ದುರ್ಬಲ ವರ್ಗಗಳ ದಿನಾಚರಣೆ ಕಟಾಚಾರಕ್ಕೆ ನಡೆಸಲಾಗುತ್ತಿದೆ. ದುರ್ಬಲ ವರ್ಗಗಳ ಅಭಿವೃದ್ಧಿ ತಮಗೆ ಬೇಕಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ತಾಲ್ಲೂಕು ಆಡಳಿತದ ವಿರುದ್ದ ಆರೋಪಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದುರ್ಬಲ ವರ್ಗಗಳ ದಿನಾಚರಣೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ದಲಿತರು ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುವುದು ನಿಮಗೆ ಇಷ್ಟ ಇಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದಲಿತರ ಕಾಲೋನಿಗಳಲ್ಲಿ ಮದ್ಯದ ಮಾರಾಟ ಅವ್ಯಾಹತವಾಗಿ ನಡೆದಿದೆ. ನಿಯಂತ್ರಣ ಮಾಡಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ, ಇದರಿಂದ ದಲಿತ ಕುಟುಂಬಗಳು ನಾಶವಾಗುತ್ತಿವೆ ಎಂದು ತಿಳಿಸಿದರು.
ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಾಕಷ್ಟು ಪ್ರಚಾರ ಇಲ್ಲ, ಇದ್ದರೂ ಸಾಕಷ್ಟು ಯೋಜನೆಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ತಾಲ್ಲೂಕಿನ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಬ್ಯಾಂಕ್‌ನವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ದಲಿತರು ನಿರ್ಮಿಸುವ ಪಾಲಿಹೌಸ್ ಗೆ ಸರ್ಕಾರದಿಂದ ಶೇ. ೯೦ರಷ್ಟು ಪ್ರೋತ್ಸಾಹ ಧನ ನೀಡಲಿದ್ದು, ಉಳಿದ ಶೇ. ೧೦ರಷ್ಟು ಮಾತ್ರವೇ ದಲಿತ ಫಲಾನುಭವಿಗಳು ಭರಿಸಬೇಕು. ಆದರೆ ಬ್ಯಾಂಕ್ ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾದರೆ ದಲಿತರು ಮುಖ್ಯವಾಹಿನಿಗೆ ಹೇಗೆ ತಾನೆ ಬರುತ್ತಾರೆ ಎಂದು ಪ್ರಶ್ನಿಸಿದರು.
ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ದಲಿತ ಮುಖಂಡರಾದ ವೆಂಕಟೇಶ್, ನಂಜಪ್ಪ, ನರಸಿಂಹಮೂರ್ತಿ, ದ್ಯಾವಕೃಷ್ಣ, ಮುನಿರಾಜು ಮುಂತಾದವರು ಒತ್ತಾಯಿಸಿದರು.
ಗೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ, ಗ್ರಾಮೀಣಾಭಿವೃದ್ಧಿ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -