ಕೊಳವೆ ಬಾವಿಗಾಗಿ 1200 ಅಡಿಗಳಷ್ಟು ಆಳ ಕೊರೆದರೂ ನೀರು ಸಿಗದೇ ವಾಪಸು ಹೊರಟ ಬೋರ್‌ವೆಲ್ ವಾಹನವನ್ನು ತಡೆದು, ಮತ್ತೊಂದು ಕಡೆ ಕೊರೆಯುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಜನರಿಗೆ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆಬಾವಿ ಮೂಲಕ ಗ್ರಾಮ ಪಂಚಾಯಿತಿಯವರು ಪೂರೈಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಸ್ಥಳ ಗುರುತಿಸಿ ಕೊಳವೆ ಬಾವಿ ಕೊರೆಸಿದಾಗ ಕೊಳವೆಬಾವಿಯಲ್ಲಿ ನೀರು ಸಿಕ್ಕಿತ್ತು. ಇನ್ನೇನು ಗ್ರಾಮದ ಕೊಳವೆಬಾವಿಯಲ್ಲಿ ನೀರು ಸಿಕ್ಕಿದೆ ಎಂದು ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸುವುದನ್ನು ನಿಲ್ಲಿಸಿದರು. ಖಾಸಗಿ ಕೊಳವೆಬಾವಿಯ ಮಾಲೀಕ ತನ್ನ ಜಮೀನಿನಲ್ಲಿ ಬೆಳೆಯಿಟ್ಟಿದ್ದಾನೆ. ಗ್ರಾಮ ಪಂಚಾಯಿತಿಯಿಂದ ಪಂಪು ಮೋಟಾರ್ ಅಳವಡಿಸಿದ ಕೆಲವೇ ದಿನಗಳಲ್ಲಿ ನೀರು ಬರುತ್ತಿದ್ದ ಕೊಳವೆಬಾವಿ ಭತ್ತಿ ಹೋಗಿದೆ. ಇದೀಗ ಅದೇ ಕೊಳವೆಬಾವಿಯನ್ನು ಮತ್ತೆ ಪುನಃ 600 ಅಡಿ ಕೊರೆಸಿದರೂ ನೀರು ಸಿಕ್ಕಿಲ್ಲ. ಹಾಗಾಗಿ ಬೋರ್ ವೆಲ್ ವಾಹನ ವಾಪಸ್ ಹೊರಡಲು ಸಿದ್ದವಾಗುತ್ತಿದ್ದಂತೆ ಗ್ರಾಮಸ್ಥರು ಮತ್ತೊಂದು ಕೊಳವೆಬಾವಿ ಕೊರೆಯುವಂತೆ ಪಟ್ಟು ಹಿಡಿದು ವಾಹನವನ್ನು ತಡೆದು ಕೆಲ ಕಾಲ ಪ್ರತಿಭಟಿಸಿದರು.
ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ತಕ್ಷಣಕ್ಕೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಜರುಗಿಸುವ ಭರವಸೆ ನೀಡಿದರಾದರೂ, ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ಪೂರೈಸುವುದು ಬೇಡ, ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸುವಂತೆ ಬೇಡಿಕೆಯಿಟ್ಟರು. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಜಿಯಾಲಾಜಿಸ್ಟ್ ನ್ನು ಕರೆಸಿ ಪಾಯಿಂಟ್ ಗುರುತಿಸಿ ಕೊಳವೆಬಾವಿ ಬಾವಿ ಕೊರೆಸುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಗ್ರಾಮಸ್ಥರಾದ ಎಲ್.ಎನ್.ವೆಂಕಟರಾಮರೆಡ್ಡಿ, ಎಲ್.ವಿ.ರಾಜಣ್ಣ, ಎಲ್.ನವೀನ್, ಎಲ್.ವಿ.ವೆಂಕಟರಾಮಿರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -