ಮಕ್ಕಳಿಗೆ ಪೌಷ್ಟಿಕವಾದ ಆಹಾರವನ್ನು ನೀಡಬೇಕು. ಶಾಲೆಯು ತಮ್ಮ ಮನೆಗಳಿಗಿಂತ ಹೆಚ್ಚು ಎಂಬ ಭಾವನೆ ಮಕ್ಕಳಲ್ಲಿ ಮೂಡುವಂಥ ಪರಿಸರ ಶಾಲೆಯಲ್ಲಿ ಸದಾ ಇರಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ ಅವರು ಮಾತನಾಡಿದರು.
ನಾನು ಇದೇ ಶಾಲೆಯಲ್ಲಿಯೇ ಓದಿ ಬೆಳೆದವನು. ಆಗ ಈಗಿನಷ್ಟು ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆಯಿರಲಿಲ್ಲ. ನನ್ನ ಬೆಳವಣಿಗೆಗೆ ನನ್ನ ಶಿಕ್ಷಕರ ಮಾರ್ಗದರ್ಶನವೇ ಕಾರಣ. ಈಗಿನ ಮಕ್ಕಳಿಗೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಏನಾದರೂ ಕೊರತೆಯಿದ್ದಲ್ಲಿ ಶಿಕ್ಷಕರು ಪೋಷಕರು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಸಹಾಯ ಪಡೆದುಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿತವಾಗುವ ಶಾಲಾ ವಾತಾವರಣ ಸುಂದರವಾಗಿರಲಿ, ಕಲ್ಮಷರಹಿತವಾಗಿರಲಿ, ಸರಸ್ವತಿಯ ತಾಣವಾಗಿರಲಿ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ತರಕಾರಿ, ಕಾಯಿ ಪಲ್ಯೆಗಳನ್ನು ನೀಡಬೇಕು. ಶಾಲಾ ಆವರಣದಲ್ಲಿ ಮಕ್ಕಳಿಂದ ಕೈತೋಟ ಮಾಡಿಸುವ ಮೂಲಕ ಮಕ್ಕಳಿಗೆ ಕೃಷಿ ಪಾಠ ಮತ್ತು ಆಹಾರಕ್ಕೆ ಒಳ್ಳೆಯ ತರಕಾರಿ ಬೆಳೆಯಬಹುದೆಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಶಿಕ್ಷಕರಾದ ಎಸ್.ಚಾಂದ್‌ಪಾಷ, ಎಂ.ಅಶೋಕ್, ಎಂ.ಭಾರತಿ ಹಾಜರಿದ್ದರು.
- Advertisement -
- Advertisement -
- Advertisement -