ಗುಣಮಟ್ಟದ ಹಾಲು ಉತ್ಪಾದನೆ ಮಾಡದಿದ್ದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸಕ್ಕೆ ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಗುಣಮಟ್ಟದ ಹಾಲಿಗೆ ಮಾತ್ರವೇ ಸರ್ಕಾರವು ಪ್ರೋತ್ಸಾಹ ಧನವನ್ನು ವಿತರಿಸಲಿದ್ದು ಕಳಪೆ ಗುಣಮಟ್ಟದ ಹಾಲಿಗೆ ಸಿಗುವುದಿಲ್ಲ. ಹಾಗಾಗಿ ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡಲು ಸಹಕಾರ ಸಂಘದ ಕಾರ್ಯದರ್ಶಿಗಳು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆಎಂದರು.
ಹಾಗಾಗಿಯೆ ಕಾಲ ಕಾಲಕ್ಕೆ ಹೈನುಗಾರರು ಸೇರಿದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಬೇರೆ ಬೇರೆ ರಾಜ್ಯದ ಹಾಗೂ ನಮ್ಮದೇ ರಾಜ್ಯದ ಇತರೆ ಅಭಿವೃದ್ದಿ ಶೀಲ ಡೇರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿಅನುಷ್ಟಾನಗೊಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲ ಕಾರ್ಯದರ್ಶಿಗಳು ಪ್ರವಾಸ ಕಾಲದಲ್ಲಿ ಎಲ್ಲವನ್ನು ತಿಳಿದುಕೊಂಡು ಬರಬೇಕೆಂದು ಮನವಿ ಮಾಡಿದರು.
ಕೋಚಿಮುಲ್ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್ ಮಾತನಾಡಿ, ೫೦ ಮಂದಿ ಕಾರ್ಯದರ್ಶಿಗಳನ್ನು ೭ ದಿನಗಳ ಕಾಲ ನೆರೆಯ ಆಂದ್ರಪ್ರದೇಶದ ವಿಶಾಖ ಡೈರಿ ಸೇರಿದಂತೆ ವಿವಿಧ ಡೈರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ.
ಅಲ್ಲಿ ಹೈನುಗಾರಿಕೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಹೇಗೆ ಮಾಡಬೇಕು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಮಾಡುವುದು ಹೇಗೆಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ನಿಮ್ಮ ಜತೆ ನಮ್ಮ ಇಲಾಖೆಯಅಧಿಕಾರಿಗಳು ಆಗಮಿಸಲಿದ್ದು ಅವರೊಂದಿಗೆ ಅಲ್ಲಿನ ಡೇರಿಯ ಅಧಿಕಾರಿ, ಸಿಬ್ಬಂದಿಯೂ ನಿಮಗೆ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ ಎಂದರು.
ಕೋಚಿಮುಲ್ನ ಸ್ಥಳೀಯ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಹೆಚ್.ಎಸ್.ಉಮೇಶ್ರೆಡ್ಡಿ, ಎಂ.ಮಂಜುನಾಥ್, ಟಿ.ಶ್ರೀನಿವಾಸ್, ಟಿ.ಎಂ.ಮುನೇಗೌಡ, ಸಂತೋಷ್ಕುಮಾರ್, ಹಾಲು ಉತ್ಪಾಧಕರ ಸಹಕಾರ ಸಂಘಗಳ ನೌಕರರ ಅಧ್ಯಕ್ಷ ಬೋದಗೂರು ಚಂದ್ರೇಗೌಡ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -