ಸುಡಾನ್ ದೇಶದ ನ್ಯಾಯಾಲಯದ 25 ಮಂದಿ ನ್ಯಾಯಾಧೀಶರುಗಳು ಸೋಮವಾರ ಶಿಡ್ಲಘಟ್ಟದ ನ್ಯಾಯಾಲಯಕ್ಕೆ ಭೇಟಿ ನೀಡಿ ಇಲ್ಲಿ ನ್ಯಾಯಾಲಯಗಳ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ತೀರ್ಪುದಾನ ನೀಡುವ ಕುರಿತು ಮಾಹಿತಿ ಪಡೆದರು.
ಜಿಲ್ಲಾ ಮತ್ತು ಗಣತಂತ್ರ ಸುಡಾನ್ ದೇಶದ ನ್ಯಾಯಾಲಯದ ನ್ಯಾಯಾಧೀಶರಾದ ಗಾಸೀಮ್ ಮಹಮ್ಮದ್ ಎಲ್ಕೇದರ್, ಅಬ್ದುಲ್ ರೆಹಮಾನ್, ಸುಡಾನ್ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಡೇರರ್ ಯೂಸೆಫ್, ಸೈಯದ್ಅಹಮ್ಮದ್ ಯೂಸೆಫ್ ಸೇರಿದಂತೆ ಜಿಲ್ಲಾ ಮತ್ತು ವಿವಿಧ ಸ್ತರಗಳ ನ್ಯಾಯಿಕ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧೀಶರು ಆಗಮಿಸಿದ್ದರು.
ಹೈಕೋರ್ಟ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಕ್ಕೆ ಭೇಟಿ ನೀಡಿ ನಂತರ ತಾಲ್ಲೂಕು ಮಟ್ಟದ ನ್ಯಾಯಾಲಯದ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ತೀರ್ಪುದಾನ ಸೇರಿದಂತೆ ಕಾನೂನು ಸೇವೆಗಳ ಪ್ರಾಧಿಕಾರ ವ್ಯವಸ್ಥೆ ಮೊದಲಾದ ತಾಂತ್ರಿಕ ವ್ಯವಸ್ಥೆಯಿಂದ ಕೂಡಿದ ಮತ್ತು ಇ-ಕೋರ್ಟ್ ಮೂಲಕ ಕಕ್ಷಿದಾರರಿಗೆ ಮತ್ತು ವಕೀಲರಿಗೆ ನೀಡುತ್ತಿರುವ ಸೇವಾ ಸೌಲಭ್ಯಗಳು ಮತ್ತು ತ್ವರಿತ ನ್ಯಾಯಿಕ ನಿರ್ವಹಣೆ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪೊಚ್ಚಾಪುರೆ, ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ ಅವರು ಸುಡಾನ್ ನ್ಯಾಯಾಧೀಶರನ್ನು ಸ್ವಾಗತಿಸಿ, ಇಲ್ಲಿನ ನ್ಯಾಯಾಲಯಗಳ ಕಾರ್ಯವೈಖರಿ ಪರಿಚಯಿಸಿ ಇಲ್ಲಿರುವ ವಕೀಲರ ಜೊತೆ ಸಂವಾದ ನಡೆಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆ ಕೃಷಿಯ ಬಗ್ಗೆ ತಿಳಿಯಲು ಬಯಸಿದ ಅವರಿಗೆ ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ರೇಷ್ಮೆ ಗೂಡನ್ನು ತರಿಸಿ, ರೇಷ್ಮೆ ತಯಾರಿಕೆ, ಅದರ ಹಿಂದಿನ ಪರಿಶ್ರಮದ ಬಗ್ಗೆ ವಿವರಿಸಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರೇಗೌಡ, ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಉಪಸ್ಥಿತರಿದ್ದರು.
- Advertisement -
- Advertisement -
- Advertisement -