31.4 C
Sidlaghatta
Tuesday, April 16, 2024

ಗುಣಮಟ್ಟ ಎಲ್ಲಿಂದ ಬರುತ್ತದೆ?

- Advertisement -
- Advertisement -

ನಿರಂತರ ಗುಣಮಟ್ಟದ ಅಭಿಯಾನ ಇಂದು ಎಲ್ಲೆಡೆ ನಡೆಯುತ್ತಿದೆ. ಪದವಿ ಶಿಕ್ಷಣ ಸಂಸ್ಥೆಗಳು ಸದಾಗುಣ ಮಟ್ಟ/ಉತ್ಕøಷ್ಟತೆ ಸಾಧಿಸುವತ್ತ ನಿರಂತರ ಪ್ರಯತ್ನದಲ್ಲಿ ತೊಡಗಿರಬೇಕೆಂಬ ಸದಾಶಯ ಸರಕಾರ ಮತ್ತು ಇಲಾಖೆಗೆ ಇದೆ. ಆದರೆ ಕೇವಲ ಆಶಯಗಳು ಫಲನೀಡಬಲ್ಲದೇ ಎಂಬುದೇ ಪ್ರಸ್ತುತ ಪ್ರಶ್ನೆ.
ಉನ್ನತ ಶಿಕ್ಷಣ ಜನಸಾಮಾನ್ಯರಿಗೂ ಸಿಗುವಂತಾಗಬೇಕು. ತಾಲ್ಲೂಕು ಹೋಬಳಿ ಮಟ್ಟದ ವಿದ್ಯಾರ್ಥಿಗಳ ಕೈಗೆ ಉನ್ನತ ಶಿಕ್ಷಣ ಎಟಕುವಂತಾಗಬೇಕು ಅವರ ವಿದ್ಯಾಭ್ಯಾಸ ಅರ್ಧದಲ್ಲೇ ನಿಲ್ಲಕೂಡದು ಎಂಬ ಕಳಕಳಿಯಿಂದ ನಮ್ಮ ಘನ ಸರಕಾರ ರಾಜ್ಯದ ಎಲ್ಲ ತಾಲ್ಲೂಕು ಕೆಂದ್ರಗಳಲ್ಲಷ್ಟೇ ಅಲ್ಲದೆ ಹೋಬಳಿ ಮಟ್ಟದಲ್ಲೂ ಪದವಿ ಕಾಲೇಜನ್ನು ಪ್ರಾರಂಭಿಸಿದ್ದು, ಬಹುತೇಕ ಕಡೆಗಳಲ್ಲಿ ಕಟ್ಟಡಗಳೂ ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿವೆ. ಇಷ್ಟೆಲ್ಲ ಬಿ.ಎ., ಬಿ.ಕಾಂ., ಬಿ.ಬಿ.ಎಂ. ಇತ್ಯಾದಿ ಕೋರ್ಸ್‍ಗಳು ಪ್ರಾರಂಭವಾಗಿ ಬಹಳಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲು ಪ್ರವೇಶಾತಿಯನ್ನು ಪಡೆದದ್ದು ನಿಜ.
ಆದರೆ ಕಾಲೇಜುಗಳನ್ನು ಪ್ರಾರಂಭಿಸಲಿಕ್ಕೆ ತೋರಿದ ಉತ್ಸಾಹವನ್ನು ಕಳಕಳಿಯನ್ನು ಆ ಮೇಲೆ ಅವುಗಳ ನಿರ್ವಹಣೆಯಲ್ಲಿ ತೋರುವುದಕ್ಕೆ ಸಾಧ್ಯವಾಗದ್ದು–ಗುಣಮಟ್ಟದ ಶಿಕ್ಷಣ ನೀಡುವಲ್ಲಿ-ದೊಡ್ಡ ಅಡಚಣೆಯಾಗಿದ್ದು ಒಂದೆಡೆಯಾದರೆ-ಒಟ್ಟಾರೆ ಪದವಿಗೆ ಸೇರಿರುವುದಷ್ಟೇ ತಮ್ಮ ಕೆಲಸವೆಂದು ಭಾವಿಸಿ ಓಡಾಡುವ ವಿದ್ಯಾರ್ಥಿ ಸಮುದಾಯ ಇನ್ನೊಂದೆಡೆ.
ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ-ಕಛೇರಿ ಸಿಬ್ಬಂದಿಗಳ ಕೊರತೆ-ಕೊಠಡಿಗಳ ಕೊರತೆ ಅಷ್ಟೇ ಏಕೆ ಕುಡಿಯುವ ನೀರಿಗೂ ತತ್ವಾರ-ಶೌಚಾಲಯಗಳ ಸ್ಥಿತಿಯೂ ಸರಿ ಇರದಿರುವ ಸಂದರ್ಭಗಳಲ್ಲಿ-ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯೇ ಬತ್ತುವ ಸಾಧ್ಯತೆ ಇದೆ. ಶೈಕಣಿಕ ವಾತಾವರಣ-ಕನಿಷ್ಟ ಮೂಲಭೂತ ಸೌಕರ್ಯಗಳು ದೊರಕದಿದ್ದರೆ-ಯಾವುದೇ ವಿದ್ಯಾರ್ಥಿಗೆ ಅಲ್ಲಿ ಇರುವುದೇ ಕಷ್ಟವಾಗಬಹುದು. ಹೀಗಾದರೆ ಅದರ ನೇರ ಪರಿಣಾಮ ಶಿಕ್ಷಕರ ಮೇಲೂ ಆಗುತ್ತದೆ. ಬಂದರೆ ಬಂದರು-ಪುರುಸೋತ್ತು ಇದ್ದಾಗಷ್ಟೇ ಬಂದು ಹೋಗುವ – ಕಲಿಕೆಯನ್ನು ಒಂದು ಫ್ಯಾಶನ್ನಾಗಿ ನೋಡಲು ಹತ್ತಿದಾಗ ಶಿಕ್ಷಕರು ಪಾಠ ಹೇಳಲು ಹೋದರೆ ಕೊಠಡಿಗಳು ಖಾಲಿ-ಖಾಲಿ ಬೆಳಿಗ್ಗೆ ಇದ್ದವರು ಮಧ್ಯಾಹ್ನ ಮೇಲೆ ನಾಪತ್ತೆ, ಹೀಗೇ ದಿನನಿತ್ಯವೂ ನಡೆಯ ಹತ್ತಿದಾಗ-ಶಿಕ್ಷಕರು ಇದನ್ನು ನೋಡಿ ನೋಡಿ ಬೇಸತ್ತು ಇದ್ದ-ಬದ್ದ ಉತ್ಸಾಹವನ್ನು ಕಳೆದುಕೊಳ್ಳುವ ಹಂತ ತಲುಪಿಬಿಡಬಹುದು. ಹೀಗಾದರೆ ಗುಣಮಟ್ಟ ಹೇಗೆ ಸುಧಾರಿಸಲು ಸಾಧ್ಯ?
ಕೇವಲ ಶೈಕ್ಷಣಿಕ ಸಂಸ್ಥೆಗಳ ಸಂಖ್ಯಾಬಲವಾಗಲಿ ಅವುಗಳಲ್ಲಿ ಅಭ್ಯಾಸಿಸಲು ಹೆಸರನ್ನು ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯಾಬಲವಾಗಲಿ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ. ಬದಲಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ವಾತಾವಣದ ನಿರ್ಮಿತಿ ಇಂದಿನ ತುರ್ತಾದರೆ, ಗುಣಮಟ್ಟದ ಏರಿಕೆ ತನ್ನಿಂದ ತಾನೇ ಸಾಧ್ಯವಾಗಬಹುದು. ಇದಕ್ಕೆ ಅಗತ್ಯವಾದ ಕಟ್ಟಡ-ಕೊಠಡಿಗಳು-ಶೌಚಾಲಯ-ಶುದ್ಧ ಕುಡಿಯುವ ನೀರು-ಗಾಳಿ-ಬೆಳಕು ಸರಿ ಇರುವ ವಾಚನಾಲಯ-ಗ್ರಂಥಾಲಯ ಮತ್ತು ಚಿಕ್ಕದಾದರೂ ಸಾಕಷ್ಟು ಚೆನ್ನಾಗಿರುವ ಆಟದ ಮೈದಾನ ಇವನ್ನು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಬೋಧನೆಗೆ ಅಗತ್ಯವಾದ ಉಪನ್ಯಾಸಕರನ್ನು ನೇಮಿಸುವ ಕೆಲಸವಾಗಬೇಕು. ಬಹಳಷ್ಟು ಕಡೆಗಳಲ್ಲಿ ಹಂಗಾಮಿ ನೇಮಕಾತಿಯ ಮೇಲೆ ಬೋಧಕ ಸಿಬ್ಬಂದಿಗಳು (ಅವರ ಸಂಖ್ಯೇಯೇ ಅಧಿಕ) ಕರ್ತವ್ಯ ನಿರ್ವಹಿಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಪಾಠಗಳು ನಡೆದರೂ ಅದು ವ್ಯವಸ್ಥಿತವಾಗಿ ನಡೆಯುವುದು ಅನುಮಾನ. ಅಲ್ಲಿ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಇರಲು ಅವರುಗಳು ಅವರವರ ಅನುಕೂಲದ ದಿನಗಳಂದು ಮಾತ್ರ ಬಂದು ಹೋಗುವುದರಿಂದ ವಿದ್ಯಾರ್ಥಿಗಳಿಗಾಗುವ ತೊಂದರೆಗಳಿಗೆ ನಿರ್ದಿಷ್ಟ ಪರಿಹಾರ ಸೂಚಿಸುವವರು ಸಕಾಲದಲ್ಲಿ ಲಭ್ಯವಾಗದೆ ಹೋಗುವ ಸಂದರ್ಭಗಳೇ ಅಧಿಕ.
ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟದ ಸಮಸ್ಯೆ ಕಾಲೇಜುಗಳಲ್ಲಿ ಕ್ಯಾಂಟೀನ್ ಇರುವುದಿಲ್ಲ-ಇದ್ದರೂ ಎಲ್ಲರಿಗೂ ಹಣಕೊಟ್ಟು ಊಟಮಾಡುವ ಆರ್ಥಿಕ ಬಲ ಇರುವುದಿಲ್ಲ. ತಿಂಡಿ-ಊಟ ತಂದುಕೊಂಡರೆ ಕುಳಿತು ತಿನ್ನಲೂ ವ್ಯವಸ್ಥೆ ಇರದಿದ್ದರೆ ಅವರು ಮಧ್ಯಾಹ್ನವಾಗುತ್ತಲೇ ಜಾಗ ಖಾಲಿ ಮಾಡಲು ಪ್ರಾರಂಭಿಸುತ್ತಾರೆ. ಕೆಲವೆಡೆ ಬಸ್‍ನ ಸಮಸ್ಯೆಯೂ ಇರುವುದರಿಂದ ಬೇಗ ಊರು ಸೇರಲು ವಿದ್ಯಾರ್ಥಿಗಳು ಬಯಸುತ್ತಾರೆ. ಹಾಸ್ಟೆಲ್ ವ್ಯವಸ್ಥೆ ಕೂಡ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ಎಂಬುದೇನೋ ಒಪ್ಪತಕ್ಕದೇ, ಆದರೆ ವಿದ್ಯಾರ್ಥಿಗಳ ಅನುಕೂಲಕ್ಕೆ ಆದಷ್ಟು ಹೆಚ್ಚು ಪ್ರಯತ್ನಪಟ್ಟರೆ ತರಗತಿಗಳಲ್ಲಿ ಅವರು ಇರಬಹುದು. ಇದ್ದರೆ ಪಾಠ ಪ್ರವಚನಗಳು ಜರುಗಲು ಸಾಧ್ಯ ಖಾಲಿ ಬೆಂಚು ಡೆಸ್ಕುಗಳಿಗೆ ಏನೂ ಮಾಡಲಾಗುವುದಿಲ್ಲ.
ಹೀಗಾಗಿ ಗುಣಮಟ್ಟ ಬರಬೇಕು ಎಂದು ಪ್ರಾಮಾಣಿಕವಾಗಿ ಆಶಿಸುವುದಾದಲ್ಲಿ ಕಾಲೇಜು ನಡೆಯುವ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ಪಾಠ-ಪ್ರವಚನಗಳು ಕಡ್ಡಾಯವಾಗಿ ನಡೆಯುವಂತಾಗಬೇಕು. ವಿದ್ಯಾರ್ಥಿಗಳೂ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಿ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಆದಾಗ ಮಾತ್ರ-ವಿದ್ಯಾರ್ಥಿಗಳ-ಶಿಕ್ಷಕರ ಮತ್ತು ಶೈಕ್ಷಣಿಕ ಸಂಸ್ಥೆಯ ಗುಣಮಟ್ಟದಲ್ಲಿ ಏರಿಕೆಯಾಗಬಹುದು.
ಇಲ್ಲಿ ಜವಾಬ್ದಾರಿ ಒಂದು ಕಡೆಯಿಂದ ಸರಕಾರದ್ದಾಗಿದ್ದು ಅದು ಮೂಲಭೂತ ಸೌಕರ್ಯ ಮತ್ತು ವಾತಾವರಣ ಕಲ್ಪಿಸಲು ಮುಂದಾಗಬೇಕಿದೆ. ಇನ್ನೊಂದು ಕಡೆಯಿಂದ ಇದ್ದ ವ್ಯವಸ್ಥೆಯನ್ನೇ ಆದಷ್ಟು ಒಪ್ಪ ಓರಣದಿಂದ ಇರುವಂತೆ ನೋಡಿಕೊಳ್ಳುತ್ತಲೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತು ಉತ್ಸಾಹವನ್ನು ತುಂಬುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಅವರಿಗೆ ಸಿಗುವ ಎಲ್ಲ ಸೌಲತ್ತುಗಳು (ಬೇರೆ ಬೇರೆ ಸ್ಕಾಲರ್‍ಶಿಪ್‍ಗಳನ್ನು ಒಳಗೊಂಡತೆ) ಸಕಾಲದಲ್ಲಿ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಸಂಸ್ಥೆಗೆ ಸಂಬಂಧಿಸಿದವರೆಲ್ಲ ಮಾಡಿದರೆ ಮಾತ್ರ ಒಂದು ಹಂತದ ಉದ್ಧಾರವಾದರೂ ಸಾಧ್ಯವಾಗಬಹುದು.
ಊರಿನಲ್ಲೇ ಕಾಲೇಜಿದೆ ಎಂಬ ಏಕೈಕ ಕಾರಣಕ್ಕಾಗಿ ಓದಲು ಆಸಕ್ತಿ ಇಲ್ಲದಿದ್ದರೂ ಸೇರಿ ಓದುವವರಿಗೂ ಅಡಚಣೆಗಳನ್ನು ಮಾಡುತ್ತ ಕೇವಲ ಕಾಲಹರಣಕ್ಕೆ ಶೋಕಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೇನೂ ಕೊರತೆಯಿರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಿಳಿ ಹೇಳುವ ಕೆಲಸವು ಇಂದಿನ ಅಗತ್ಯ ಆದ್ಯತೆ ಎಂದು ಭಾವಿಸಬೇಕು. ಅಷ್ಟೆ ಅಲ್ಲದೆ ಅಂಥ ಕೆಲವರಿಂದ, ಒಟ್ಟಾರೆ ವಾತಾವರಣ ಕಲುಷಿತವಾಗುತ್ತದೆ ಎಂದಾಗ ಅವರನ್ನು ಯಾವುದೇ ಮುಲಾಜಿಗೊಳಗಾಗದೆ ಹೊರಗಿಡುವ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಅವರಲ್ಲಿ ಅನೇಕರು ಅನೇಕ ರೀತಿಯ ಪ್ರಭಾವಗಳನ್ನು ಹೊಂದಿರುವ ಕಾರಣದಿಂದ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಎಲ್ಲರೂ ಸುಮ್ಮನಿರುವ ಕಾರಣಕ್ಕೆ ಗುಣಮಟ್ಟದ ಕುಸಿತವನ್ನು ಮೌನವಾಗಿ ವೀಕ್ಷಿಸುವಂತಾಗಿದ್ದು ಕೂಡ ಪ್ರಸ್ತುತ ದುರಂತಗಳಲ್ಲಿ ಒಂದು.
ವಿದ್ಯಾರ್ಥಿಗಳು ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗುವುದು ಮತ್ತು ಪಾಠ-ಪ್ರವಚನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಸಾಧ್ಯವಾದರೆ ಅನಂತರ ಹೊಸ-ಹೊಸ ರೀತಿಯ ಪ್ರಯೋಗಗಳಿಗೆ ಪ್ರಯತ್ನಿಸಬಹದು. ಕಂಪ್ಯೂಟರ್ ಬಳಕೆ, ಡಿಜಿಟಲ್ ಬೋರ್ಡ್‍ಗಳ ಬಳಕೆ ಮಲ್ಪಿಮೀಡಿಯಾ ಸೆಂಟರ್ ಬಳಕೆ ಎಲ್ಲಾ ಹಂತ-ಹಂತವಾಗಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಬೇಕಾದದ್ದಕ್ಕೆ ಹಕ್ಕೊತ್ತಾಯ ಹೇರದ ಹೊರತೂ ಉಪನ್ಯಾಶಕರೂ ಕ್ರಿಯಾಶೀಲರಾಗುವುದು ಕಷ್ಟ. ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚುವುದು ಮತ್ತು ವೇಳಾಪಟ್ಟಿ ಅನುಗುಣವಾಗಿ ತರಗತಿಗಳು ನಡೆಯುವುದು ಸಾಧ್ಯವಾದಲ್ಲಿ ಗುಣಮಟ್ಟದ ಸಮಸ್ಯೆ ಅರ್ಧಕ್ಕರ್ಧ ಬಗೆ ಹರಿದಂತೆಯೇ ಸರಿ. ಇಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪ್ರತಿ ಕಾಲೇಜಿಗೂ ಸಾಕಷ್ಟು ಹಣ ಒದಗಿಸುತ್ತಿದೆ. ಅವುಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಲೇಜು ಆಡಳಿತ ಮಂಡಳಿಯದ್ದೂ ಹೌದು. ಕಾಲೇಜು ಅಭಿವೃದ್ಧಿ ಮಂಡಳಿ ಕೇವಲ ನಾಮಕಾವಸ್ತೆ ಆಗಿದ್ದಲ್ಲಿ ಅವರ ಊರಿನ ಸಂಸ್ಥೆಯೇ ಅಭಿವೃದ್ಧಿಯಿಂದ ವಂಚಿತವಾಗುತ್ತದೆ. ತಮ್ಮ ಮಕ್ಕಳ ಅಭ್ಯುದಯಕ್ಕೆ ಅವರು ಸ್ಪಲ್ಪವಾದರೂ ಕಾಳಜಿ ತೋರುವಂತಾದರೆ (ರಾಜಕೀಯ ಮಾಡುವುದನ್ನು ಬಿಟ್ಟು) ಸ್ಥಳೀಯ ಮಟ್ಟದಲ್ಲೇ ಪರಿಹರಿಸಬಹುದಾದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ.
ಆದರೂ ನಿರಾಸೆಯಿಂದ ಕೈ ಚೆಲ್ಲಿ ಕುಳಿತುಕೊಳ್ಳುವುದು ಸಲ್ಲದು. ನಿಜವಾಗಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯ ರೂಪಿಸುವ ರೂವಾರಿಗಳಾಗಲು ಪ್ರಾಂಶುಪಾಲರನ್ನು ಒಳಗೊಂಡತೆ ಸಂಸ್ಥೆಯ ಸಿಬ್ಬಂದಿವರ್ಗ ಶ್ರಮಿಸಿದರೆ ಅವರೇ ಖುದ್ದಾಗಿ ಕಿಡಿಗೇಡಿಗಳಿಂದ ದೂರಾಗಿ ಹೊಸ ಮಾರ್ಗ ಸೃಷಿಸಿಕೊಳ್ಳುವಂತಾದಾಗ ಮಾತ್ರ ಗುಣಮಟ್ಟಕ್ಕೆ ಅರ್ಥ ಪ್ರಾಪ್ರವಾಗಬಹುದು. ಯಾವುದಕ್ಕೂ ಇಚ್ಛಾಶಕ್ತಿ ಬೇಕು.
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!