ರಾಜ್ಯದ ಆಯ್ದ 371 ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೋರಡಿಸಿದ ಹಿನ್ನಲೆಯಲ್ಲಿ ಹಲವಾರು ಸಾಹಿತಿಗಳು, ಸಂಘಟನೆಗಳು ಅದನ್ನು ಪ್ರತಿಭಟಿಸುತ್ತಿರುವ ಸಂದರ್ಭದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಇಂಗ್ಲಿಷ್ ಮಾಧ್ಯಮ ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಕನ್ನಡ ಸಂಘಟನೆಯವರು ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಯಲು ಕಳುಹಿಸುತ್ತಿದ್ದಾರೆ? ಈ ಮಕ್ಕಳು ಎಂತಹ ಶಾಲೆಗಳಲ್ಲಿ ಓದುತ್ತಿದ್ದಾರೆ ಎನ್ನುವುದನ್ನು ಮೊದಲು ಗಮನಿಸಬೇಕಾಗಿದೆ ಎಂದು ಖಾರವಾಗಿಯೇ ಹೇಳಿದ್ದಾರೆ. ಸರಕಾರ ಸರಿದಾರಿಯಲ್ಲಿ ಇದೆಯೇ? ಎಂದು ಯೋಚಿಸುವ ಚರ್ಚಿಸುವ ಮುನ್ನ ವಾಸ್ತವವನ್ನು ಮರೆಯುವುದಾಗಲಿ, ಮರೆಮಾಡುವುದಾಗಲಿ ಒಳ್ಳೆಯದಲ್ಲ. ಇಂದಿನ ಅಗತ್ಯವನ್ನು ಅರಿಯುವುದು ಕೂಡ ಅಗತ್ಯ.
ಇಂದಿನ ‘ಗೋಳೀಕರಣ’ ದ ಸಂದರ್ಭದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ. ಅದು ಅನೇಕ ರೀತಿಯ ನೌಕರಿಗಳಿಗೆ ನೆರೆವಾಗಬಲ್ಲ ಸಾಧನ. ಇಂಗ್ಲೀಷ್ ಮಾದ್ಯಮದಲ್ಲಿ ಓದಿದರೆ ಮಾತ್ರ ಇದು ಸಾಧ್ಯ. ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಬಹುದು. ವಿಜ್ಞಾನ ವಿಷಯಕ್ಕಂತೂ ಇಂಗ್ಲೀಷ್ ಮಾದ್ಯಮ ಬೇಕೇ ಬೇಕು. ತಮ್ಮ ಮಕ್ಕಳು ಇಂಜಿನಿಯರ್‍ಗಳಾಗ ಬೇಕು. ಇಂಥ ಕನಸನ್ನೇ ಇಂದು ಎಲ್ಲೆಲ್ಲೂ ಬಿತ್ತಿದರ ಪರಿಣಾಮವಾಗಿ ಇಂದು ಗ್ರಾಮೀಣ ಪ್ರದೇಶಗಳಿಂದ ಹಿಡಿದು ಎಲ್ಲ ನಗರಗಳಲ್ಲೂ ಖಾಸಗಿ ಇಂಗ್ಲೀಷ್ ಶಾಲೆಗಳು ಪ್ರಾರಂಭಿಸಲ್ಪಟ್ಟಿವೆ. ದಿನೇ ದಿನೇ ಇವುಗಳ ಸಂಖ್ಯೆ ವೃದ್ದಿಯಾಗುತ್ತಿದೆ. ಅಲ್ಲಿಗೆ ಸೇರುವ ಮಕ್ಕಳ ಸಂಖ್ಯೆ ಕೂಡ ಏರುತ್ತಿದೆ. ಅಲ್ಲಿನ ಡೋನೆಶನ್ ಮತ್ತು ಫೀ ಕುರಿತು ಚಿಂತಿಸುವುದಕಿಂತ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ರೂಪುಗೊಂಡರೆ ಸಾಕು ಎಂಬ ಚಿಂತೆ ಪಾಲಕರದ್ದು. ಹಾಗಾಗಿ ಎಷ್ಟೇ ಕಷ್ಟವಾದರು ಸರಿ, ಇಂಗ್ಲೀಷ್ ಸ್ಕೂಲುಗಳಿಗೇ ಸೇರಿಸಲು ಪಾಲಕರು ಒದ್ದಾಡುತ್ತಿದ್ದಾರೆ. ಅಲ್ಲಿನ ಶಿಕ್ಷಣದ ಗುಣಮಟ್ಟದ ಕುರಿತಾಗಲೀ, ಅಲ್ಲಿನ ಶಿಕ್ಷಕರ ವಿದ್ಯಾರ್ಹತೆಯ ಕುರಿತಾಗಲೀ ಯಾರು ತಲೆಕೆಡಿಸಿಕುಳ್ಳುವುದಿಲ್ಲ. ಫಲಿತಾಂಶವನ್ನಷ್ಟೇ ಗಮನಿಸುತ್ತಾರೆ.
ಇತ್ತ ಸರಕಾರಿ ಶಾಲೆಗಳಲ್ಲಿ ಸರಿಯಾದ ವಿದ್ಯಾರ್ಹತೆಯುಳ್ಳ ಶಿಕ್ಷಕರಿದ್ದು, ವ್ಯವಸ್ಥೆ ಇದ್ದ ಸಂದರ್ಭದಲ್ಲೂ, ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ, ಕೆಲವು ಮುಚ್ಚಿದೆ. ಹಲವು ಮುಚ್ಚುವ ಹಂತ ತಲುಪಿದೆ. ಇದು ಹೀಗೆ ಮುಂದುವರೆದಲ್ಲಿ ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಕಡಿತವಾಗುತ್ತದೆ. ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಅವುಗಳನ್ನು ಇಂಗ್ಲೀಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಹೀಗೆ ಎರಡರಲ್ಲು ಶಿಕ್ಷಣ ದೂರಕುವಂತೆ ಮಾಡಿದರೆ, ಕೊನೆಗೆ ಇಂಗ್ಲೀಷ್ ಮಾಧ್ಯಮದ ಕಾರಣಕ್ಕಾದರೂ ಶಾಲೆಗಳು ಇರಬಹುದು. ಆದರೆ ಅದರಲ್ಲಿ ವಿದ್ಯಾರ್ಥಿಗಳು ಇರುವುದು ಅನುಮಾನ. ಇಷ್ಟಕ್ಕೂ ಇರುವ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಯಾರು ಪ್ರಯತ್ನಿಸಿದ್ದಾರೆ? ದನಿ ಎತ್ತಿದ್ದಾರೆ? ಕನ್ನಡವನ್ನು ಉಳಿಸಿ ಬೆಳಸಬೇಕಾದದ್ದು ನಮ್ಮ ಕರ್ತವ್ಯ. ನಮ್ಮ ಮೇಲೆ ಮಾತೃಭಾಷಾ ಋಣವಿದೆ. ಹಾಗಂತ ಕನ್ನಡ ಮಾಧ್ಯಮ ಶಾಲೆಗಳ ಮುಖಾಂತರವಷ್ಟೆ ಅದು ಸಾಧ್ಯವೆಂದು ವಾದಮಾಡಲಿಕ್ಕಾಗದು. ಕನ್ನಡ ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಲ್ಪಟ್ಟರೆ ಸಾಕಾಗುತ್ತದೆ. ಭಾಷೆಯನ್ನು ಸರಿಯಾಗಿ ಕಲಿತು ಬಳಸಲು ಪ್ರಾರಂಭಿಸಿದಾಗ ಅದು ಚಲಾವಣೆಗೆ ಬರುತ್ತದೆ. ಆದರೆ ಇಂದು ಕನ್ನಡವನ್ನು ಸರಿಯಾಗಿ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿರುವುದರ ಬಗ್ಗೆ ಅನುಮಾನಗಳಿವೆ. ಹಳೆಗನ್ನಡವನ್ನಂತೂ ಪಠ್ಯದಿಂದ ದಿನೇ ದಿನೇ ಕಿತ್ತೆಸೆಯುತ್ತಿರುವುದಕ್ಕೆ ಕಾರಣ ಅವುಗಳನ್ನು ವಿದ್ಯಾರ್ಥಿಗಳು ಕಲಿಯಲಾರರು ಎಂದಲ್ಲ, ಬದಲಿಗೆ ಕಲಿಸಲು ಶ್ರಮವಾಗುತ್ತದೆ ಎಂಬುದು. ಹಳಗನ್ನಡ, ನಸುಗನ್ನಡಗಳನ್ನೆಲ್ಲ ತೆಗೆದು ಆಧುನಿಕ ಕನ್ನಡವಷ್ಟೆ ಸಾಕು ಎಂಬ ಮಟ್ಟಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆ ಬಂದು ನಿಂತಿದೆ. ಮುಂದೆ ಅತ್ಯಾಧುನಿಕ ಕನ್ನಡವೆಂದು ಕನ್ನಡ ಇಂಗ್ಲೀಷ್‍ನ ಕಲಿಸುಮೇಲೋಗರವನ್ನು ಒಪ್ಪಿಕೊಳ್ಳಲೂಬಹುದು. ಇದೇ ಇಂದಾಗುತ್ತಿರುವ ದುರಂತ. ಕನ್ನಡವನ್ನು ಕನ್ನಡವೆಂದು ಖಚಿತವಾಗಿ ಒಪ್ಪುವುದೇ ಕಷ್ಟವಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದಕ್ಕೆ ಹೊಣೆ ಯಾರು? ಕನ್ನಡ ಮಾಧ್ಯಮದ ಕುರಿತು ಮೈಮೇಲೆ ಬಂದಂತೆ ಆಡುವವರೆಂದಾದರೂ ಈ ಕುರಿತು ಚರ್ಚಿಸಿದ್ದಾರಾ? ಕನ್ನಡಬೇಕು ಎಂದು ಬೊಬ್ಬೆ ಹೊಡೆದರೆ ಕನ್ನಡ ಬೆಳೆಯುವುದಿಲ್ಲ. ಹಾಗಾಗಿ ಇಂದಿನ ಅಗತ್ಯವೆಂದರೆ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ವ್ಯವಸ್ಥಿತವಾಗಿ ಕಲಿಸುವ ಏರ್ಪಾಡು ಆಗಬೇಕು.
ಇನ್ನು ಈ ವರ್ಷದಿಂದಲೇ ಎಲ್ಲ ಕಡೆಗೂ ಸಿ.ಬಿ.ಎಸ್.ಸಿ. ಪಠ್ಯಕ್ರಮ ಜಾರಿಯಾಗುತ್ತದೆ. ಮುಂದಿನ ವರ್ಷದಿಂದ ಪಿ.ಯು.ಸಿ ವಿಜ್ಞಾನದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಬದಲಿಗೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅದಕ್ಕೆ ಇಲ್ಲಿನ ವಿದ್ಯಾರ್ಥಿಗಳನ್ನು ಅಣಿಗೂಳಿಸುವುದು ಕೂಡ ಅಗತ್ಯ. ಹೀಗಿದ್ದಾಗ 6 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಜಾರಿಯಾಗುವುದರಲ್ಲಿ ಅಂಥ ದೋಷವೇನೂ ಕಾಣಿಸದು. ಮುಖ್ಯವಾಗಿ ಬೇಕಾದದ್ದು ಯಾವುದೇ ಮಾಧ್ಯಮದಲ್ಲಾಗಲೀ, ಸರಿಯಾಗಿ ಶಿಕ್ಷಣ ದೊರಕುವಂತಾಗಬೇಕು. ಸರಕಾರ ಈ ದಿಶೆಯಲ್ಲಿ ಗಮನಹರಿಸಿ ಇಂಗ್ಲೀಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲು ಸಂಕಲ್ಪಿಸಿದನ್ನು ಸರಿಯಾಗಿ ಜಾರಿಗೆ ತರುವುದೇ ಆದಲ್ಲಿ, ಅದಕ್ಕೆ ತಕ್ಕಂತೆ ಶಿಕ್ಷಕರನ್ನು ಆಯ್ಕೆ ಮಾಡಬೇಕು. ಅಥವಾ ಇರುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಯಾಕೆಂದರೆ ಇಂದು ಅನೇಕ ಬಿ.ಎಡ್. ಮತ್ತು ಡಿ.ಎಡ್. ಕಾಲೇಜುಗಳಿಂದ ಹೊರಬರುತ್ತಿರುವ ಬಹುತೇಕರು ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಅಭ್ಯಸಿಸಿ ಪದವಿ ಪಡೆದವರು ಶಿಕ್ಷಕರಾದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಥವಾ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರಿಗೆ ಕಡ್ಡಾಯವಾಗಿ ಇಂಗ್ಲೀಷ್ ತರಬೇತಿಯನ್ನು ನೀಡುವುದು ಅಗತ್ಯವಾಗಿದೆ.
ಇಂದು 6ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ವಿರೋಧಿಸುವರು ತಮ್ಮ ವಿರೋಧವನ್ನು ಸರಕಾರದ ಎದುರು ಸಮರ್ಥವಾಗಿ ಪ್ರಕಟಪಡಿಸಬಹುದು. ಸರಕಾರವು ಅವರ ವಿರೋದಕ್ಕೆ ಬೆಲೆನೀಡಿ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬಹುದು. ಮುಖ್ಯವಾದ ಸಂಗತಿ ಎಂದರೆ, ಸರಕಾರದ ಮೇಲೆ ಒತ್ತಡ ಹೇರಬಹುದೇ ವಿನ: ವಿದ್ಯಾರ್ಥಿಗಳ ಪಾಲಕರ ಮೇಲೆ ಒತ್ತಡ ಹೇರಲಾಗುವುದಿಲ್ಲ. ಇಂದಿನ ಬಹುತೇಕ ಪಾಲಕರ ಮೇಲೆ ಒತ್ತಡ ಹೇರಬಹುದೇ ವಿನ: ಬಹುತೇಕ ಪಾಲಕರ ಮನಸ್ಥಿತಿಯನ್ನು ಗಮನಿಸಿ ಮುಂದುವರೆಯುವುದು ಇಂದಿನ ಅಗತ್ಯವೂ ಹೌದು ಎನ್ನದೇ ವಿಧಿಯಿಲ್ಲ. ಏಕೆಂದರೆ ಸರ್ಕಾರ ಪ್ರಾರಂಭಿಸದಿದ್ದರೆ ಖಾಸಗಿಯವರಂತೂ ಕಾದು ಕುಳಿತಿರುತ್ತಾರೆ. ಇದರ ಲಾಭ ಪಡೆಯುತ್ತಾರೆ. ಇಂಗ್ಲೀಷ್ ಮಾಧ್ಯಮದ ಹೆಸರಿನಲ್ಲಿ ಇನ್ನಿಲ್ಲದ ಶೋಷಣೆ ನಡೆಸಲು ಅವರಿಗೆ ಹೆಚ್ಚು ಅನುಕೂಲ. ಸರ್ಕಾರವೇ ಪ್ರಾರಂಭಿಸಿದರೆ, ಖಾಸಗಿಯವರಿಗೆ ಕಷ್ಟ. ಸರ್ಕಾರದಷ್ಟು ಸಂಬಳ ನೀಡಲಾಗಲೀ, ಸರ್ಕಾರದಂತೆ ಕಟ್ಟುನಿಟ್ಟಿನ ವಿದ್ಯಾರ್ಹತೆಯನ್ನಾಗಲೀ, ಹೊಂದಿದವರನ್ನು ನೇಮಿಸಿಕೊಳ್ಳಲಿಕ್ಕಾಗಲೀ ಅವುಗಳಿಗೆ ಅಷ್ಟು ಸುಲಭವಲ್ಲ. ಸರ್ಕಾರವೇ ಮುನ್ನುಗ್ಗಿ ಇಂಗ್ಲೀಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲು ಪ್ರಾರಂಭಿಸಿದರೆ, ಬಹಳಷ್ಟು ಪಾಲಕರು ಖಾಸಗಿಯವರ ಶೋಷಣೆಯಿಂದ ಮುಕ್ತರಾಗಿ ನಿಟ್ಟುಸಿರು ಬಿಡಬಹುದು. ಅವರ ಮಕ್ಕಳಿಗೆ ನಿಜಕ್ಕೂ ಉತ್ತಮ ಗುಣಮಟ್ಟದ ಶಿಕ್ಷಣ ಪ್ರಾಪ್ತವಾಗಬಹುದು. ಆ ಮಕ್ಕಳು ಇಂದಿನ ಜಾಗತೀಕರಣದ ಮಾರುಕಟ್ಟೆಯಲ್ಲಿ ತನ್ನ ಬದುಕನ್ನು ಸರಾಗವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಬಹುದು. ಇನ್ನು ಇಂದಿನ ಬಹುತೇಕ ಗ್ರಾಮೀಣ ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಅಲ್ಲಿ ಕೇವಲ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯುತ್ತದೆ ಎಂಬುದು. ಹಾಗಾಗಿ ಸರ್ಕಾರ ಅನೇಕ ಅಂತಹಾ ಶಾಲೆಗಳು ಮುಚ್ಚಲು ಅಥವಾ ಪಕ್ಕದ ಶಾಲೆಯೊಂದಿಗೆ ವಿಲೀನಗೊಳಿಸಲು ಹೊರಟಿತ್ತು. ಆಗಲೂ ಅದರ ವಿರುದ್ದ ದನಿ ಎತ್ತಿದರು. ಹೇಗಾದರೂ ಶಾಲೆಯೆಂಬುದೊಂದು ಇರಲಿ ಎಂದು ಹೇಳುವುದು ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದಂತೆ. ಏಕೆಂದರೆ, ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದಾಗ್ಯೂ ಶಾಲೆ ಶಿಕ್ಷಕರ ಸಂಬಳ ಮತ್ತಿತರರ ಖರ್ಚುಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಶಾಲೆಗಳು ಬೇಕು. ಆದರೆ ಆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಎಂಬ ಧೋರಣೆ ಇದ್ದಾಗ ಅದನ್ನು ಒಪ್ಪುವುದು ಕಷ್ಟ. ಶಾಲೆಗಳು ಬೇಕು ಮತ್ತು ಆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸುತ್ತೇವೆ ಎಂದು ಎದೆ ತಟ್ಟಿ ಹೇಳುವ ಪಾಲಕರ ಸಮುದಾಯ ನಿರ್ಮಾಣವಾಗಲು ಬಹುಷ: ಆಂಗ್ಲ ಮಾಧ್ಯಮವನ್ನು 6ನೇ ತರಗತಿಯಿಂದ ಜಾರಿಗೆ ತರುವುದರಿಂದ ಸಾಧ್ಯವಾಗಬಹುದೇನೋ? ಆ ದಿಶೆಯಲ್ಲೂ ಪ್ರಯತ್ನಗಳು ನಡೆದರೆ ಸದ್ಯದಲ್ಲಿ ಆಕ್ಷೇಪಗಳನ್ನು ಬದಿಗಿಟ್ಟು ಮುಂದೆ ಅವುಗಳ ಸ್ಥಿತಿಗತಿಗಳ ಬಗ್ಗೆ ಪುನರ್ ಅವಲೋಕನ ಮಾಡಿ ಅನಂತರ ಬೇಕಿದ್ದರೆ, ತಪ್ಪಾಗಿದ್ದರೆ, ತಿದ್ದಿಕೊಳ್ಳಲು ತಿಳಿಸಬಹುದು.
ಇಂದಿನ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು, ಸರಾಗವಾಗಿ ಮಾತನಾಡಲು ಬರುತ್ತದೆ. ಇಂಗ್ಲೀಷ್ ಭಾಷೆ ಅವರ ಬದುಕಿನ ಎಲ್ಲಾ ಮಗ್ಗುಲನ್ನು ಆವರಿಸಿಕೊಂಡಿಲ್ಲ. ಇಂದು ಈ ರಾಜ್ಯದಲ್ಲಿ ಎಷ್ಟರ ಮಟ್ಟಿಗಾದರೂ ಕನ್ನಡ ಉಳಿದಿದ್ದರೆ, ಅದು ಗ್ರಾಮೀಣ ಭಾಗದಲ್ಲಿ ಮಾತ್ರ. ಪಟ್ಟಣದಲ್ಲಿ ಇಂಗ್ಲೀಷ್-ಕಂಗ್ಲೀಷ್ ಇತ್ಯಾದಿಯಾಗಿದೆ. ಪಟ್ಟಣದಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಲ್ಲಿಯವರು ಹೇಗೋ ಅಲ್ಲೇ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಕನ್ನಡ ಶಾಲೆ, ಕನ್ನಡ ಮಾಧ್ಯಮವೆಂದು ಓದುತ್ತಾ ಎಷ್ಟೇ ಪ್ರತಿಭಾವಂತರಾಗಿದ್ದರೂ, ಸರಾಗವಾಗಿ ಇಂಗ್ಲೀಷ್ ಬಾರದ ಏಕೈಕ ಕಾರಣದಿಂದ ಅನೇಕ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಮಾತ್ರ ಕಬ್ಬಿಣದ ಕಡಲೆ. ಪದವಿ ವಿದ್ಯಾರ್ಥಿಗಳು ಸಹಿತ ಇಂಗ್ಲೀಷ್‍ನಲ್ಲಿ ಪಾಸಾಗುವುದೋ ಒಂದು ಹರಸಾಹಸದ ಕೆಲಸವಾಗಿದೆ. ಹಾಗೆ ಪಾಸಾಗಲು ಅವರು ಅನೇಕ ಅಡ್ಡ ಮಾರ್ಗ ಹಿಡಿಯಲು ನೋಡುತ್ತಾರೆ. ಇದು ಇಂದಿನ ವಾಸ್ತವ ಬೆಳಕಿಗೆ ಬಂದ ಸತ್ಯ. ಇವರಿಗೆ ಇಂಗ್ಲೀಷ್ ಬರದಿರುವುದಕ್ಕೆ ಶಾಲೆ ಕಾಲೇಜುಗಳಲ್ಲಿ ಇಂಗ್ಲೀಷ್ ಕಲಿಸುವುದಿಲ್ಲವೆಂದಲ್ಲ. ಆ ವಾತಾವರಣವಿಲ್ಲ. ಅದ್ದರಿಂದ ಅವರು ಇಂಗ್ಲೀಷ್‍ನಲ್ಲಿ ಹಿಂದುಳಿದಿದ್ದಾರೆ. ಉಳಿದ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಓದಿ ಇಂಗ್ಲೀಷನ್ನು ಮಾತ್ರ ಇಂಗ್ಲೀಷ್‍ನಲ್ಲಿಯೇ ಬರೆ ಎಂದರೆ ಅವರಿಗೆ ಕಷ್ಟವಾಗಿಬಿಡುತ್ತದೆ. ಇದನ್ನು ತಪ್ಪಿಸಲು ಉಳಿದ ವಿಷಯಗಳನ್ನು ಇಂಗ್ಲೀಷ್ ನಲ್ಲಿಯೇ ಬೋಧಿಸಿ, ಕನ್ನಡವನ್ನು ಮಾತ್ರ ಕನ್ನಡದಲ್ಲಿ ಬೋಧಿಸಿದರೆ, ಪರಿಸ್ಥಿತಿ ಸುಧಾರಿಸಬಹುದು.
ವಾಸ್ತವ ಸತ್ಯವನ್ನು ಒಪ್ಪಿಕೊಳ್ಳುವುದು ಸೂಕ್ತ. ಇಂದು ಪದವಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಓದುವ ವಾಣಿಜ್ಯ ಓದುವ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಯಾವುದೇ ತೊಂದರೆ ಇಲ್ಲದೇ ತೇರ್ಗಡೆಯಾಗುತ್ತಾರೆ. ಕಾರಣ ಅವರು ಉಳಿದ ಎಲ್ಲಾ ವಿಷಯಗಳನ್ನು ಇಂಗ್ಲೀಷ್‍ನಲ್ಲಿಯೇ ಓದುತ್ತಿರುತ್ತಾರೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಳು ಉಳಿದೆಲ್ಲಾ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದುವುದರಿಂದ ಅವರ ಇಂಗ್ಲೀಷ್ ವಿಷಯದಲ್ಲಿನ ತೇರ್ಗಡೆಯ ಪ್ರಮಾಣ ಕಡಿಮೆ. ಹೀಗಾಗಿ ಅವರಿಗೆ ನೌಕರಿಯ ಅವಕಾಶಗಳು ತಪ್ಪುತ್ತಿವೆ. ಹೀಗಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದಾದರೆ, 6 ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪ್ರಾರಂಭಿಸಬೇಕಾಗುತ್ತದೆ. ನಮಗೆ ಇಂದು ಅಗತ್ಯವಾದುದು ಅನ್ನವೇ ವಿನ: ಮಾಧ್ಯಮವಲ್ಲ. ಆ ಕುರಿತು ಅನಗತ್ಯ ಗಲಾಟೆ ಬೇಕಿಲ್ಲ.
ರವೀಂದ್ರ ಭಟ್ ಕುಳಿಬೀಡು.
- Advertisement -
- Advertisement -
- Advertisement -
- Advertisement -