ಗೋಬರ್ ಗ್ಯಾಸ್‌ನ ಸ್ಲರ್ರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮನೋಜ ಎಂಬ ಬಾಲಕನನ್ನು ದೀಕ್ಷಿತಾ ಮತ್ತು ಅಂಬಿಕಾ ಎಂಬ ಇಬ್ಬರು ಬಾಲಕಿಯರು ರಕ್ಷಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ರಂಜಾನ್ ಹಬ್ಬದ ರಜಾ ದಿನದಂದು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾಲೆಗೆ ರಜೆ ಇದ್ದ ಕಾರಣ ಮನೋಜ ಎಂಬ ಬಾಲಕ ಆಟವಾಡುತ್ತಾ ಗೋಬರ್ ಗ್ಯಾಸ್ ಸ್ಲರ್ರಿಯ ಬಳಿ ಚಿಟ್ಟೆ ಹಿಡಿಯಲು ಹೋಗಿ ಕಾಲು ಜಾರಿ ಮುಗ್ಗರಿಸಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹತ್ತಿರದಲ್ಲೇ ಆಟವಾಡುತ್ತಿದ್ದ ದೀಕ್ಷಿತಾ ಮತ್ತು ಅಂಬಿಕಾ ಮನೋಜ ಬಿದ್ದದ್ದನ್ನು ಕಂಡಿದ್ದಾರೆ. ಅವರು ಹತ್ತಿರ ಹೋಗುವಷ್ಟರಲ್ಲಿ ಬೋರಲಾಗಿ ಬಿದ್ದು ಸಗಣಿಯ ಕೆಸರಿನಲ್ಲಿ ಮುಳುಗಿದ್ದ ಮನೋಜನ ಒಂದು ಕಾಲು ಮಾತ್ರ ಮೇಲೆ ಕಂಡಿದೆ. ಇಬ್ಬರು ಹುಡುಗಿಯರೂ ಬಲವಾಗಿ ಕಾಲನ್ನು ಹಿಡಿದು ಮನೋಜನನ್ನು ಹೊರಕ್ಕೆ ಎಳೆದು ಹಾಕಿದ್ದಾರೆ.
‘ಒಂದು ಕಾಲನ್ನು ಕಂಡು, ಅದನ್ನು ಹಿಡಿದು ಇಬ್ಬರೂ ಎಳೆದೆವು. ಮನೋಜನ ಮೈಯೆಲ್ಲಾ ಸಗಣಿಯಾಗಿತ್ತು. ಭಯಗೊಂಡಿದ್ದ ಅವನು ಮನೆಯಲ್ಲಿ ಬಚ್ಚಲಿಗೆ ಓಡಿದ. ಅವರಮ್ಮನಿಗೆ ಗೊತ್ತಾಗಿ ಚೆನ್ನಾಗಿ ಬೈದರು. ಅವರಪ್ಪನಿಗೆ ಗೊತ್ತಾದರೆ ಹೊಡೆಯುವರೆಂಬ ಭಯಕ್ಕೆ ಸ್ವಲ್ಪ ಹೊತ್ತು ಬಚ್ಚಿಟ್ಟುಕೊಂಡಿದ್ದ’ ಎಂದು ಅಂಬಿಕಾ ತಿಳಿಸಿದಳು.
ಈ ಮೂವರೂ ಮಕ್ಕಳು ಹನುಮಂತಪುರ ವಾಸಿಗಳಾದರೂ ಓದುತ್ತಿರುವುದು ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಮನೋಜ ಐದನೇ ತರಗತಿಯಲ್ಲಿ, ದೀಕ್ಷಿತಾ ಆರನೇ ತರಗತಿಯಲ್ಲಿ ಮತ್ತು ಅಂಬಿಕಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಾರೆ.
ಭಯಗೊಂಡಿದ್ದ ಮಕ್ಕಳಿಂದ ತಡವಾಗಿ ತಿಳಿದು ಬಂದಾಗ ಶಿಕ್ಷಕರು ಮತ್ತು ಗ್ರಾಮಸ್ಥರು ಈ ಇಬ್ಬರು ಹೆಣ್ಣುಮಕ್ಕಳ ಸಮಸ್ಫೂರ್ತಿ ಮತ್ತು ಧೈರ್ಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
- Advertisement -