ಪಿ.ಎಲ್.ಡಿ. ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ

0
520

ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಆಯೋಜಿಸಿದ್ದ 2017–18 ನೇ ಸಾಲಿನ 80 ನೇ ವರ್ಷದ ಸಹಕಾರಿ ವರ್ಷದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟನೆ ಮಾಡಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು 2 ಲಕ್ಷದವರೆಗೂ ಮನ್ನಾ ಮಾಡಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಸಾಲ ಮನ್ನಾ ಮಾಡುವ ಬ್ಯಾಂಕುಗಳ ಸಾಲಿಗೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕುಗಳನ್ನು ಸೇರಿಸಬೇಕಾಗಿತ್ತು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಹಕಾರ ಸಂಘಗಳು ಸಮುದಾಯದ ಅಭಿವೃದ್ಧಿ ಜತೆಗೆ ಸಮಾಜದ ಅಭಿವೃದ್ಧಿಯ ಉದ್ದೇಶ ಹೊಂದಿದ್ದರೆ ಮಾತ್ರ ಯಶಸ್ಸು ಲಭಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ ಈ ಸಾಲಿನಲ್ಲಿ ಇಲ್ಲಿನ ಪಿ.ಎಲ್.ಡಿ.ಬ್ಯಾಂಕ್ ಕೂಡಾ ಸೇರಿಕೊಂಡಿದೆ.
ಪರಸ್ಪರ ಕೈ ಜೋಡಿಸಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ತಾವು ಬೆಳೆದು ತಮ್ಮವರನ್ನೂ ಬೆಳೆಸುವುದು ಸಹಕಾರ ತತ್ತ್ವ. ಸಂಘ ಜೀವಿಯಾದ ಮನುಷ್ಯ ಸಹಕಾರ ಜೀವಿಯೂ ಆಗಬೇಕು. ಸ್ವಾರ್ಥ ಜೀವನದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹೀಗಾಗಿ ಸಹಕಾರ ಸಂಘಗಳ ಮೂಲಕ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ನಿಸಬೇಕು. ನಮ್ಮಂತೆ ಇತರರು ಬೆಳೆಯಲು ನಮ್ಮ ಕೈಯಲ್ಲಾದಷ್ಟು ನೆರವಾಗಬೇಕು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ತೀವ್ರ ಬರಗಾಲ ಎದುರಿಸುತ್ತಿರುವ ಬಯಲು ಸೀಮೆಭಾಗದಲ್ಲಿನ ತಾಲ್ಲೂಕಿನ ರೈತರಿಗೆ ಪಿ.ಎಲ್.ಡಿ. ಬ್ಯಾಂಕ್ ಬೆನ್ನೆಲುಬಾಗಿ ನಿಂತಿದೆ. ರೈತರು ಸಂಘಗಳಿಂದ ತೆಗೆದುಕೊಳ್ಳುವಂತಹ ಸಾಲ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡಿದಾಗ ಸಂಘಗಳು ಅಭಿವೃದ್ಧಿಯತ್ತ ಸಾಗುತ್ತವೆ. ಈಗಾಗಲೇ ಸರ್ಕಾರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ವಿಶೇಷ ಅನುದಾನದ ಜೊತೆಗೆ ಬರಗಾಲ ಪೀಡಿತ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಎಲ್ಲಾ ತಾಲ್ಲೂಕುಗಳಲ್ಲಿನ ಪಿ.ಎಲ್.ಡಿ ಬ್ಯಾಂಕುಗಳಲ್ಲಿ ರೈತರು ಮಾಡಿಕೊಂಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಲು ಜಿಲ್ಲೆಯ ನಿಯೋಗದೊಂದಿಗೆ ತೆರಳುತ್ತೇವೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಸಹಕಾರಿ ತತ್ವದಡಿಯಲ್ಲಿ ಸಂಘಗಳು ಮುನ್ನಡೆಯಬೇಕು. ಅರ್ಹಫಲಾನುಭವಿಗಳಿಗೆ ಸೌಲಭ್ಯಗಳು ಸಿಕ್ಕಿದಾಗ ಸಂಘದ ಧ್ಯೇಯೋದ್ದೇಶಗಳು ನೆರವೇರಿದಂತಾಗುತ್ತದೆ. ಸಂಘದ ಏಳಿಗೆಯಲ್ಲಿ ರೈತರ ಪಾತ್ರವೂ ಮಹತ್ತರವಾಗಿದ್ದು, ಆಡಳಿತ ಸಿಬ್ಬಂದಿ ವರ್ಗದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಭೀಮೇಶ್, ಭಕ್ತರಹಳ್ಳಿ ಮುನೇಗೌಡ, ಎ.ರಾಮಚಂದ್ರಪ್ಪ, ಅಶ್ವಥನಾರಾಯಣರೆಡ್ಡಿ ಹಾಜದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!