ಗ್ರಾಮ ವಿಕಾಸದ ಧ್ಯೇಯದೊಂದಿಗೆ ಕಾಲ್ನಡಿಗೆಯ ಮೂಲಕ ದೇಶದಾಧ್ಯಂತ ಸಂಚರಿಸುತ್ತಿರುವ ಆರ್‍ಎಸ್‍ಎಸ್ ನ ಮಾಜಿ ಆಖಿಲ ಭಾರತ ಸೇವಾ ಪ್ರಮುಖ್ ಸೀತಾರಾಮ ಕೆದಿಲಾಯರ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಗುರುವಾರ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮಕ್ಕೆ ಬಂದು ತಲುಪಿದೆ.
ಗ್ರಾಮಕ್ಕೆ ಪಾದಯಾತ್ರೆ ಬರುತ್ತಿದ್ದಂತೆ ಗ್ರಾಮಸ್ಥರು ಹಾಗು ಶಾಲಾ ಮಕ್ಕಳು ಅವರನ್ನು ಬರಮಾಡಿಕೊಂಡರು. ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀಗಳು ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ದಿ ಹೊಂದಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರೂ ಗ್ರಾಮಗಳ ಅಭಿವೃದ್ಧಿಯತ್ತ ಗಮನಹರಿಸಬೇಕು. ನಗರ ಜೀವನದ ವ್ಯಾಮೋಹದ ಮೇಲೆ ಈಚೆಗೆ ಹಳ್ಳಿಗಳಿಂದ ನಗರಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಯಾವುದೇ ಕಾರಣಕ್ಕೂ ಹಳ್ಳಿಗಳನ್ನು ತೊರೆದು ಯಾರೂ ಹೋಗಬೇಡಿ ಎಂದರು.
ಅಗಸ್ಟ್ 09, 2012 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ 69 ವರ್ಷದ ಸೀತಾರಾಮ ಕೆದಿಲಾಯರ ಪಾದಯಾತ್ರೆ ಇದೀಗ 1540 ದಿನಗಳನ್ನು ಪೂರೈಸಿದ್ದು ಕರ್ನಾಟಕ ಸೇರಿದಂತೆ ದೇಶದ 23 ರಾಜ್ಯಗಳ ಸುಮಾರು 2000 ಹಳ್ಳಿಗಳನ್ನು ಸಂಪರ್ಕಿಸಿದ್ದಾರೆ.
ಈಗಾಗಲೇ ಸುಮಾರು 21,300 ಕಿ.ಮೀ ಪಾದಯಾತ್ರೆ ಮಾಡಿರುವ ಇವರು ಇಂದು ತಾಲೂಕಿನ ಹಂಡಿಗನಾಳದಲ್ಲಿ ಹಾಗು ಶುಕ್ರವಾರ ತಾಲೂಕಿನ ಚಿಕ್ಕದಾಸೇನಹಳ್ಳಿ ಹಾಗು ಶನಿವಾರ ಗಂಜಿಗುಂಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್, ಆರ್‍ಎಸ್‍ಎಸ್ ನ ಅಶ್ವತ್ಥ್, ಹಂಡಿಗನಾಳದ ಮಂಜುನಾಥ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -