ಮುಂದಿನ ದಿನಗಳಲ್ಲಿ ಆಧಾರ್ ಪ್ರಮುಖ ದಾಖಲೆಯಾಗಿ ಎಲ್ಲರಿಗೂ ಅತ್ಯಗತ್ಯವಾಗಲಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ.79 ರಷ್ಟು ಮಾತ್ರ ಆಧಾರ್ ನೋಂದಣಿಯಾಗಿದೆ. ಹೀಗಾಗಿ ಜನರ ಅನುಕೂಲಕ್ಕಾಗಿ ನಗರದಲ್ಲಿ ಆಧಾರ್ ಅದಾಲತ್ ನಡೆಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಧಾರ್ ಜಿಲ್ಲಾ ಸಂಯೋಜಕ ಮಂಜುನಾಥ್ ತಿಳಿಸಿದ್ದಾರೆ.
ತಾಲ್ಲೂಕು ಕಚೇರಿಯ ಬಳಿಯ ಕಂದಾಯ ಭವನದಲ್ಲಿ ಸೋಮವಾರ ಇ – ಆಡಳಿತ ಬೆಂಗಳೂರು ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುತ್ತಿರುವ ಆಧಾರ್ ಅದಾಲತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ಐದು ದಿನಗಳ ಕಾಲ ಈ ಆಧಾರ್ ಅದಾಲತ್ ನಡೆಯಲಿದೆ. ಈ ಹಿಂದೆ ಆಧಾರ್ ನಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ಆಧಾರ್ ನೋಂದಣಿ ಮಾಡಿಸದಿದ್ದವರು ಈ ಆದಾಲತ್ ನಲ್ಲಿ ನೋಂದಣಿ ಮಾಡಿಸಲು ಸುವರ್ಣಾವಕಾಶ ಎಂದರು. ಈ ಹಿಂದೆ ಆಧಾರ್ ನೋಂದಣಿ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಆಧಾರ್ ಸಿಗದಿದ್ದವರೂ ಮತ್ತೊಮ್ಮೆ ಆಧಾರ್ ನೋಂದಣಿ ಮಾಡಿಸಬೇಕು. ಅಲ್ಲದೆ, ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕದ ತಿದ್ದುಪಡಿಗಳ ಅವಶ್ಯವಿದ್ದಲ್ಲೂ ಅದಾಲತ್ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕಿದೆ ಎಂದರು.
ಎಲ್ಲರಿಗೂ ಆಧಾರ್ ಸೌಲಭ್ಯ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ತಾಲ್ಲೂಕಿನ ವ್ಯಾಪ್ತಿಯಲ್ಲಿ ವೃದ್ಧರು, ಅಂಗವಿಕಲತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅವರ ಮನೆಗೇ ತೆರಳಿ ಆಧಾರ್ ನೋಂದಣಿ ಮಾಡಿಸಲಾಗುವುದು ಎಂದು ವಿವರಿಸಿದರು.
- Advertisement -
- Advertisement -
- Advertisement -