ಬಯಲುಸೀಮೆಯ ಭಾಗಕ್ಕೆ ನೀರಿಗಾಗಿ ಆಗ್ರಹಿಸಿ ಸೋಮವಾರ ನಡೆಸಿದ ಬಂದ್ ನಗರದಲ್ಲಿ ಯಶಸ್ವಿಯಾಯಿತು.
ರೇಷ್ಮೆ ಗೂಡಿನ ಮಾರುಕಟ್ಟೆ, ಪೆಟ್ರೋಲ್ ಬಂಕ್, ಚಿತ್ರಮಂದಿರಗಳು, ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಸಾರಿಗೆ ವಾಹನ ಸಂಚಾರವಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೀಲರುಗಳು, ದಲಿತ ಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಸರ್ಕಾರಿ ನೌಕರರು, ಲಾರಿ, ಬಸ್ ಮಾಲಿಕರು, ವಕೀಲರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದ್ದರು.
ರೈತ ಮುಖಂಡರು, ನೀರಾವರಿ ಹೋರಾಟ ಸಮಿತಿ ಸದಸ್ಯರು, ವಿವಿಧ ಕನ್ನಡಪರ ಸಂಘಟನೆ ಸದಸ್ಯರು ಒಗ್ಗೂಡಿ ಬೈಕ್ ರ್ಯಾಲಿ ನಡೆಸಿದರು. ಬಸ್ ನಿಲ್ದಾಣದ ಬಳಿ ಮಾನವ ಸರಪಣಿ ರಚಿಸಿ ಪ್ರತಿಭಟಿಸಿದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರಾದರೂ ಪೊಲೀಸರು ರೈಲ್ವೆ ನಿಲ್ದಾಣವನ್ನು ಅಡ್ಡಗಟ್ಟಿದ್ದರಿಂದ ಹೊರಗಡೆ ನಿಂತು ಘೋಷಣೆಗಳನ್ನು ಕೂಗಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಸಾದಲಿ, ದಿಬ್ಬೂರಹಳ್ಳಿ, ಅಬ್ಲೂಡು ಮುಂತಾದೆಡೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಶಾಲಾ ಕಾಲೇಜುಗಳು ಮಾತ್ರ ಇರಲಿಲ್ಲ.
‘ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ಈ ಭಾಗಕ್ಕೆ ಯಾವ ಮೂಲಗಳಿಂದ ನೀರು ತರಲು ಸಾಧ್ಯವೆಂಬುದನ್ನು ತಿಳಿಸುವ ತಜ್ಞರ ಸಮಿತಿ ರಚನೆ ಮತ್ತು ಸಮನ್ವಯ ಸಮಿತಿ ರಚನೆ ಆಗಬೇಕು. ಅಧಿವೇಶನದಲ್ಲಿ ಬಯಲು ಸೀಮೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ನಮ್ಮ ನೀರಿನ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿದೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಈ ಸಂದರ್ಭದಲ್ಲಿ ತಿಳಿಸಿದರು.
- Advertisement -
- Advertisement -
- Advertisement -