರ್ವಜನಿಕವಾಗಿ ಇಡುವವರು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು ಮತ್ತು ಮೂರ್ತಿಗಳ ಸುರಕ್ಷತೆಯ ಜವಾಬ್ದಾರಿ ಇಡುವವರದ್ದೇ ಆಗಿರುತ್ತದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಜೊತೆಗೆ ಗಣೇಶ ಕೂರಿಸಿರುವ ಸ್ಥಳದಲ್ಲಿ 20 ಜನಕ್ಕಿಂತ ಹೆಚ್ಚಿನ ಜನ ಸೇರಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿರುವವರು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ಸ್ವಯಂ ಸೇವಕರನ್ನು ಇಡುವ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ತೀರ್ಥ ಪ್ರಸಾದ ವಿನಿಯೋಗಿಸಬಾರದು. ಏನಾದರೂ ಅಚಾತುರ್ಯ ನಡೆದರೂ ಆಯೋಜಕರೇ ಹೊಣೆಗಾರರಾಗುವರು ಎಂದು ಎಚ್ಚರಿಸಿದರು. ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ ಮಾತನಾಡಿ, ಕೋವಿಡ್ ಕಾರಣದಿಂದ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿ. ಸ್ವಚ್ಛತೆ, ಸ್ಯಾನಿಟೈಸರ್ ಎಲ್ಲವನ್ನೂ ಆಯೋಜಕರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕ ಗಣೇಶನ ವಿಸರ್ಜನೆಯನ್ನು ಒಬ್ಬರೋ, ಇಬ್ಬರೋ ಜೊತೆಯಲ್ಲಿ ಹೋಗಿ ವಿಸರ್ಜಿಸಿ ಬರಬೇಕು. ಮನೆಗಳಲ್ಲಿ ಇಡುವವರು ಮನೆಯಲ್ಲಿಯೇ ಒಂದು ಟಬ್ ಅಥವಾ ಬಕೆಟ್ ನಲ್ಲಿ ನೀರಿಟ್ಟು ಅದರಲ್ಲಿ ವಿಸರ್ಜಿಸಿ ಎಂದರು. ಸಬ್ ಇನ್ಸ್ ಪೆಕ್ಟರ್ ಸಂಗಪ್ಪ ಮೇಟಿ, ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಶಬ್ಬೀರ್, ನಾರಾಯಣಸ್ವಾಮಿ ಹಾಜರಿದ್ದರು.