ಸಮಾಜದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ, ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರೂ ಸೇರಿದಂತೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಅಪಾರವಾದ ಜ್ಞಾನವಿದ್ದರೂ ಕೂಡಾ ಆರ್ಥಿಕ ಬಿಕ್ಕಟ್ಟುಗಳಿಂದಾಗಿ ಬಹಳಷ್ಟು ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರ್ತಿಸಿ ಪ್ರೋತ್ಸಾಹ ಮಾಡುವಂತಹ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು.
ಇನ್ನು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳಾಗಿದ್ದು ತಾವು ಯಾವ ರೀತಿ ದುಡಿಯುತ್ತೀರಿ, ಶ್ರಮ ಪಡುತ್ತೀರಿ ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ ಬದಲಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸುತ್ತೀರಿ, ಪರೀಕ್ಷೆಯಲ್ಲಿ ಯಾವ ರೀತಿ ಉತ್ತರ ಬರೆದು ಪರಿಣಾಮಕಾರಿ ಅಂಕ ಪಡೆಯುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ ಎಂದರು.
ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕ ಹುಳುಗಳಾಗದಿರಿ. ವಿವಿಧ ಹವ್ಯಾಸ ಅಭಿರುಚಿಗಳು ರೂಡಿಸಿಕೊಳ್ಳಿ, ಈಗಿನ ಸಂಪರ್ಕ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್ ಫೋನ್‍ಗಳು ಸೇರಿದಂತೆ ಕಂಪ್ಯೂಟರ್‍ಗಳನ್ನು ಮನರಂಜನೆಗಷ್ಟೇ ಅಲ್ಲದೆ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದರು.
ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಉದ್ದೇಶ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನೂ ಸಹ ಪುರಸ್ಕರಿಸಲಾಗುತ್ತಿದೆ. ಗ್ರಾಮಾಂತರ ಪ್ರತಿಭೆಗಳಿಗೆ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು ಮುಂಬರುವ ದಿನಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದರು.
ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್ ಎಫ್ ಸಿ ಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಗಜೇಂದ್ರ, ಶ್ರೀನಿವಾಸ್, ಕಸಾಪ ಅಧ್ಯಕ್ಷ ಕೆ.ಮಂಜುನಾಥ್, ಎಸ್.ವಿ.ನಾಗರಾಜ್‍ರಾವ್, ಆನೂರು ದೇವರಾಜ್, ಸುಂದರಾಚಾರಿ, ವೇಣು ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -