23.1 C
Sidlaghatta
Sunday, March 26, 2023

"ಕುಮಾರಪರ್ವ" ಪ್ರಾರಂಭವಾಗಲಿ ಮತ್ತು ರಾಜ್ಯ ಸರ್ವತೋಮುಖ ಬೆಳವಣಿಗೆ ಕಾಣಲಿ

- Advertisement -
- Advertisement -

ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. “ಕುಮಾರಪರ್ವ” ಪ್ರಾರಂಭವಾಗಲಿ ಮತ್ತು ರಾಜ್ಯ ಸರ್ವತೋಮುಖ ಬೆಳವಣಿಗೆ ಕಾಣಲಿ ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಸಹಾಯಧನ ನೀಡುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಬುರುಡುಗಂಟೆ ಗ್ರಾಮದಲ್ಲಿ ಶನಿವಾರ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ೩೩೦ ಮಂದಿ ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಹಾಗೂ ಉಚಿತ ಆಂಬುಲನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಲಕಲನೇರ್ಪು ಹೋಬಳಿಯ ಮುಖಂಡರ ನೆರವಿನಿಂದ ಅತ್ಯಲ್ಪ ಕಾಲದಲ್ಲಿಯೇ ಉತ್ತಮ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಯೋಜಿಸಲು ಸಾಧ್ಯವಾಯಿತು. ಸರ್ಕಾರ ನೀಡುವ ಸಹಾಯ ತಾಯಂದಿರಿಗೆ ಸಾಲದು ಹಾಗಾಗಿ ಟ್ರಸ್ಟ್ ವತಿಯಿಂದ ತಲಾ ಹತ್ತು ಸಾವಿರ ರೂಗಳನ್ನು ನೀಡುತ್ತಿದ್ದೇವೆ. ನಾಲ್ಕೂ ಹೋಬಳಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. “ಮನೆಮನೆಗೆ ಕುಮಾರಣ್ಣ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದೇವೇಗೌಡರ ಮತ್ತು ಕುಮಾರಣ್ಣನವರ ಜನಸೇವೆ ಹಾಗೂ ಜನಪರ ಚಿಂತನೆಗಳನ್ನು ಜನರಿಗೆ ತಲುಪಿಸುವ ಆಶಯದೊಂದಿಗೆ ಕರಪತ್ರವನ್ನು ಉದ್ಘಾಟಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ೨೪ ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ಗರ್ಭಿಣಿ ಹಾಗೂ ಮಗುವಿನ ಆರೈಕೆಗಾಗಿ ೬ ತಿಂಗಳ ಕಾಲ ಪ್ರತಿ ತಿಂಗಳಿಗೆ ೬,೦೦೦ ದಂತೆ ಒಟ್ಟು ೩೬,೦೦೦ ಸಾವಿರ ಆರೋಗ್ಯ ಭತ್ಯೆ ನೀಡಲಾಗುವುದು. ಹಿರಿಯ ನಾಗರಿಕರಿಗೆ ಐದು ಸಾವಿರ ರೂಗಳ ಸಹಾಯ ಧನ, ರೈತರಿಗಾಗಿ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಸಲಕರಣೆಗಳಿಗಾಗಿ ಶೇ.೫೦ ರಷ್ಟು ಸಹಾಯಧನ, ಅಂಗನವಾಡಿ ಆಶಾ ಕಾರ್ಯಕರ್ತೆಯರ ವೇತನ ೧೦ ಸಾವಿರ ರೂಗಳು ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಲು ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.

ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಮಾಡಲಾಯಿತು

ರೈತಪರ, ಜನಪರ, ಬಡವರಪರ ಚಿಂತನೆಯುಳ್ಳವರು ನಾಯಕರಾದರೆ ರಾಜ್ಯ ಮುಂದುವರೆಯುತ್ತದೆ. ತಮ್ಮ ೨೦ ತಿಂಗಳ ಕಾಲಾವಧಿಯಲ್ಲಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತಾಪಿ ವರ್ಗದವರ ಹಾಗೂ ಜೀವಪರ ಚಿಂತಕರಾದ ಕುಮಾರಣ್ಣನವರನ್ನು ಬಲಪಡಿಸಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಈ ನಮ್ಮ ಜೀವಪರ ನಡಿಗೆಯಲ್ಲಿ ಎಲ್ಲರೂ ಕೈಜೋಡಿಸಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕುಮಾರಣ್ಣನವರ ಜನ್ಮದಿನದ ಅಂಗವಾಗಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಕ್ಷದಲ್ಲಿ ಬಿನ್ನಾಬಿಪ್ರಾಯಗಳಿರಬಹುದು ಆದರೆ ಗುಂಪುಗಳಿಲ್ಲ. ಪಕ್ಷದ ಏಳಿಗೆಗಾಗಿ ಸಂಘಟನೆಯ ದೃಷ್ಟಿಯಿಂದ ಕುಮಾರಣ್ಣನವರನ್ನು ಬಲಪಡಿಸುವ ಮುಖ್ಯ ಗುರಿಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಬಿ.ಎನ್.ರವಿಕುಮಾರ್ ಅವರ ಬೆನ್ನೆಲುಬಾಗಿ ನಿಂತು ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ಪಕ್ಷದ ಮುಖಂಡರ ತೀರ್ಮಾನದಂತೆ ನಡೆದುಕೊಳ್ಳಲು ಎಲ್ಲರೂ ಬದ್ದವಾಗಿದ್ದೇವೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಬೆಂಬಲವಾಗಿ ನಿಂತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಶಾಸಕ ರಾಜಣ್ಣ ಅವರ ಜೊತೆಗೊಡಿ ಒಂದೇ ವೇದಿಕೆಯಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ತಿಳಿಸಿದರು.
ಜೆ.ಡಿ.ಎಸ್ ವಕ್ತಾರ ಎಸ್.ಬಿ. ಶ್ರೀನಿವಾಸ್ ಮಾತನಾಡಿ, ಬಹಳ ಹಿಂದುಳಿದ ತಾಲ್ಲೂಕು ಕೇಂದ್ರದಿಂದ ದೂರವಾಗಿರುವ ಚಿಲಕಲನೇರ್ಪು ಹೋಬಳಿಗೆ ಶುಕ್ರದೆಸೆ ಬಂದಿದೆ. ಇಲ್ಲಿ ಸಮಸ್ಯಗಳು ಸಾಕಷ್ಟಿವೆ. ಪಕ್ಷವನ್ನು ಸಂಘಟನೆ ಮಾಡುತ್ತಾ ಈ ಭಾಗದ ಜನರಿಗೆ ನೆರವಾಗುತ್ತಿರುವ ಬಿ.ಎನ್.ರವಿಕುಮಾರ್ ಅವರ ಜನಪರ ಆಲೋಚನೆ ಶ್ಲಾಘನೀಯ. ಕೈಹಿಡಿದವರನ್ನು ಇಲ್ಲಿನ ಜನರು ಕೈಬಿಡುವುದಿಲ್ಲ. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವವರನ್ನು ಬೆಂಬಲಿಸೋಣ ಎಂದು ನುಡಿದರು.
“ಮನೆಮನೆಗೆ ಕುಮಾರಣ್ಣ” ಎಂಬ ಕರಪತ್ರದ ಅನಾವರಣ

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಈ ಭಾಗದ ಗರ್ಭಿಣಿಯರಿಗೆ ನೆರವು ನೀಡಿ ತಾಯಿತನವನ್ನು ಮೆರೆಯುವ ಮೂಲಕ ಬಿ.ಎನ್.ರವಿಕುಮಾರ್ ಈ ಭಾಗ್ದ ಹೆಣ್ಣುಮಕ್ಕಳಿಗೆ ತವರುಮನೆಯಂತಾಗಿದ್ದಾರೆ. ನೆಲದ ವಾಸನೆಯ ಅರಿವಿರುವ ಇಂಥಹವರು ಜನನಾಯಕರಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ೩೩೦ ಗರ್ಭಿಣಿಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಮಾಡಲಾಯಿತು. ಉಚಿತ ಆಂಬುಲನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷೀನಾರಾಯಣರೆಡ್ಡಿ, ಡಿ.ಸಿ.ಸಿ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಮುಖಂಡರಾದ ಯರ್ರಬಚ್ಚಪ್ಪ, ತಾದೂರು ರಘು, ಆದಿಲ್ ಪಾಷ, ತುಳುವನೂರು ರವಿ, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಧರ್ಮೇಂದ್ರ, ಕದಿರಿ ಯೂಸುಫ್, ಸೆಮಿ, ಸೆಮೀವುಲ್ಲ, ಸಯ್ಯದ್ ಮಹಮ್ಮದ್, ಶ್ರೀನಿವಾಸಗೌಡ, ಗೊರಮಡುಗು ನಂಜಪ್ಪ, ರಾಜಶೇಖರ್, ಆಂಜನೇಯ, ಪಾರ್ಥಸಾರಥಿ, ಬುರುಡುಗುಂಟೆ ಬಷೀರ್, ಚಿನ್ನಪ್ಪ, ಭಾರತ್, ಮಲ್ಲಯ್ಯ, ವೆಂಕಟರೆಡ್ಡಿ, ಸೀನಪ್ಪ, ನರಸಿಂಹಪ್ಪ, ನಾಗರಾಜ್, ಜಯರಾಮರೆಡ್ಡಿ, ಓಬಣ್ಣ, ವೆಂಕಟರೋಣಪ್ಪ, ಬೈರಾರೆಡ್ಡಿ, ಮಂಜುನಾಥ್, ರಮೇಶ್, ಕೊಂಡಪ್ಪ, ಅಶೋಕ್, ರಾಜೇಶ್, ಪೆದ್ದಪ್ಪಯ್ಯ, ಅಕ್ರಂ, ಮೂರ್ತಿ, ನರಸಿಂಹಪ್ಪ, ಲೋಕೇಶ್, ಆಂಜಿ, ಖಲೀಂ, ಗೋಪಣ್ಣ, ಕೇಶವರೆಡ್ಡಿ, ವೆಂಕಟಸ್ವಾಮಿ, ಕಿಶನ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!