ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯಬೇಕಿದೆ. ಕೋಮುವಾದವನ್ನು ಹತ್ತಿಕ್ಕಲು ಜನವರಿ 30 ರಂದು ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಿರ್ಮಿಸುವುದಾಗಿ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಕನ್ನಡನಾಡು ಶತಮಾನಗಳಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮುಸೌಹಾರ್ದವನ್ನು ಕೆಡಿಸಿ ಕೋಮುಜ್ವಾಲೆ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪ್ರೇರಿತವಾದ ಇಂತಹ ಪ್ರಯತ್ನಗಳು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಕೋಮುದ್ವೇಷ ಬಿತ್ತಿ ಬೆಳೆಯುವವರು ಯಾವುದೇ ಜಾತಿಯವರಾಗಲಿ ನಮ್ಮವರಾಗಲು ಸಾಧ್ಯವಿಲ್ಲ. ಕನ್ನಡ ಪರಂಪರೆಯ ನಿಜ ವಾರಸುದಾರರು ಎಂದಿಗೂ ಕೋಮುವಾದಿಗಳಲ್ಲ. ಉಗ್ರವಾದಿಗಳೂ ಅಲ್ಲ. ಸ್ನೇಹದ ಸಾಮರಸ್ಯದ ಸಂದೇಶವನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಹರಡುವುದು ಶಾಂತಿಪ್ರಿಯರ ಕರ್ತವ್ಯವಾಗಬೇಕು. ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾಗಿ ಜನವರಿ 30 ರಂದೇ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದರು. ಹಾಗಾಗಿ ಅದು ಮತ್ತೆ ಮರುಕಳಿಸದಂತೆ ಕೋಮುವಾದವನ್ನು ಹತ್ತಿಕ್ಕಲು ಒಗ್ಗೂಡೋಣ ಎಂದು ಹೇಳಿದರು.
ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿಯ ರಾಜ್ಯ ಮುಖಂಡ ಮಳ್ಳೂರು ಶಿವಣ್ಣ, ಸಿ.ಐ.ಟಿ.ಯು ತಾಲ್ಲೂಕು ಸಂಘಟನಾ ಸಂಚಾಲಕ ಫಯಾಜ್, ಕೆ.ಎನ್.ಪಾಪಣ್ಣ, ಅಶ್ವತ್ಥಮ್ಮ, ಗುಲ್ಜಾರ್, ಶಂಕರಪ್ಪ, ವೆಂಕಟೇಶಮೂರ್ತಿ, ಡಿ.ವೈ.ಎಫ್.ಐ ತಾಲ್ಲೂಕು ಉಪಾಧ್ಯಕ್ಷ ಖಲೀಲ್, ವೆಂಕಟರೆಡ್ಡಿ, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಸತ್ತಾರ್ ಸಾಬಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -