ಸರಳ ಸಜ್ಜನಿಕೆಯ ರಾಜಕಾರಣಿ, ಮುತ್ಸದ್ದಿ, ದಿವಂಗತ ಡಿ.ದೇವರಾಜ ಅರಸು ಅವರ ಜೀವನಶೈಲಿ ಪ್ರತಿಯೊಬ್ಬ ನಾಗರಿಕರು ಹಾಗೂ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದ ದಿವಂಗತ ಡಿ.ದೇವರಾಜು ಅರಸು ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಜದಲ್ಲಿದ್ದ ಅನಿಷ್ಟಪದ್ಧತಿಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ನಡೆಸಿದ ಅವರು, ಬಾಲ್ಯವಿವಾಹ, ತಲೆಯ ಮೇಲೆ ಮಲಹೊರುವ ಪದ್ದತಿ, ಸೇರಿದಂತೆ ಹಲವು ಸಮಾಜ ಘಾತುಕ ಪದ್ದತಿಗಳನ್ನು ನಿಷೇಧ ಮಾಡುವಲ್ಲಿ ಸಫಲರಾದರು. ಜೊತೆಗೆ ೨೦ ಅಂಶಗಳ ಕಾರ್ಯಕ್ರಮ ಪ್ರಥಮ ಬಾರಿಗೆ ಅನುಷ್ಠಾನಕ್ಕೆ ತಂದ ಅವರು, ರಾಜ್ಯವನ್ನು ದೇಶದಲ್ಲಿಯೆ ಮಾದರಿಯ ರಾಜ್ಯವನ್ನಾಗಿ ಮಾಡುವ ಮೂಲಕ ಅವರ ಕಾರ್ಯವೈಖರಿಯನ್ನು ಇತರೇ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಮಾಡಿದರು.
ನಗರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದ ಅವರು, ನಗರಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪಗಳು, ಹಾಗೂ ಒಳಚರಂಡಿಯ ವ್ಯವಸ್ಥೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವರ ಹಾದಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಮುನ್ನಡೆಯಬೇಕು. ಹಿಂದುಳಿದ ವರ್ಗಗಳ ಇಲಾಖೆಯನ್ನು ಹುಟ್ಟುಹಾಕುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ನ್ಯಾಯವನ್ನು ಒದಗಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಗೇಣಿ ಪದ್ದತಿಯ ಮೂಲಕ ಉಳುವರರಿಗೆ ಭೂಮಿಯನ್ನು ಕೊಡಿಸುವ ಮೂಲಕ ಅಭಿವೃದ್ದಿಯ ಚಿಂತಕರಾಗಿದ್ದರು. ಸಮಾಜದಲ್ಲಿನ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಕೂಡಾ ವಾಸಿಸಲು ಸೂರು ದೊರಕಬೇಕು. ಸ್ವಾಭಿಮಾನದ ಜೀವನ ನಡೆಸಲು ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಸರ್ಕಾರದ ಯೋಜನೆಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಹಿಂದುಳಿದ ವರ್ಗಗಳ ಎಲ್ಲಾ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯಬೇಕಾದರೆ, ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಸಿ.ಎಂ. ವಿಭಾಗದ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಂಜಿನಪ್ಪ, ಎಇಇ ಗಣಪತಿಸಾಕರೆ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಸದಸ್ಯ ವೇಣುಗೋಪಾಲ್, ವಕೀಲ ಯೋಗಾನಂದ, ಬಿ.ಸಿ.ಎಂ.ಇಲಾಖಾಧಿಕಾರಿ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ರಜಸ್ವ ನಿರೀಕ್ಷಕ ಸುಭ್ರಮಣಿ, ಲಾರೆನ್ಸ್, ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -