ದಾನಿಗಳು ಕೊಟ್ಟ ಆಂಬ್ಯುಲೆನ್ಸ್‌ ಬಳಸಬಾರದೆಂದು ಶಾಸಕರ ನಿರ್ದೇಶನ

- Advertisement -
- Advertisement -

ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಗಾದೆಯಂತೆ ದಾನಿಗಳು ರೋಗಿಗಳ ಅನುಕೂಲಕ್ಕಾಗಿ ಕೊಟ್ಟಂತಹ ಆಂಬ್ಯುಲೆನ್ಸ್‌ ತೆಗೆದುಕೊಳ್ಳಬಾರದು ಎಂದು ಶಾಸಕರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.
ಒಂದೆಡೆ 15 ಕಿಮೀ ವ್ಯಾಪ್ತಿಗೊಂದು ಆಂಬ್ಯುಲೆನ್ಸ್‌ ಕಲ್ಪಿಸಲು ಸರ್ಕಾರ ಉದ್ದೇಶಿಸಿ ಅದಕ್ಕಾಗಿ ದಾನಿಗಳ ನೆರವನ್ನೂ ಪಡೆಯಲು ಚಿಂತನೆ ನಡೆಸಿದ್ದರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೋಗಿಗಳಿಗಿಂತ ರಾಜಕೀಯವೇ ಶಾಸಕರಿಗೆ ಮುಖ್ಯವಾಗಿದೆ ಎಂಬ ಮಾತು ಹರಿದಾಡುತ್ತಿದೆ.
ಕಳೆದ ವಾರ ಜುಲೈ ೨ ರ ಭಾನುವಾರದಂದು ತಾಲ್ಲೂಕಿನ ಸಾದಲಿಯ ಸಾದಲಮ್ಮ ದೇವಾಲಯದ ಆವರಣದಲ್ಲಿ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಚಿತ ಆಂಬುಲೆನ್ಸ್ ವಿತರಣೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಎಂ.ರಾಜಣ್ಣ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ತಾಲ್ಲೂಕು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕರ ದೂರವಾಣಿ ಕರೆಯ ಆಕ್ಷೇಪದ ಕಾರಣ ಆಂಬ್ಯುಲೆನ್ಸ್‌ ಸ್ವೀಕರಿಸಬಾರದೆಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಸಹಿ ಇರುವ ಅಧಿಕೃತ ಜ್ಞಾಪನಾ ಪತ್ರ.

ಈ ಹಿನ್ನಲೆಯಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಸಾದಲಿ ವೈದ್ಯರಿಗೆ ಪತ್ರ ರವಾನಿಸಿದ್ದಾರೆ. ‘ಆರೋಗ್ಯ ಕೇಂದ್ರಕ್ಕೆ ಅನ್ಯ ವ್ಯಕ್ತಿಗಳು ನೀಡಿರುವ ಆಂಬ್ಯುಲೆನ್ಸ್‌ ಪಡೆದಿರುವುದಕ್ಕೆ ಮಾನ್ಯ ಶಾಸಕರು ದೂರವಾಣಿ ಕರೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ನೀಡಿರುವ ಆಂಬುಲೆನ್ಸ್ ಮಾತ್ರ ಬಳಸಬೇಕು. ಖಾಸಗಿ ವ್ಯಕ್ತಿಗಳು, ಟ್ರಸ್ಟ್ ಹಾಗೂ ರಾಜಕೀಯ ವ್ಯಕ್ತಿಗಳು ನೀಡುವ ಆಂಬುಲೆನ್ಸ್ ಬಳಸುವುದು ಕಾನೂನು ಬಾಹಿರವಾಗಿರುತ್ತದೆ. ಖಾಸಗಿ ವ್ಯಕ್ತಿಗಳು ಈ ರೀತಿ ಉಚಿತವಾಗಿ ನೀಡಿ ಪ್ರಚಾರ ಪಡೆದುಕೊಂಡು ರಾಜಕೀಯವಾಗಿ ಬಲವರ್ದನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿ ಯಾವುದೇ ಟ್ರಸ್ಟ್ ಹಾಗು ಖಾಸಗಿ ವ್ಯಕ್ತಿಗಳಿಂದ ಸಹಕಾರ ಪಡೆದುಕೊಳ್ಳಬಾರದು. ಅವರು ನೀಡಿರುವ ಆಂಬುಲೆನ್ಸ್‌ನ್ನು ಕೂಡಲೇ ವಾಪಸ್ ನೀಡಬೇಕು’ ಎಂದು ಮುದ್ರಿಸಿರುವ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಹಿ ಇರುವ ಅಧಿಕೃತ ಜ್ಞಾಪನಾ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಎಂ.ರಾಜಣ್ಣ ವಿರುದ್ಧ ಹಲವಾರು ಕಾಮೆಂಟ್‌ಗಳು ಬರುತ್ತಿವೆ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಅಂದಹಾಗೆ ತಾನು ಏನು ಮಾಡುವುದಿಲ್ಲ, ಮಾಡುವವರಿಗೆ ಶಾಸಕರು ಅಡ್ಡ ಹಾಕುವುದು ಏಕೆ? ಕಳೆದ ೨೦೦೮ ರ ಚುನಾವಣೆ ಹಾಗೂ ೨೦೧೩ ರ ಚುನಾವಣೆಯಲ್ಲಿ ತಮಗಾಗಿ ದುಡಿದವರೇ ಇಂದು ಇವರಿಗೆ ಬೇಡವಾಗಿದ್ದಾರೆ. ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ಅವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ದಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟನೆ ಮಾಡುವ ನಿಟ್ಟಿನಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ಇಂದು ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿದ್ದರೆ ಶಾಸಕರು ಅದಕ್ಕೆ ಅಡ್ಡಿಪಡಿಸುತ್ತಿರುವುದು ಶಿಡ್ಲಘಟ್ಟ ಜೆಡಿಎಸ್ ಪಕ್ಷದಲ್ಲಿ ಬಿನ್ನಮತವಿದೆ ಎಂಬುದನ್ನು ಸಾಭೀತುಪಡಿಸುವಂತಿದೆ.
ಜುಲೈ ೨ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು. ಮತ್ತೊಂದು ವಿಶೇಷವೆಂದರೆ ಸ್ವತಃ ಶಾಸಕರ ಮಾವ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಸಾಮಪ್ಪರ ೫ ನೇ ಪುಣ್ಯಸ್ಮರಣೆಯ ಅಂಗವಾಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರೇ ಆಯೋಜಿಸಿ ಆಂಬ್ಯುಲೆನ್ಸ್‌ ನೀಡಿದ್ದರು.
‘ಕಳೆದ ಏಪ್ರಿಲ್‌ ೨೩ ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪ ಅವರ ೫ ನೇ ವರ್ಷದ ಪುಣ್ಯಸ್ಮರಣೆ ಸಮಾರಂಭಕ್ಕೆ ಜನರನ್ನು ಸಂಘಟಿಸಲು ಹೋಗಿದ್ದಾಗ ಸಾದಲಿ ಭಾಗದ ಜೆಡಿಎಸ್ ಮುಖಂಡರು ಆಂಬ್ಯುಲೆನ್ಸ್ ಕೊರತೆಯಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರು. ಹಾಗಾಗಿ ಟ್ರಸ್ಟ್ ವತಿಯಿಂದ ಮೂರು ಹೋಬಳಿಗಳಿಗೆ ತಲಾ ಒಂದರಂತೆ ಮೂರು ಆಂಬುಲೆನ್ಸ್ ಟ್ರಸ್ಟ್ ಮೂಲಕ ಖರೀದಿಸಲಾಗಿದೆ. ಅದರ ಸಂಪೂರ್ಣ ನಿರ್ವಹಣೆಯನ್ನು ಟ್ರಸ್ಟ್ ಮೂಲಕವೇ ಭರಿಸಲಾಗುತ್ತದೆ. ನಾವು ಸರ್ಕಾರಕ್ಕೆ ನೀಡಬೇಕಾದರೆ ಸರ್ಕಾರದಿಂದ ಆದೇಶವಾಗಬೇಕು. ಆ ನಂತರ ನಾವು ಜಿಲ್ಲಾ ಆರೋಗ್ಯಾಧಿಕಾರಿಯ ಮೂಲಕ ನೀಡಬಹುದು. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ನಾವು ವೈದ್ಯರಿಗೆ ಆಂಬುಲೆನ್ಸ್ ವಾಹನ ನೀಡಿಲ್ಲ. ಬದಲಿಗೆ ಸಾದಲಿ ವ್ಯಾಪ್ತಿಯಲ್ಲಿ ನಮ್ಮ ಆಂಬುಲೆನ್ಸ್ ಇರುತ್ತದೆ ರೋಗಿಗಳಿಗೆ ಅಗತ್ಯ ಬಿದ್ದಲ್ಲಿ ಬಳಸಿಕೊಳ್ಳಿ ಎಂದಷ್ಟೇ ಹೇಳಿದ್ದೇವೆ. ಸ್ಥಳೀಯ ಮುಖಂಡರ ಆಹ್ವಾನದ ಮೇರೆಗೆ ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೇ ನೆಪ ಮಾಡಿಕೊಂಡು ಶಾಸಕರು ವೈದ್ಯರ ಹಾಗು ಪಕ್ಷದ ಕಾರ್ಯಕರ್ತರ ವಿರುದ್ದ ಆಕ್ಷೇಪ ವ್ಯಕ್ತ ಪಡಿಸಿರುವುದು ಸರಿಯಲ್ಲ’ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!