24.1 C
Sidlaghatta
Thursday, June 13, 2024

ಅನ್ವೇಷಣೆಯ ನಿರಂತರತೆ . . . . . . . .

- Advertisement -
- Advertisement -

ನ್ಯೂಟನ್ ಎಂಬ ವಿಜ್ಞಾನಿ ಗುರುತ್ವಾಕರ್ಷಣೆ ಕುರಿತು ಅನ್ವೇಷಣೆಯನ್ನು ಮಾಡಿದ್ದು ಮರದ ಮೇಲಿನಿಂದ ಸೇಬುಹಣ್ಣೊಂದು ನೆಲಕ್ಕೆ ಬಿತ್ತು ಎಂಬುದರಿಂದ ಎಂಬ ಮಾತಿದೆ. ಅದು ಆ ಕ್ಷಣದ ಅರಿವಿನ ಸ್ಪೋಟದಿಂದ ಹುಟ್ಟಿದ ಅನ್ವೇಷಣೆ. ಹೀಗೇ ಹಲವೊಂದು ಅನ್ವೇಷಣೆಗಳು ಥಟ್ಟನೆ ಹೊಳೆದ ಯೋಚನೆಗಳಿಂದಾಗಿ ರೂಪುಗೊಂಡಿದ್ದು. ಅನಂತರ ಕೂಡ ಅವರು ಆ ದಿಶೆಯಲ್ಲಿ ಅನ್ವೇಷಣೆಗಳನ್ನು ಮುಂದುವರಿಸಿದ್ದರ ಪರಿಣಾಮದಿಂದಾಗಿ ನಮಗೆ ಆ ಕುರಿತಾಗಿ ಸೂತ್ರಗಳು ಸಿಗುವಂತಾದದ್ದು. ಮಾನವ ಸ್ವಭಾವತಃ ಕುತೂಹಲವನ್ನು ಹೊಂದಿದ್ದು – ತನ್ನ ಕುತೂಹಲದ ತಣಿಕೆಗಾಗಿ ಪ್ರಯತ್ನಿಸುವುದರಿಂದಲೇ ಅನೇಕ ಅನ್ವೇಷಣೆಗಳು ಸಾಧ್ಯವಾದದ್ದು. ಹೊಸ ಹೊಸ ಅನ್ವೇಷಣೆಗಳ ಕುರಿತಾದ ತುಡಿತ ಮಾನವನ ಸಹಜ ಗುಣವೇ ಆಗಿದ್ದಿರುತ್ತದೆ. ಆದರೆ ಇಂಥ ಅನ್ವೇಷಣೆಗಳಿಗೆ ಪ್ರೇರಕವಾಗುವ ಸಂಗತಿಗಳಾವುವು ಎಂದು ಯೋಚಿಸಿ – ಚಾಲ್ತಿಗೆ ತಂದ ಮಾತುಗಳೆಂದರೆ – Necessity is the mother of invention. ಅವಶ್ಯಕತೆಯೇ ಅನ್ವೇಷಣೆಗೆ ಮೂಲ. ಹಾಗೇ Curiosity is the mother of invention. ಕುತೂಹಲವೇ ಅನ್ವೇಷಣೆಯ ಮೂಲ. Interest is the mother of invention – ಆಸಕ್ತಿಯೇ ಅನ್ವೇಷಣೆಯ ಮೂಲ. ಈ ಎಲ್ಲ ಮಾತುಗಳು ನಿಜ. ಆದರೆ ಎಲ್ಲಿಯವರೆಗೆ ಎಂಬುದೇ ಯಕ್ಷ ಪ್ರಶ್ನೆ.
ಅನ್ವೇಷಣೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಹೀಗಿದ್ದಾಗ ‘ಅವಶ್ಯಕತೆಯೇ ಅನ್ವೇಷಣೆಗೆ ಮೂಲ’ ಎಂಬ ತತ್ವ ಬಹುಶಃ ಹೆಚ್ಚು ಬಾಳಿಕೆಗೆ ಬರಲಾರದು. ಏಕೆಂದರೆ ಅವಶ್ಯಕತೆ ಪೂರೈಸಿದಾಕ್ಷಣ ಅನ್ವೇಷಣೆ ನಿಲ್ಲುವ ಸಾಧ್ಯತೆ ಇದೆ. ಅಗತ್ಯಕ್ಕನುಗುಣವಾಗಿ ಕೆಲಸವಾದರೆ ಅನಂತರ ಯಾರೂ ಆ ಕುರಿತು ಚಿಂತಿಸುತ್ತ ಹೋಗುವುದಿಲ್ಲ. ಇನ್ನೊಂದು ಅಗತ್ಯ ಎದುರಾದಾಗಲಷ್ಟೇ ಇನ್ನೊಂದರ ಅನ್ವೇಷಣೆಗೆ ತೊಡಗಬಹುದು! ಹಾಗೇ ತೃಪ್ತಿಪಡುವ ಸಂದರ್ಭವೇ ಅಧಿಕ. ನೀರು ಸೇದಲು ರಾಟೆ ಸಿಕ್ಕ ಕ್ಷಣ ಆ ಅವಶ್ಯಕತೆ ಪೂರ್ಣಗೊಂಡಂತೆ. ಅದನ್ನಷ್ಟು ಉತ್ತಮಗೊಳಿಸಲು ಚಿಂತಿಸಿದರೂ ನಡೆಯುತ್ತದೆ. ಬಿಟ್ಟರೂ ನಡೆಯುತ್ತದೆ ಎಂಬಂತ್ತಾದರೆ ಅನ್ವೇಷಣೆ ನಿರಂತರ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ. ಒಂದು ಹಂತದ ನಿಲುಗಡೆಗೆ ಬಂದು ತಲಿಪಿದಂತಷ್ಟೇ ಆಗಿಬಿಡಬಲ್ಲದು. ಇದೇ ರೀತಿಯಲ್ಲಿ ‘ಕುತೂಹಲವೇ ಅನ್ವೇಷಣೆಯ ಮೂಲ,’ ಎಂಬುದು ಕೂಡ. ಕುತೂಹಲ ತಣಿದ ಮರುಕ್ಷಣವೇ ಅನ್ವೇಷಣೆಯ ಅಗತ್ಯ ನಿಂತುಬಿಡಬಹುದು! ಒಂದು ಕೇವಲ ತಾತ್ಕಾಲಿಕ ಅನ್ವೇಷಣೆಯೇ ವಿನಃ ನಿರಂತರವಾದ ಪ್ರಕ್ರಿಯೆಯಲ್ಲ. ಹಾಗೇ ‘ಆಸಕ್ತಿಯೇ ಅನ್ವೇಷಣೆಯ ಮೂಲ’ಎಂಬ ಉಕ್ತಿ ಕೂಡ ಕಾಲವನ್ನಾಧರಿಸಿದ್ದು. ಆಸಕ್ತಿ ಕಡಿಮೆಯಾದಂತೆ ಅನ್ವೇಷಣೆಯ ಕುರಿತಾದ ತೀವ್ರತೆಯೂ ಕಡಿಮೆಯಾಗುತ್ತ ಸಾಗಲು ಸಾಧ್ಯ. ಹೀಗಿದ್ದಾಗ ಮೇಲೆ ಉಲ್ಲೇಖಿಸಿದ ಮೂರೂ ವ್ಯಾಖ್ಯೆಗಳಿಗೆ ಒಂದು ಮಿತಿ ದತ್ತವಾಗುತ್ತದೆ. ಅಂದರೆ ಈ ಎಲ್ಲ ಸಂದರ್ಭಗಳಲ್ಲೂ ಅನ್ವೇಷಣೆ ಎಂಬುದು ಆಯಾ ಕಾಲಕ್ಕೆ – ಆ ಕಾಲದ ಆಸಕ್ತಿಗೆ ಅನುಗುಣವಾಗಿ ಮಾತ್ರ ನಡೆಯುತ್ತದೆ. ಅಂದರೆ ಅನ್ವೇಷಣೆಯು ಮುಂದುವರೆಯುವುದಕ್ಕೆ ಸಾಧ್ಯವಾಗದೇ ಹೋಗುವ ಸಂದರ್ಭಗಳೇ ಅಧಿಕ. ಒಂದಾದ ಅನಂತರ ಇನ್ನೊಂದರ ಅನ್ವೇಷಣೆ ಅಥವಾ ಒಂದು ಅನ್ವೇಷಣೆಯ ಅನಂತರ ಅದೇ ಜಾಡಿನಲ್ಲಿ ಇನ್ನಷ್ಟು ಅನ್ವೇಷಣೆಗಳನ್ನು ಕೈಗೊಳ್ಳಬೇಕೆಂದಾದರೆ ಅದಕ್ಕೆ ಬದ್ಧವಾಗುವ ಮನಸ್ಥಿತಿಯೊಂದು ಪ್ರಾಪ್ತವಾಗಬೇಕು. ನಿರಂತರ ಹುಡುಕಾಟದ ಚಲನಶೀಲತೆ ಸದಾ ಜಾಗೃತವಾಗಿರಬೇಕು ಎಂತಾದರೆ ಅನ್ವೇಷಣೆಯ ಕುರಿತಾಗಿ ಅನ್ವೇಷಕನಿಗೆ ಒಂದು ತಲುಬಿರಬೇಕು – ಅದೊಂದು ದಿವ್ಯ ಉನ್ಮಾದವಾಗಬೇಕು ಅಥವಾ ಅನ್ವೇಷಣೆಯೇ ಒಂದು ಹುಚ್ಚು ಯಾ ಗೀಳಾಗಿರುವುದು ಅಗತ್ಯ. ಹಾಗಾಗಿ ಅನ್ವೇಷಣೆಯ ನಿರಂತರತೆಗೆ ಅಗತ್ಯವಾದದ್ದು ಆ ಕುರಿತು ಅನ್ವೇಷಕನಲ್ಲಿ ಸ್ಥಾಯಿಯಾಗಿರುವ – ಸದಾ ಜಾಗೃತವಾಗಿರುವ ತಲುಬಿನ ಸ್ಥಿತಿ. ಹಾಗಿಲ್ಲದೇ ಇದ್ದಲ್ಲಿ ಅನ್ವೇಷಣೆಯೂ ಕೇವಲ ಯಾಂತ್ರಿಕ ಕ್ರಿಯೆಯಾಗುವ ಸಾಧ್ಯತೆಯಿದೆ. ಅಲ್ಲಿ ಸೃಜನಶೀಲತೆಯ ದಿವ್ಯ ಅನುಪಸ್ಥತಿ ಏರ್ಪಡಬಹುದು. ದಿವ್ಯ ಧ್ಯಾನಸ್ಥ ಸ್ಥಿತಿಯೊಳಗೆ ಕ್ರಿಯಾಶೀಲತೆ ಏರ್ಪಡುತ್ತಿರಬೇಕು.
ವೈಜ್ಞಾನಿಕ ಆವಿಷ್ಕಾರಗಳಷ್ಟೇ ಅಲ್ಲದೇ ಕಲೆ ಮತ್ತು ಸಾಹಿತ್ಯದ ಸಂದರ್ಭಗಳಲ್ಲೂ ಅನ್ವೇಷಣೆಯ ನಿರಂತರತೆ ಅಗತ್ಯ. ಒಬ್ಬ ಕಲಾವಿದ ಒಂದೇ ನಾಟಕದ ಒಂದೇ ಪಾತ್ರವನ್ನು ಹಲವು ಬಾರಿ ಅಭಿನಯಿಸಿದಾಗಲೂ ಅದು ಪ್ರತಿ ಬಾರಿಗೂ ಬೇರೆ ಅಥವಾ ಭಿನ್ನವಾಗಿರಲು ಸಾಧ್ಯವಾಗುವುದು ಅವನ ತಲುಬಿಗನುಗುಣವಾಗಿಯೇ. ಕೆಲವೊಮ್ಮೆ ಅಂದಿನ ಅಮಲಿಗೆ ಅನುಗುಣವಾಗಿಯೂ ಇರಲು ಸಾಧ್ಯ. ಅಮಲು ಕೇವಲ ಮದ್ಯ ಮತ್ತಿತರ ಮತ್ತೇರುವುದರಿಂದ ಮಾತ್ರ ಉತ್ಪನ್ನವಾಗುವುದು ಎಂದಷ್ಟೇ ಭಾವಿಸಬೇಕಾಗಿಲ್ಲ. ಪಾತ್ರವೊಂದರಲ್ಲಿ ತನ್ನಷ್ಟಕ್ಕೆ ತಾನೇ ಮೈಮರೆಯುವುದೂ ಒಂದು ತಲುಬು. ನಮ್ಮ ಯಕ್ಷಗಾನದ ಕಲಾವಿದರಲ್ಲಿ ಕೆಲವರಿಗೆ ಅದೇ ಒಂದು ತಲುಬು. ಚಂಡೆ – ಮದ್ದಳೆಯ ಸದ್ದೇ ಅವರಲ್ಲಿ ಹೆಜ್ಜೆ ಹಾಕುವ ಉಮೇದನ್ನು ಹುಟ್ಟಿಸುತ್ತಿರುತ್ತದೆ. ಒಂದು ಪಾಲ್ಗೊಳ್ಳುವಿಕೆಯೇ ತಲುಬಾಗಿ – ಅದೊಂದು ದಿವ್ಯ ವ್ಯಸನವಾಗಲಿಕ್ಕೂ ಸಾಕು. ಕೇವಲ ಕಲಿತ ಲೆಕ್ಕಾಚಾರದೊಳಗೇ ಉಳಿದರೆ ಉತ್ತಮ ಕಲಾವಿದ ಆಗಬಹುದು ಆದರೆ ಶ್ರೇಷ್ಠ ದರ್ಜೆಯವನು ಎನ್ನಿಸಿಕೊಳ್ಳಲು ಆ ಕಲಿತ ಲೆಕ್ಕಾಚಾರವನ್ನೂ ಮಿಕ್ಕಿ ಮೀರುವ ಪ್ರಯತ್ನದಲ್ಲಿ ಸಫಲತೆ ಸಾಧ್ಯವಾಗಬೇಕಾದದ್ದು ಅಗತ್ಯ. ಇಂಥ ತಲುಬಿನಿಂದ ಹಲವು ಬಾರಿ ಮನೆಮಂದಿಗೆ ಮತ್ತು ಸುತ್ತಮುತ್ತಲಿನವರಿಗೆ ಕಿರಿ ಕಿರಿ ಹುಟ್ಟಬಹುದು. ಅವರೆಲ್ಲಾ ದೂಷಿಸಲೂಬಹುದು. ದಿನನಿತ್ಯದ ಮಾಮೂಲಿ ಬದುಕಿಗಿಂತ ಭಿನ್ನವಾದ ಕ್ಷಣದಲ್ಲಿ – ಅವನನ್ನೇ ಒಂದು ವಿಚಿತ್ರ ಪ್ರಾಣಿಯನ್ನಾಗಿಯೋ, ನಿಷ್ಪ್ರಯೋಜಕ ಘಟಕವೆಂತಲೋ, ಕಾಣುವಂತಾಗಲೂ ಸಾಧ್ಯವಿದೆ. ಬೇರೆ ಸಾಮಾನ್ಯರಿಗಿಂತ – ಅವರ ಸಾಮಾನ್ಯ ನಡಾವಳಿಕೆಗಳಿಗಿಂತ ಭಿನ್ನವಾದಲ್ಲಿ ಇಂಥದ್ದು ಸಹಜ. ಆದರೆ ಬೇರೆಯವರಿಗಿಂತ ಭಿನ್ನವಾಗದಿದ್ದಲ್ಲಿ – ಭಿನ್ನವಾದ ಬೇರೊಂದು ಬಗೆಯ ಅನ್ವೇಷಣೆ ಅಸಾಧ್ಯ. ಹೀಗೆ ಬೇರೊಂದು ಬಗೆಯ ಅನ್ವೇಷಣೆ ಎಷ್ಟರ ಮಟ್ಟಿಗೆ ಈ ಸಮಾಜಕ್ಕೆ ಒಳಿತನ್ನು ನೀಡುತ್ತದೆ ಎಂಬುದು ಬೇರೆಯದೇ ಆದ ಪ್ರಶ್ನೆ. ಕಲೆ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಯೋಚಿಸಿದಾಗ – ಸಾಮಾಜಿಕ ಒಳಿತು ಎನ್ನುವುದು ಅಪ್ರಸ್ತುತವೂ ಆಗಿಬಿಡಬಹುದು. ಅಂತರಂಗದ ಅನಾವರಣ ಪ್ರಕ್ರಿಯೆಯಲ್ಲಿ ಪ್ರಾದುರ್ಭವಿಸುವ ಸಾಹಿತ್ಯ ಅಥವಾ ಕಲೆಗೆ ಸಮಾಜಕ್ಕೆ ಅನ್ನವನ್ನು ನೀಡುವ ಸಾಮಥ್ರ್ಯವಿದೆ ಎಂದು ಭಾವಿಸಲಾಗದು. ಹಾಗಂತ ಅದು ವ್ಯರ್ಥವೆನ್ನಲೂ ಸಾಧ್ಯವಿಲ್ಲ. ಯಾಕೆಂದರೆ ಕೇವಲ ಅನ್ನವನ್ನು ತಿನ್ನುವುದಷ್ಟೇ ಬದುಕಲ್ಲ. ಅಂಥ ಮಿತಿಯೊಳಗಿನ ಬದುಕು ಬಹುಶಃ ನಿಜವಾದ ಬದುಕೂ ಕೂಡ ಅಲ್ಲ.
ಇದೇ ಲೇಖಕನ ಇತ್ತೀಚಿನ ಕವಿತೆ ‘ಕವಳದಂತೆ ಕವಿತೆ’ ಯಲ್ಲಿ ಹೇಳಿದ ಹಾಗೆ ‘ನಿಜವಾದ ತಲುಬುಳ್ಳವ ಮಾತ್ರ ಅಸಲಿ ಕಸುಬಿ’. ಇಲ್ಲಿ ‘ಅಸಲಿ’ ಎಂಬುದು ‘ನಕಲಿ’ ಎಂಬುದರ ವಿರುದ್ಧಾರ್ಥಕ ಪದವಲ್ಲ. ಅಸಲಿ ಎಂದರೆ ‘ಅಪ್ಪಟ’ ಎಂಬುದರೊಟ್ಟಿಗೆ ಕೇವಲ ಕಲಿತದ್ದನ್ನು ಹಾಗೇ ಒಪ್ಪಿಸುವ ಗಿಳಿಪಾಠವಲ್ಲ. ಅನುಕರಣೆಯಲ್ಲ ಎಂಬ ಅರ್ಥದಲ್ಲಿ ಗ್ರಹಿಸುವುದು ಸಾಧ್ಯವಾಗಬೇಕು. ತಲುಬೆನ್ನುವುದು ಕೇವಲ ನಿಶೆಯಲ್ಲ. ನಿಶೆಯಲ್ಲಿ ನಿಷ್ಕ್ರಿಯಗೊಳ್ಳುವುದಲ್ಲ. ಬದಲಿಗೆ ಕ್ರಿಯಾಶೀಲ ಧ್ಯಾನಸ್ಥ ಸ್ಥಿತಿ. ಅನ್ವೇಷಣೆಯ ಮೂಲ ಬಿಂದು. ಅಂಥ ತಲುಬು ಸದಾ ಇದ್ದಾಗ ಸದಾ ಹೊಸತು -ಹೊಸತರ ಹೊಸ ಹೊಸ ಹೊಳಹುಗಳು ಜನ್ಮ ತಾಳಲು ಸಾಧ್ಯ ಮತ್ತು ಅಂಥ ಹೊಳಹುಗಳ ಮೂಲಕವಾಗಿ ಅನ್ವೇಷಣೆಯ ಅನಂತ ಮಾರ್ಗಗಳು ಗೋಚರಿಸುತ್ತಾ ಹೋಗಲು ಸಾಧ್ಯವೆಂದು ಘೋಷಿಸಿದರೆ ಅದು ವ್ಯಾಖ್ಯೆಯಾದೀತೆ ವಿನಃ ಅಪವಾದವಾಗಲಾರದು. ಯಾವುದೇ ವ್ಯಾಖ್ಯೆಗಾದರೂ ಅಪವಾದವಿರುವುದು ಸಹಜ. ಹಾಗಂತ ಅಪವಾದಗಳನ್ನೇ ವ್ಯಾಖ್ಯೆಗಳೆಂದು ಕರೆಯಲಾಗುವುದಿಲ್ಲ.
ಅನ್ವೇಷಣೆಯೊಂದರ ಮೂಲ ಬೇರೆ. ಅನ್ವೇಷಣೆಯೊಂದರ ನಿರಂತರತೆ ಬೇರೆ. ಯಾವುದೇ ಅನ್ವೇಷಣೆ ಒಂದು ಘಟ್ಟವನ್ನು ತಲುಪಿದಾಕ್ಷಣ ಸ್ತಬ್ಧವಾದರೆ – ಅದು ಒಂದು ಉದ್ದೇಶಕ್ಕೆ ಮಾತ್ರ ಮಿತಿಗೊಂಡಂತೆ ಅಥವಾ ಒಂದು ಕುತೂಹಲದ ತಣಿಕೆಗೆ ಮಾತ್ರ ಸೀಮಿತಗೊಂಡಂತೆ. ಹಾಗೇ ಒಂದು ಮಿತಿಗೆ ಮಾತ್ರ ಸೀಮಿತವಾಗದೇ ಸದಾ ಮುಂದುವರೆಯುತ್ತಲೇ ಸಾಗುತ್ತಿರಬೇಕೆಂಬ ಆಶಯವನ್ನು ಹೆಣೆದಿದ್ದರೆ ಅದಕ್ಕೆ ಖಂಡಿತವಾಗಿಯೂ ತಲುಬು ಇರಲೇಬೇಕು. ಅದೇ ಹಗಲು – ರಾತ್ರಿ ಕಾಡುತ್ತ ಕಾಡುತ್ತ ಅತೃಪ್ತಿಯಿಂದ ತೃಪ್ತಿ ಪಡೆಯಬೇಕೆಂಬ ಹಪ ಹಪಿಕೆ ಜೀವಂತವಾಗಿರುವಷ್ಟು ಕಾಲವೂ ಅದರ ನಿರಂತರತೆ ಸಾಧ್ಯವಾಗುತ್ತದೆ. ಇದೇ ದೃಷ್ಟಿಯಿಂದಲೇ ಇರಬೇಕು ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ‘ತೃಪ್ತಿಯೆಂದರೆ ಸಾವು. ಅತೃಪ್ತಿಯೆಂದರೆ ಬದುಕು.’ ಒಳಗುದಿಯೊಂದು ಸದಾ ಜಾಗೃತವಾಗಿದ್ದರೆ ಅಥವಾ ಅದನ್ನಷ್ಟು ಜಾಗೃತವಾಗಿಟ್ಟುಕೊಳ್ಳಬೇಕೆಂದು – ಹಿಡಿದದ್ದನ್ನಷ್ಟು ಮುಗಿಸುವುದಷ್ಟೇ ಅಲ್ಲದೇ ಮುಂದೇನು? ಮುಂದೇನು? ಎಂದು ಪ್ರಶ್ನಿಸಿಕೊಳ್ಳುತ್ತಲೇ – ಉತ್ತರಗಳನ್ನು ಕಂಡುಕೊಳ್ಳುತ್ತಲೇ ಮತ್ತೆ ಮುಂದುವರಿಯುವ ಮನುಷ್ಯನ ತಲುಬು – ಭವಿಷ್ಯದಲ್ಲಿ ಮತ್ತಷ್ಟು – ಮಗದಷ್ಟು ಆವಿಷ್ಕಾರಗÀಳಿಗೆ ಇಂಬುಕೊಡುವ ಕ್ರಿಯಾಶಕ್ತಿಯಾಗಬಹುದು. ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ ‘ತಲುಬು’ ಬೇರೆ ‘ತೆವಲು’ ಬೇರೆ. ಒಂದು ಧನಾತ್ಮಕವಾದರೆ ಇನ್ನೊಂದು ಋಣಾತ್ಮಕ.
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!