ಕೃಷಿ ವಿಶ್ವವಿದ್ಯಾಲಯಗಳಿಂದ ಹೊರಬರುವವರು ಕೇವಲ ಪದವಿ ಪಡೆದು ಹೊರಬಂದರೆ ಸಾಲದು ಮಣ್ಣಿನ ಸೊಗಡನ್ನು ಅರಿತವರಾಗಬೇಕು, ರೈತರ ಬದುಕನ್ನು ಬಲ್ಲವರಾಗಬೇಕು ಎಂದು ಸ್ಥಳೀಯ ಸಂಘ ಸಂಸ್ಥೆಯ ನಿವೃತ್ತ ಯೋಜನಾ ಆಯುಕ್ತ ಎನ್.ಸಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ರೈ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಅಭಿವೃದ್ಧಿ ಶೀಲ ಜಾಗೃತಿ ಯೋಜನೆ ಕಾರ್ಯಾಗಾರ ಮತ್ತು ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕೀರಣ ‘ಕೃಷಿ ವೈಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಂತ್ರಿಕತೆ, ಸಂಶೋಧನೆ, ಅನ್ವೇಷಣೆ ಮುಂತಾದವುಗಳು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ರೈತರಿಗೆ ಇವು ತಲುಪಲು ಕೃಷಿ ವಿಶ್ವವಿದ್ಯಾಲಯ ಕೊಂಡಿಯಾಗಬೇಕು. ಅಲ್ಲಿನ ಕಲಿಕೆ ರೈತರ ಬದುಕನ್ನು ಹಸನು ಮಾಡಲು ಉಪಯೋಗವಾಗಬೇಕು. ರೈತರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಗಳಾಗಬೇಕು. ವಲಸೆ ತಪ್ಪಿಸಿ ಗ್ರಾಮೀಣಾಭಿವೃದ್ಧಿಗೆ ಪೂರಕ ಚಟುವಟಿಕೆಗಳು ನಡೆಯಬೇಕು ಎಂದು ಹೇಳಿದರು.
ಪ್ರೊ.ಚಿತ್ತಿರಾಯ್ ಚಲವನ್ ಮಾತನಾಡಿ, ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಹಳ್ಳಿಗಳಲ್ಲಿಯೇ ವಾಸ್ತವ್ಯ ಹೂಡಿ ಕಲಿಸುವುದು ಮತ್ತು ಕಲಿಯುವುದೂ ಎರಡನ್ನೂ ಮಾಡುವ ಮೂಲಕ ಮಣ್ಣಿನ ಮಕ್ಕಳಾಗುವಂತೆ ಪಠ್ಯವನ್ನು ರೂಪಿಸಲಾಗಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅಗತ್ಯ ಆಹಾರೋತ್ಪನ್ನಗಳನ್ನು ಹೇಗೆ ಉತ್ಪಾದಿಸಬಹುದು, ರೈತರ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮೂರು ತಿಂಗಳಿನಿಂದ ಆನೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳು ಕೃಷಿ, ಮಣ್ಣುಪರೀಕ್ಷೆ, ಹೈನುಗಾರಿಕೆ, ರೇಷ್ಮೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರದರ್ಶನವನ್ನು ಏರ್ಪಡಿಸಿದ್ದರು. ಬೀಜಗಳ ರಂಗೋಲಿ, ಕೃಷಿ ಉಪಕರಣಗಳ ಪ್ರದರ್ಶನ, ನೀರಿನ ಸದ್ಭಳಕೆಯ ಪ್ರಾತ್ಯಕ್ಷಿಕೆ ಗಮನ ಸೆಳೆದವು.
ರೇಷ್ಮೆ ಇಲಾಖೆಯ ಬೋಜಣ್ಣ, ನಾರಾಯಣಸ್ವಾಮಿ, ರಾಮಕೃಷ್ಣ, ಡಾ.ಜಿ.ಎಸ್.ಕೃಷ್ಣಾರೆಡ್ಡಿ, ಪಿಡಿಓ ಅರುಣಾಕುಮಾರಿ, ಮುಖ್ಯ ಶಿಕ್ಷಕಿ ಪ್ರಭಾವತಿ, ರೈತ ಮುಖಂಡರಾದ ಪಿ.ವಿ.ನಾಗರಾಜ್, ಎಚ್.ಜಿ.ಗೋಪಾಲಗೌಡ, ವಿದ್ಯಾರ್ಥಿಗಳಾದ ಕಾರ್ತಿಕ್, ಸೂರ್ಯ, ವಿಷ್ಣು, ಶ್ರಾವಣ್, ಗೋಪಾಲ್, ಹರ್ಷಿತಾ, ಮಾಧವಿ, ಲತಾ, ವೆನ್ನೆಲ ಹಾಜರಿದ್ದರು.
- Advertisement -
- Advertisement -
- Advertisement -