ಚುಕು ಬುಕು ಚುಕು ಬುಕು.. ಎಂದು ಮಕ್ಕಳು ಒಗ್ಗೂಡಿ ಕೂಗುತ್ತಿದ್ದ ದೃಶ್ಯ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಚ್ಚರಿ, ಸಂತಸ ಒಟ್ಟೊಟ್ಟಿಗೆ ಉಂಟು ಮಾಡಿತ್ತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳು ಸೋಮವಾರ ಒಂದು ದಿನದ ಪ್ರವಾಸಕ್ಕೆಂದು ನಗರದ ರೈಲ್ವೆ ನಿಲ್ದಾಣಕ್ಕೆ ಬಂದು ಜಮಾಯಿಸಿದ್ದರು.
ಶಾಲೆಯ ಶಿಕ್ಷಕರು ಒಂದು ದಿನದ ಮಕ್ಕಳ ಪ್ರವಾಸಕ್ಕೆ ಆಯ್ದುಕೊಂಡಿದ್ದುದು ರೈಲನ್ನು. ಶಿಡ್ಲಘಟ್ಟದ ಮೂಲಕ ಕೋಲಾರಕ್ಕೆ ಹೋಗುವ ರೈಲಿನಲ್ಲಿ ಬೆಳಿಗ್ಗೆ ಹೋಗಿ ಶ್ರೀನಿವಾಸಪುರದಲ್ಲಿ ಇಳಿದು, ನಂತರ ಮಧ್ಯಾಹ್ನ ಅದೇ ರೈಲಿನಲ್ಲಿ ಹಿಂದಿರುಗುವುದು ಅವರ ಉದ್ದೇಶವಾಗಿತ್ತು.
ರೈಲಿನಲ್ಲಿ ಎಂದೂ ಪ್ರಯಾಣಿಸದ ಮಕ್ಕಳಿಗೆ ಇದು ಹೊಸ ಅನುಭವವನ್ನು ತಂದಿತ್ತು. ರೈಲ್ವೆ ನಿಲ್ದಾಣವೂ ಅವರಿಗೆ ಹೊಸತು. ಸಾರಿಗೆ ವಾಹನಗಳು, ಲಾರಿ, ರೈಲು ಮುಂತಾದವುಗಳನ್ನು ಪಠ್ಯ ಪುಸ್ತಕದಲ್ಲಿ ಕಂಡಿದ್ದ ಮಕ್ಕಳು ರೈಲಿಗೆ ಟಿಕೇಟ್ ಕೊಳ್ಳುವ ರೀತಿ, ಪ್ಲಾಟ್ ಫಾರಂ, ಲಗೇಜ್ ರೂಂ, ರೈಲ್ವೆ ನಿಲ್ದಾಣದಲ್ಲಿನ ವಿವಿಧ ಭಾಗಗಳ ಬಗ್ಗೆ ಶಿಕ್ಷಕರು ವಿವರಿಸುತ್ತಿದ್ದರೆ ಕುತೂಹಲದಿಂದ ಆಲಿಸುತ್ತಿದ್ದರು. ರೈಲು ಬಂದಾಗಲಂತೂ ಅವರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ರೈಲ್ವೆ ಪ್ರಯಾಣದ ಅನುಕೂಲಗಳು, ಸಾಗಾಣಿಕೆ ವೆಚ್ಚ ಕಡಿಮೆಯಾಗುವುದು, ದೇಶದ ರೈಲ್ವೆ ಸಂಪರ್ಕಗಳು ಮುಂತಾದವುಗಳನ್ನು ಶಿಕ್ಷಕರಾದ ಚಾಂದ್ಪಾಷ, ಅಶೋಕ್ ಮಕ್ಕಳಿಗೆ ವಿವರಿಸುತ್ತಾ ಶ್ರೀನಿವಾಸಪುರ ತಲುಪಿದರು. ದಾರಿಯುದ್ದಕ್ಕೂ ಮಕ್ಕಳ ಪ್ರಶ್ನೆಗಳು, ಹಾಡು, ಆಟ, ನೃತ್ಯ ನಿಲ್ಲದೆ ಸಾಗಿತ್ತು.
ಶಾಲೆಯಿಂದಲೇ ಟೊಮೇಟೋ ಬಾತ್, ಶಾವಿಗೆ ಬಾತ್ ಬುತ್ತಿಯನ್ನು ಪ್ರತಿಯೊಬ್ಬ ಮಗುವೂ ಕಟ್ಟಿಕೊಂಡಿದ್ದರು. ಜೊತೆಗೆ ಹೊಸವರ್ಷಾಚರಣೆಗೆ ಮೂರು ಕೇಜಿ ಕೇಕ್, ಬಿಸ್ಕೇಟ್ಗಳು, ಚಾಕಲೇಟ್ಗಳು ಜೊತೆಗಿದ್ದವು.
ಶ್ರೀನಿವಾಸಪುರದಲ್ಲಿ ಸಾಯಿಬಾಬಾ, ಗಣೇಶನ ದೇವಸ್ಥಾನಗಳನ್ನು, ಬಸ್ ಡಿಪೋ ಮತ್ತು ತರಕಾರಿ ಮಂಡಿಯನ್ನು ಮಕ್ಕಳಿಗೆ ತೋರಿಸಿ ತಿಂಡಿ ತಿಂದು ಕೇಕ್ ಕತ್ತರಿಸಿ ಪುನಃ ಶಿಡ್ಲಘಟ್ಟಕ್ಕೆ ಮರುಪಯಣ. ವಾಪಸ್ಸಾಗುವಾಗಲೂ ಬತ್ತದ ಉತ್ಸಾಹ ಖುಷಿ, ಕುತೂಹಲದ ನೋಟ ಮಕ್ಕಳದ್ದಾಗಿತ್ತು.
‘ಮಕ್ಕಳೊಂದಿಗೆ ಪ್ರವಾಸ ಮಾಡುವುದರಿಂದ ನಾವೂ ಮಕ್ಕಳಾಗುತ್ತೇವೆ. ಅವರಂತೆಯೇ ಹೊರಪ್ರಂಚವನ್ನು ಮುಗ್ಧವಾಗಿ ಗಮನಿಸುತ್ತೇವೆ. ಅವರ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುವಂತಾಗುತ್ತದೆ. ಇದೊಂದು ಅಪರೂಪದ ರೈಲ್ವೆ ಪ್ರವಾಸ’ ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.
‘ನಾನು ರೈಲನ್ನು ನೋಡಿಯೇ ಇರಲಿಲ್ಲ. ಇವತ್ತು ನನ್ನ ಅತ್ಯಂತ ಸಂತಸದ ದಿನವಾಗಿತ್ತು. ಇಂತಹ ಪ್ರವಾಸವನ್ನು ಮತ್ತೆಮತ್ತೆ ನಮ್ಮ ಶಾಲೆಯವರು ಮಾಡಿಸಲಿ’ ಎಂದು ಪದಗಳಲ್ಲಿ ಬಣ್ಣಿಸಲಾಗದ ತನ್ನ ಸಂತಸವನ್ನು ಏಳನೇ ತರಗತಿಯ ಲಕ್ಷ್ಮಿ.
- Advertisement -
- Advertisement -
- Advertisement -