‘ಇನ್ನೊಂದ್ ನಾಲ್ಕು ಇಕ್ಕಮ್ಮ ಅವನಿಗೆ’ ಎಂದು ಆವೇಷಭರಿತರಾಗಿ ಸಭಿಕರ ಮಧ್ಯೆ ಕುಳಿತಿದ್ದ ರೈತ ಗೋಪಾಲಗೌಡ ಕೂಗಿದರು. ಪ್ರೇಕ್ಷಕರ ಮನಸ್ಸಿನ ಭಾವನೆಯನ್ನು ಅವರು ಮಾತಿನ ಮೂಲಕ ಹೊರಹಾಕಿದ್ದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮದಲ್ಲಿ ರಂಗಪಯಣ ತಂಡದವರು ನಡೆಸಿಕೊಟ್ಟ ‘ಗುಲಾಬಿ ಗ್ಯಾಂಗ್’ ನಾಟಕದಲ್ಲಿ ಹೆಣ್ಣನ್ನು ಶೋಷಿಸುವ ಗಂಡಸಿಗೆ ಮಹಿಳೆಯರು ಕೋಲಿನ ರುಚಿ ತೋರಿಸುವ ದೃಶ್ಯ ಕಂಡು ಪ್ರೇಕ್ಷಕರ ಉದ್ಘಾರವದು.
‘ಗ್ಯಾಂಗ್ ಕಟ್ಬೇಕು ಅಂತ ಡಿಸೈಡ್ ಮಾಡಿದ್ ದಿನಾನೇ ಭಯಾ ಅನ್ನೋ ಪದಾನ ಅಟ್ಟದ್ ಮೇಲೆ ಬಿಸಾಕ್ ಬಂದಿದ್ದೀನಿ’ ಎಂದು ಗುಡುಗುವ ಸಂಪತ್ ದೇವಿ ಹೆಣ್ಣಿನ ಶೋಷಣೆ ವಿರುದ್ಧ ದಿಟ್ಟ ಹೋರಾಟ ನಡೆಸಿರುವ ಮಾದರಿ ಮಹಿಳೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ದ ಉತ್ತರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಮಹಿಳೆಯರು ಸೆಟೆದು ನಿಂತದ್ದೇ ಗುಲಾಬಿ ಗ್ಯಾಂಗ್. ‘ಅಸಹಾಯಕರೆಂದುಕೊಂಡಿದ್ದ ಹೆಣ್ಣು ಮಕ್ಕಳ ಗ್ಯಾಂಗ್ ವಾರು’ ಎಂದು ಬಿಂಬಿತವಾದ ಈ ನೈಜ ಘಟನೆಯನ್ನು ಆಧರಿಸಿ ಕನ್ನಡದಲ್ಲಿ ಪ್ರವೀಣ್ ಸೂಡ ರಂಗರೂಪವನ್ನು ನೀಡಿದ್ದರೆ, ನಾಟಕಕ್ಕೆ ಉತ್ತರ ಕರ್ನಾಟಕದ ಸೊಗಡು ಕೊಟ್ಟು ವಿನ್ಯಾಸ, ನಿರ್ದೇಶನ ಮತ್ತು ಸಂಗೀತವನ್ನು ರಾಜ್ಗುರು ಹೊಸಕೋಟೆ ಮಾಡಿದ್ದಾರೆ. ನಯನ ಜೆ.ಸೂಡ ಅವರ ನಿರ್ವಹಣೆಯಲ್ಲಿ ಮೂಡಿಬಂದ ಗುಲಾಬಿ ಗ್ಯಾಂಗ್ ನಾಟಕ ಮಧ್ಯರಾತ್ರಿಯಾದರೂ, ವಿಪರೀತ ಚಳಿಯಿದ್ದರೂ ಪ್ರೇಕ್ಷಕರು ಕುರ್ಚಿ ಬಿಟ್ಟು ಏಳದಂತೆ ಮನಸ್ಸೆಳೆಯಿತು.
ಉತ್ತರ ಪ್ರದೇಶದ ಬುಂದೇಲಖಂಡ್ ಜಿಲ್ಲೆ ಬಡೋಸಾ ಹಳ್ಳಿಯ ರೈತನೊಬ್ಬ ದಿನಾಲು ಕುಡಿದು ಬಂದು ಹೆಂಡತಿಯನ್ನು ಹಿಂಸಿಸುತ್ತಿದ್ದನಂತೆ. ಸಂಪತ್ ದೇವಿಗೆ ದಿನಾಲೂ ಅಮಾಯಕ ಹೆಣ್ಣಿನ ಮೇಲಾಗುವ ಈ ಅನ್ಯಾಯವನ್ನು ಸಹಿಸಲು ಆಗದೇ ಹೊಡೆಯುತ್ತಿರುವ ರೈತನನ್ನು ತಡೆದು ಬುದ್ದಿ ಹೇಳಿ ಬಂದಳಂತೆ. ಆದರೆ ರೈತ ಅದನ್ನು ಕೇಳೋಕೆ ನೀನ್ಯಾರು ಎಂದು ಆಕೆಯನ್ನು ಬಾಯಿಗೆ ಬಂದಂತೆ ಬಯ್ದನಂತೆ. ಈ ಅನ್ಯಾಯವನ್ನು ಕೊಣೆಗಾಣಿಸಬೇಕೆಂದು ನಿರ್ಧರಿಸಿದ ಸಂಪತ್ ದೇವಿ, ಊರಿನ ಕೆಲ ಹೆಂಗಸರನ್ನು ಸೇರಿಸಿಕೊಂಡು, ಮರುದಿನ ಅವನ ಮನೆಗೆ ನುಗ್ಗಿ ಆತನಿಗೆ ಹಿಗ್ಗಾ ಮುಗ್ಗಾ ದೊಣ್ಣೆ ಸೇವೆ ಮಾಡಿದ್ದರಂತೆ. ಆ ರೈತ ಇನ್ನೆಂದೂ ಹೆಂಡತಿಯನ್ನು ಹಿಂಸಿಸುವುದಿಲ್ಲ ಎಂದು ಸಂಪತ್ ದೇವಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದನಂತೆ. ಹೀಗೆ ಆರಂಭವಾದದ್ದೇ ಗುಲಾಬಿ ಗ್ಯಾಂಗ್. ಹೆಣ್ಣಿನ ವಿರುದ್ಧ ನಡೆಯುತ್ತಿರುವ ನಡೆಯುತ್ತಿರುವ ಮಾನಸಿಕ ಹಾಗೂ ದೈಹಿಕ ಶೋಷಣೆಯನ್ನು ಸಹಿಸಲಾಗದೆ ಆಕ್ರೋಶಿತಳಾದ ಸಂಪತ್ ದೇವಿ ಎಂಬ ದಿಟ್ಟ ಮಹಿಳೆಯಿಂದ ಆರಂಭವಾದ ಪುಟ್ಟ ಹೋರಾಟ ಇಂದು ಬಹುದೊಡ್ಡ ಗ್ಯಾಂಗ್ ಆಗಿ ಬೆಳೆದಿದೆ.
ನಾಟಕದಲ್ಲಿ ರಂಗದ ಮೇಲೆ ಪರಿಕರಗಳನ್ನು ಬದಲಿಸುವುದು, ಪಾತ್ರಧಾರಿಗಳು ಶೀಘ್ರವಾಗಿ ಒಂದು ಪಾತ್ರದಿಂದ ಮತ್ತೊಂದಕ್ಕೆ ಪರಕಾಯ ಪ್ರವೇಶ ಮಾಡುವುದು, ಹಾವ ಭಾವ, ಅಭಿನಯ, ಉತ್ತರ ಕನ್ನಡದ ಭಾಷೆಯ ಸೊಗಡನ್ನು ಕಂಡು ಜನರು ನೈಜ ಘಟನೆಯನ್ನು ಕಂಡಂತೆ ಪಾತ್ರಗಳೊಂದಿಗೆ ಒಂದಾದರು. ಚಪ್ಪಾಳೆ ಹರ್ಷೋದ್ಘಾರಗಳೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಗುಲಾಬಿ ಸೀರೆ, ಕೈಯಲ್ಲಿ ಒಂದು ದೊಣ್ಣೆ ಹಿಡಿದ ಗುಲಾಬಿ ಗ್ಯಾಂಗ್ ಸಮಾಜಮುಖಿಯಾದ ನಾಟಕ. ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ಕುವೆಂಪು ಮಾತಿನಂತೆ ಹೆಣ್ಣಿನ ಶೋಷಣೆ ವಿರುದ್ಧ ಹೋರಾಡುತ್ತಿರುವ ಸಂಪತ್ ದೇವಿ ನಮಗೆಲ್ಲರಿಗೂ ಮಾದರಿ. ರಂಗರೂಪಕ್ಕೆ ತಂದ ಕಲಾವಿದರು, ನಮ್ಮೂರಿಗೆ ಕರೆಸಿದ ತಾಲ್ಲೂಕು ಆಡಳಿತ ಇಬ್ಬರಿಗೂ ನಾವು ಆಭಾರಿಗಳು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
- Advertisement -
- Advertisement -
- Advertisement -
- Advertisement -