23.1 C
Sidlaghatta
Saturday, July 19, 2025

ಧರ್ಮ ಎಂದರೆ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವುದಾಗಿದೆ

- Advertisement -
- Advertisement -

ಸಿದ್ಧಾಂತಕ್ಕಿಂತ ಆಚರಣೆಯೇ ಮುಖ್ಯ. ಸಮಾಜದ ಬಗ್ಗೆ ಚಿಂತನೆ ಅಗತ್ಯವಿದೆ. ಧರ್ಮ ಎಂದರೆ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವುದಾಗಿದೆ ಎಂದು ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗ್ರಾಮದ ಸ್ನೇಹ ಯುವಕರ ಸಂಘದ ಸಹಕಾರದೊಂದಿಗೆ ನಡೆಸಲಾದ ‘ಕನ್ನಮಂಗಲ ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ಮಕ್ಕಳ ಪ್ರತಿಭೆಗೆ ನೀರೆರೆಯುತ್ತಾ ಶಿಸ್ತಿನಿಂದ ಸಂಘವನ್ನು ಸ್ನೇಹ ಯುವಕರ ಕಟ್ಟಿಕೊಂಡ ಯುವಕರನ್ನು ಕಂಡು ಖುಷಿಯಾಗಿದೆ. ಕೈವಾರ ತಾತಯ್ಯನವರು ಪ್ರಕೃತಿಯನ್ನು ರಕ್ಷಿಸುವಂತೆ ತಿಳಿಸಿದ್ದಾರೆ. ನೀವು ತಲಾ ಐದು ರೀತಿಯ ಮರಗಳನ್ನು ನೆಟ್ಟು ಪೋಷಿಸಿ. ಒಳ್ಳೆಯ ಗಾಳಿ, ಪಶು ಪಕ್ಷಿ ಕ್ರಿಮಿಗಳಿಗೂ ಆಹಾರ, ಹಂಚಿ ತಿನ್ನುವ ಗುಣ ರೂಢಿಸಿಕೊಳ್ಳಿ. ಇದರಿಂದ ಹೃದಯ ವೈಶಾಲ್ಯವಾಗುತ್ತದೆ. ನಿಮ್ಮ ತ್ಯಾಗದ ಗುಣದಿಂದ ಮುಂದಿನ ಪೀಳಿಗೆ ನೆಮ್ಮದಿ ಕಾಣುವಂತಾಗುತ್ತದೆ. ಯಾವುದೇ ಪರಿಶ್ರಮವೂ ಮರುದಿನವೇ ಫಲ ಕೊಡುವುದಿಲ್ಲ. ತಾಳ್ಮೆಯಿಂದ ಕಾಯಬೇಕು. ನಿಮ್ಮ ಕೊಡುಗೆಯಿಂದ ನಿಮ್ಮ ಮಕ್ಕಳು ಬೆಳಗುತ್ತಾರೆ ಎಂದು ಹೇಳಿದರು.
ಶಿಕ್ಷಣ ತಜ್ಞ ಕೋಡಿರಂಗಪ್ಪ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ರಚನೆಯ ಸಂಗ್ರಹ ‘ಶಾಮಂತಿ 7’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳೆಲ್ಲ ಒಂದೇ. ಎಲ್ಲರಲ್ಲೂ ವಿಶೇಷ ಸಾಮರ್ಥ್ಯ ಹುದುಗಿರುತ್ತದೆ. ಅದಕ್ಕೆ ನೀರೆರೆದು, ಪ್ರೋತ್ಸಾಹಿಸಿ, ಹೊರಬರುವಂತೆ ಮಾಡುವ ಪ್ರತಿಭೆಯ ಅನಾವರಣದ ಕೆಲಸ ಮಾಡುವುದೇ ನಿಜವಾದ ಶಿಕ್ಷಣ. ಅಂಥಹ ಶಿಕ್ಷಣ ಪಡೆದಾಗ ಅಲ್ಲಿ ನಿಜವಾದ ಪ್ರಜಾರಾಜ್ಯ, ಮಾನವೀಯ ಸಮಾಜ ನಿರ್ಮಾಣವಾಗುತ್ತದೆ. ಸತತವಾಗಿ ಏಳನೆಯ ವರ್ಷ ಮಕ್ಕಳ ಬರಹಗಳ ಸಂಗ್ರಹ ಶಾಮಂತಿಯನ್ನು ಹೊರತರುತ್ತಿರುವ ಶಿಕ್ಷಕರು ಹಾಗೂ ಅವರ ಬೆಂಬಲವಾಗಿ ನಿಂತ ಗ್ರಾಮದ ಯುವಕರು ಅಭಿನಂದನಾರ್ಹರು.
ದೇವನೂರು ಮಹಾದೇವ ಹೇಳಿದಂತೆ ನೆಲಕ್ಕೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಾದರೂ ಫಲ ಕೊಟ್ಟೇ ಕೊಡುತ್ತದೆ. ಕನ್ನಮಂಗಲದ ಶಾಲೆ ಅತ್ಯುತ್ತಮ ಶಿಕ್ಷಕರಿಂದ ರೂಪುಗೊಂಡ ಪ್ರಾಯೋಗಿಕ ಶಾಲೆ. ಇಲ್ಲಿ ಮಕ್ಕಳ ಮನಸ್ಸಿನ ಕಲ್ಪನೆ, ಕನಸು ಹೊರಹಾಕಲು ಶಾಮಂತಿಯಿದೆ. ಚಿತ್ರ, ಮಾತು, ಬರವಣಿಗೆ, ನಟನೆಯ ಮೂಲಕ ಮಕ್ಕಳು ಅಭಿವ್ಯಕ್ತಿಸುವಂತಾಗುವುದೇ ನಿಜವಾದ ಶಿಕ್ಷಣ. ದೊಡ್ಡ ಕನಸನ್ನು ಮಕ್ಕಳಲ್ಲಿ ತುಂಬುವ, ಪ್ರೀತಿಯೇ ಬೋಧನಾ ಮಾಧ್ಯಮವಾಗುವ ಶಿಕ್ಷಣ, ಮಕ್ಕಳ ರಚನೆಯ ‘ಶಾಮಂತಿ’ ಇತರ ಶಾಲೆಗಳಿಗೂ ಪ್ರೇರಣೆಯಾಗಲಿ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಡಯಟ್ ಉಪನ್ಯಾಸಕಿ ಮಮತಾ, ಪ್ರವಚನಕಾರ ತಳಗವಾರ ಆನಂದ್, ಬಾಲಕೃಷ್ಣ ಭಾಗವತರ್, ಸಿಆರ್ಪಿ ಚಂದ್ರಶೇಖರ್, ಸ್ನೇಹ ಯುವಕ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್, ಡಿ.ಕೆ.ಶ್ರೀರಾಮ್, ಶಿಕ್ಷಕ ಸುಬ್ರಮಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಆಂಜಿನಪ್ಪ, ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ಮುಖ್ಯ ಶಿಕ್ಷಕ ಜೆ.ಶ್ರೀನಿವಾಸ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!