ದೇಶದ ಗಡಿ ಕಾಯುವ ಯೋಧ ಮತ್ತು ಅನ್ನ ಕೊಡುವ ರೈತ ಸಮಾಜದ ಎರಡು ಕಣ್ಣುಗಳಿದ್ದಂತೆ. ಇವೆರಡರಲ್ಲಿ ಯಾವೊಂದಕ್ಕೂ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗು ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಹುತಾತ್ಮ ಯೋಧ ಗಂಗಾಧರ್ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಯೋಧನ ಪತ್ನಿ ಶಿಲ್ಪಾ ಅವರಿಗೆ ೨೫ ಸಾವಿರ ರೂ ಆರ್ಥಿಕ ಸಹಾಯ ಮಾಡಿ ಅವರು ಮಾತನಾಡಿದರು.
ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಗಡಿ ಕಾಯುವ ಯೋಧನ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಬೇಕು. ಅವರು ಗಡಿ ಕಾಯುವುದರಿಂದಲೇ ಇಂದು ನಾವೆಲ್ಲಾ ನಿಶ್ಚಿಂತೆಯಿಂದ ರಾತ್ರಿ ನಿದ್ದೆ ಮಾಡುತ್ತಿದ್ದೇವೆ. ತಂದೆ, ತಾಯಿ, ಹೆಂಡತಿ, ಮಕ್ಕಳು ಎಲ್ಲರಿಂದ ದೂರವುಳಿದು ಸೇನೆಯಲ್ಲಿ ಹಗಲಿರುಳು ದುಡಿದು ಸುಮಾರು ೧೯ ವರ್ಷಗಳ ಕಾಲ ಸೇವೆ ಸಲ್ಲಿಸಿದ ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಯೋಧ ಗಂಗಾಧರ್‌ರ ಸಾವಿನಿಂದ ತುಂಬಾ ನೋವಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿವಾಗಿ ಪ್ರಯತ್ನ ನಡೆಸುತ್ತೇನೆ. ಯೋಧನ ಪತ್ನಿಗೆ ಕೆಲಸ ಹಾಗು ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ, ಯೋಧನ ತಂದೆ ಮುನಿಯಪ್ಪ, ತಾಯಿ ಲಕ್ಷ್ಮಮ್ಮ, ಪತ್ನಿ ಶಿಲ್ಪಾ, ಸಹೋದರ ರವಿಕುಮಾರ್, ಕೊತ್ತನೂರಿನ ಜಯಚಂದ್ರರೆಡ್ಡಿ, ರವಿ, ಪಾಪಿರೆಡ್ಡಿ, ವೆಂಕಟರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -







