ಸ್ವಾತಂತ್ರ್ಯ ಪೂರ್ವದಿಂದಲೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಮತ್ತು ರಾಜಕೀಯವಾಗಿ ಹಿಂದುಳಿದಿರುವ ದಲಿತ ಸಮುದಾಯಗಳಿಗೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ದಲಿತರ ಸಬಲೀಕರಣಕ್ಕೆ ಸಹಕಾರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲೂ ಮೀಸಲು ಪ್ರಾತಿನಿಧ್ಯ ನೀಡಿಲ್ಲ. ಅಧಿಕಾರಕ್ಕೆ ಬಂದಿರುವ ಎಲ್ಲರಿಂದಲೂ ದಲಿತ ಸಮುದಾಯ ವಂಚನೆಗೆ ಒಳಗಾಗಿದ್ದು, ದಲಿತರ ಕೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಅಹಿಂದ ವರ್ಗದವರು ಯಾರೇ ಸ್ಪರ್ಧೆ ಮಾಡಿದರೂ, ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ಕೊಡುವುದರ ಜೊತೆಗೆ, ಅವರ ಪರವಾಗಿ ಪ್ರಚಾರ ಕಾರ್ಯವನ್ನು ಮಾಡುತ್ತೇವೆ. ದಲಿತರಿಗೆ ಚುನಾವಣಾ ಪ್ರಾತಿನಿಧ್ಯವೆಂಬುದು ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶ ವಂಚಿತರಾಗುವುದರ ಜೊತೆಗೆ ಅಭಿವೃದ್ಧಿಯಿಂದಲೂ ವಂಚಿತರಾಗಲಿದ್ದೇವೆ ಆದ್ದರಿಂದ ಎಲ್ಲಾ ಕಡೆಗಳಲ್ಲಿ ದಲಿತರನ್ನು ಸಂಘಟಿಸುತ್ತೇವೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ರವಿ, ಹುಜುಗೂರು ವೆಂಕಟೇಶ್, ಲಕ್ಷ್ಮೀನಾರಾಯಣ, ದೊಡ್ಡತಿರುಮಳಯ್ಯ, ಲಕ್ಷ್ಮಣ್, ನರಸಿಂಹಮೂರ್ತಿ, ಮುನಿಕೃಷ್ಣ, ನರಸಿಂಹ, ಅನಿಲ್ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -







