ಯಾವ ಯಾವ ವಿಧದಲ್ಲಿ ಅನುಧಾನಗಳು ಬರುತ್ತವೆ ಎನ್ನುವುದರ ಬಗ್ಗೆ ಮಾಹಿತಿ ಕೊರತೆಯಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು 4 ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ನೇರವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುಧಾನಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು ಈ ಅನುಧಾನಗಳ ಜೊತೆಗೆ ಸ್ಥಳೀಯವಾಗಿ ಸಂಪನ್ಮೂಲಗಳನ್ನು ಕ್ರೋಢಿಕರಣ ಮಾಡಿಕೊಂಡು ಜನರಿಗೆ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ, ಸ್ವಚ್ಛವಾದ ಪರಿಸರ ಮುಂತಾದ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನಿಮ್ಮ ಜವಾಬ್ದಾರಿಯಾಗಿದೆ. ಆಯೋಗದಿಂದ ಪ್ರತಿ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಾಗುತ್ತಿದ್ದು ಇನ್ನೂ 15 ಜಿಲ್ಲೆಗಳಿಗೆ ಬೇಟಿ ನೀಡಬೇಕಾಗಿದೆ. 2017 ನೇ ಸಾಲಿನ ಜನವರಿಯೊಳಗೆ ಪ್ರವಾಸ ಪೂರ್ಣಗೊಳ್ಳಲಿದೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ನಡೆಸುವ ಮೂಲಕ ಯಾವ ಯಾವ ಮೂಲಗಳಿಂದ ಅನುಧಾನಗಳು ಬರುತ್ತವೆ. ಈ ಅನುಧಾನಗಳನ್ನು ಹೇಗೆ ಖರ್ಚು ಮಾಡಬೇಕು. ಅನುಧಾನಗಳನ್ನು ಖರ್ಚು ಮಾಡಬೇಕಾದರೆ ಏನೇನು ಮಾನದಂಡಗಳನ್ನು ಅನುಸರಿಸಬೇಕು. ಸ್ಥಳೀಯ ಜನರ ಪಾತ್ರವೇನು ಎನ್ನುವ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
4 ನೇ ಹಣಕಾಸು ಆಯೋಗದ ಸದಸ್ಯ ಹೆಚ್. ಶಶಿಧರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ಷಮತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಚಿಂತನೆಗಳು ನಡೆದಿವೆ. ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಕ್ರೀಯಾಶೀಲರಾಗಿ ಕೆಲಸ ನಿರ್ವಹಿಸಬೇಕು. ಜನಸಾಂದ್ರತೆ ಎಸ್ ಸಿ, ಎಸ್ ಟಿ, ಸಮುದಾಯದ ಸಂಖ್ಯೆ, ಅನಕ್ಷರಸ್ಥರ ಪ್ರಮಾಣ, ಒಟ್ಟು ಜನಸಂಖ್ಯೆ, ಬೌಗೊಳಿಕ ವಿಸ್ತೀರ್ಣ, ಮುಂತಾದ ಅಂಶಗಳನ್ನು ವರದಿ ಶಿಫಾರಸ್ಸು ಸಂಧರ್ಭದಲ್ಲಿ ಪರಿಗಣಿಸಲಾಗುವುದು. ಸೂಚ್ಯಂಕ ಆಧಾರದಲ್ಲಿ ಶಿಫಾರಸ್ಸು ಮಾಡುವ ಕುರಿತು ಚಿಂತನೆ ನಡೆಸಲಾಗುವುದು. ಆಯೋಗ ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯವಿಲೇವಾರಿ, ಬೀದಿದೀಪ ನಿರ್ವಹಣೆ, ಮುಂತಾದ ಸೌಲಭ್ಯಗಳ ಕುರಿತು ಗಮನಹರಿಸಲಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಬಹುತೇಕ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರುವುದಿಲ್ಲ ಇದರಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿರುವುದರ ಜೊತೆಗೆ ಅವರ ಸಹವರ್ತಿಗಳು ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿಕೊಳ್ಳುತ್ತಾರೆ ಎಂದರು.
ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರು, ನೀರಿನ ಸಮಸ್ಯೆ ಹೆಚ್ಚಾಗಿದೆ. ವಸತಿ ಯೋಜನೆಯಡಿಯಲ್ಲಿ ಒಂದು ವರ್ಷಕ್ಕೆ ಒಬ್ಬ ಸದಸ್ಯರಿಗೆ ಒಂದು ಮನೆ ಮಾತ್ರ ನೀಡಲಾಗುತ್ತಿದೆ ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ತಾಲ್ಲೂಕು ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ಕನಿಷ್ಟ ಗ್ರಾಮ ಪಂಚಾಯಿತಿಗಳಿಗಿರುವಷ್ಟು ಅಧಿಕಾರವೂ ಇಲ್ಲ. ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇರುವ ಸಿಬ್ಬಂದಿಯಿಂದ ಎಲ್ಲಾ ಕೆಲಸ ಮಾಡಿಸಲು ಸಾದ್ಯವಾಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಂದ ಹಿಡಿದು ಜಿಲ್ಲಾ ಪಂಚಾಯಿತಿವರೆಗೆ ಅಧಿಕಾರ ವಿಕೇಂದ್ರೀಕರಣ ಮಾಡಿದ್ದೇವೆ ಎನ್ನುತ್ತಾರೆ. ಆದರೆ ನಾವು ಹೆಚ್ಚಿನ ಪ್ರಮಾಣದಲ್ಲಿ ಶಾಸಕರ ಅನುಧಾನಗಳ ಮೇಲೆ ಅವಲಂಬಿತರಾಗುವಂತಾಗಿದೆ. ತಾಲ್ಲೂಕು ಪಂಚಾಯಿತಿಗೆ ಹೆಚ್ಚಿನ ಅನುಧಾನಗಳನ್ನು ಬಿಡುಗಡೆ ಮಾಡಬೇಕು ಎಂದು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.
ಆಯೋಗದ ಸದಸ್ಯ ಹೆಚ್.ಡಿ. ಅಮರನಾಥ್, ಶ್ರೀಕಾಂತ್, ಶಾಸಕ ಎಂ.ರಾಜಣ್ಣ, ತಾ.ಪಂ. ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಹೆಚ್.ನರಸಿಂಹಯ್ಯ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನರೇಗಾ ಯೋಜನಾಧಿಕಾರಿ ಶ್ರೀನಾಥ್‍ಗೌಡ, ಹಾಗೂ ತಾ.ಪಂ.ಸದಸ್ಯರು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -