ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿ ನಗರಸಭೆಯಿಂದ ಖಾಸಗಿ ಜಮೀನು ಖರೀದಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸುವುದು ಹಾಗೂ ಈಗಾಗಲೇ ಅಬ್ಲೂಡು ಬಳಿ ಖರೀದಿ ಮಾಡಲಾಗಿರುವ ೨೨ ಎಕರೆ ೨೦ ಗುಂಟೆ ಜಮೀನಿನ ನಕ್ಷೆ ತಯಾರಿಸಿ ನಗರ ಯೋಜನಾ ಪ್ರಾಧಿಕಾರದಿಂದ ಶೀಘ್ರವಾಗಿ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ನಗರದ ನಗರಸಭೆ ಕಾರ್ಯಾಲಯದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಂ.ರಾಜಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೌಸ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿದ್ದ ಜಿ ೧ ಮನೆಗಳ ನಿರ್ಮಾಣ ನಿಲ್ಲಿಸಿ ಫಲಾನುಭವಿಗಳಿಗೆ ೨೦*೩೦ ನಿವೇಶನ ಹಂಚಿಕೆ ಮಾಡಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಇನ್ನುಳಿದಂತೆ ನಗರದ ಕೊಳಚೇತರ ಪ್ರದೇಶದ ಅಭಿವೃದ್ದಿಗಾಗಿ ಕೊಳಚೆ ನಿರ್ಮೂಲನೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದರ ಬಗ್ಗೆ ಚರ್ಚಿಸಲಾಯಿತು.
ಸದಸ್ಯರಾದ ಎಸ್.ವಿ.ನಾಗರಾಜರಾವ್ ಮಾತನಾಡಿ ಹಿಂದಿನ ಸಭೆಗಳ ನಡಾವಳಿಗಳನ್ನು ಸಭೆಯ ಅಜೆಂಡಾದಲ್ಲಿ ಸೇರಿಸಿ ನೀಡಿದರೆ ಹಿಂದಿನ ಸಭೆಯಲ್ಲಿ ಏನು ಚರ್ಚೆ ನಡೆಯಿತು ಹಾಗು ಅದರ ಬಗ್ಗೆ ಅಧಿಕಾರಿಗಳು ಏನು ಕ್ರಮ ಜರುಗಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಅದಕ್ಕೆ ಶಾಸಕರು ಮಾತನಾಡಿ ಮುಂದಿನ ಸಭೆಯಿಂದ ಸಭೆಯ ನಡಾವಳಿಗಳನ್ನು ಆಶ್ರಯ ಸಮಿತಿ ಸದಸ್ಯರಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಪೌರಾಯುಕ್ತ ಎಚ್.ಎ.ಹರೀಶ್, ಸದಸ್ಯರಾದ ಸರ್ದಾರ್, ಎಸ್.ವಿ.ನಾಗರಾಜರಾವ್, ಎಂ.ನಾರಾಯಣಸ್ವಾಮಿ, ಅಪರ್ಣರಾಜ್‌ಕುಮಾರ್, ಎಇಇ ಸುಭಾನ್‌ಸಹೇಬ್, ವ್ಯವಸ್ಥಾಪಕ ಮಂಜುನಾಥ್, ಅಭಿಯಂತರ ಸುಧಾಕರ್ ಹಾಜರಿದ್ದರು.