ತಾಲ್ಲೂಕಿನಲ್ಲಿ ಕೆಂಪೇಗೌಡರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಶ್ರೀ ಬಾಲಾಜಿ ಕಲ್ಯಾಣಮಂಟಪದಲ್ಲಿ ಕೆಂಪೇಗೌಡ ಆಚರಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ಜನಾಂಗದ ಮುಖಂಡರು ಭಾಗವಹಿಸಿದ್ದರು.
ಶಾಸಕ ಎಂ.ರಾಜಣ್ಣ ಮತ್ತು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಾರ್ಯಕ್ರಮ ಶಿಸ್ತುಬದ್ಧವಾಗಿ, ಅದ್ದೂರಿಯಾಗಿ ಹಾಗೂ ಚೆನ್ನಾಗಿ ಮೂಡಿಬರಲು ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಮುಖಂಡ ಮೇಲೂರು ರವಿಕುಮಾರ್ ಮಾತನಾಡಿ, ತಾಲ್ಲೂಕಿನಾದ್ಯಂತ ಒಕ್ಕಲಿಗ ಜನರು ಒಗ್ಗೂಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೆಂಪೇಗೌಡರ ಜಯಂತಿಯಂದು ಆಗಮಿಸುವ ಸಮಸ್ತ ಜನರಿಗೆ ಊಟದ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಘೋಷಿಸಿದರು.
ಕೆಂಪೇಗೌಡರ ಜಯಂತ್ಯುತ್ಸವವನ್ನು ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಬಳಿ ಆಯೋಜನೆ ಮಾಡಬೇಕು. ಬೈಕ್ ರ್ಯಾ.ಲಿ, ಪ್ರತಿ ಹಳ್ಳಿಯಿಂದಲೂ ಪಲ್ಲಕ್ಕಿಗಳ ಮೆರವಣಿಗೆ, ಕಲಾತಂಡಗಳನ್ನೊಳಗೊಂಡ ಮೆರವಣಿಗೆ ನಡೆಯಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಜನಾಂಗದ ಹಿರಿಯ ಸಾಧಕರಿಗೆ ಸನ್ಮಾನ, ಗಿಡಗಳನ್ನು ನೆಡುವುದು, ಸಂಗೀತ, ನಾಟಕ ಮುಂತಾದ ಕಲಾವಿದರಿಗೆ ಸನ್ಮಾನ, ತಾಲ್ಲೂಕಿನಲ್ಲಿ ಹುಟ್ಟಿ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ಐಎಎಸ್, ಕೆಎಎಸ್ ಪದವಿ ಪಡೆದವರನ್ನು ಕರೆಸಿ ಗೌರವಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ವಿ.ನಾಗರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್, ಭಕ್ತರಹಳ್ಳಿ ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ನಾರಾಯಣಸ್ವಾಮಿ, ಪುರುಷೋತ್ತಮ್, ಮೇಲೂರು ಆರ್.ಎ.ಉಮೇಶ್, ವೆಂಕಟರೆಡ್ಡಿ, ಎ.ಎಂ.ತ್ಯಾಗರಾಜ್, ತಾದೂರು ರಘು, ಶ್ರೀಧರ್, ಮುರಳಿ, ಕೆಂಪರೆಡ್ಡಿ, ಹಿರಿಯ ವಕೀಲ ಪಾಪಿರೆಡ್ಡಿ, ಎಚ್.ಜಿ.ಗೋಪಾಲಗೌಡ, ಅಶ್ವತ್ಥನಾರಾಯಣರೆಡ್ಡಿ, ವೆಂಕಟಸ್ವಾಮಿರೆಡ್ಡಿ, ರಾಜಶೇಖರ್, ದೇವರಾಜ್ ಹಾಜರಿದ್ದರು.
- Advertisement -
- Advertisement -
- Advertisement -