ತಾಲ್ಲೂಕಿನ ಚೀಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿದರು.
ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಜೀವನಮಟ್ಟ ಅಲ್ಪ ಸ್ವಲ್ಪ ಸುಧಾರಿಸಿದೆ ಎಂದರೆ ಅದಕ್ಕೆ ಈ ಭಾಗದ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಯೇ ಕಾರಣ ಎಂದು ಅವರು ಹೇಳಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಅವಿಭಾಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಹಾಲು ಉತ್ಪಾದಿಸಿ ಜೀವನ ನಡೆಸುವಂತಾಗಿದೆ. ತಾಲೂಕಿನ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ ಕೆ.ಸಿ.ಸ್ವಾಮಿ ಮಾತನಾಡಿ, ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಹಾಲು ಅಳೆಯುವಾಗ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜೀಯಾಗಬಾರದು. ಇನ್ನು ಇಡೀ ರಾಜ್ಯದಲ್ಲಿ ಕೋಲಾರ ಒಕ್ಕೂಟ ಹಾಲಿಗೆ ಅತಿ ಹೆಚ್ಚು ಧರ ನೀಡುವ ಮೂಲಕ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಎಂದರು.
ಚೀಮಂಗಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ಎಂ.ರಮೇಶ್, ಉಪಾಧ್ಯಕ್ಷ ಬಿ.ಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಶಿಡ್ಲಘಟ್ಟ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕರಾದ ಚಂದ್ರಶೇಖರ್, ಬಿ.ಎಸ್.ಹನುಮಂತರಾವ್, ಸಂಘದ ಕಾರ್ಯ ನಿರ್ವಹಣಾಧಿಕಾರಿ ಎ.ನಾಗರಾಜಯ್ಯಶೆಟ್ಟಿ ಹಾಜರಿದ್ದರು.
- Advertisement -
- Advertisement -
- Advertisement -







