ಶಿಸ್ತನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸನ್ನು ಕಾಣುತ್ತೀರಿ ಎಂದು ಏರ್ ವೈಸ್ ಮಾರ್ಷಲ್ ಡಾ.ಟಿ.ನಾಗರಾಜ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಮಂಗಳವಾರ ನಡೆದ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ನ 30ನೇ ಶಾಲಾ ವಾರ್ಷಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ವ್ಯಾಯಾಮ, ಉತ್ತಮ ಹವ್ಯಾಸಗಳು, ನಡೆ ನುಡಿ ಎಲ್ಲದರಲ್ಲೂ ಶಿಸ್ತು ಇರಬೇಕು. ಬಲವಂತವಾಗಿ ಯಾರಿಗೋ ಹೆದರಿ ಶಿಸ್ತನ್ನು ಪಾಲಿಸಬಾರದು. ಅದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕು. ಶಿಸ್ತಿನ ಅಭ್ಯಾಸದಿಂದ ಸಿಗುವ ಫಲಗಳನ್ನು ಕಾಣುತ್ತಾ ಹೋದಂತೆ ಅದನ್ನು ಸಂತಸದಿಂದ ಪಾಲಿಸುತ್ತೀರಿ ಎಂದು ಹೇಳಿದರು.
ದೇಶವನ್ನು ರಕ್ಷಿಸುವ ವಾಯುಸೇನೆ, ಭೂಸೇನೆ ಮತ್ತು ನೌಕಾಸೇನೆ ಕಾರ್ಯನಿರ್ವಹಣೆ, ಅವುಗಳ ಸೇವೆಗಳು ಹಾಗೂ ಅದರಲ್ಲಿ ಸೇರಲು ಬೇಕಾದ ಮಾನದಂಡಗಳ ಬಗ್ಗೆ ವಿವರಿಸಿ, ಮಕ್ಕಳಿಗೆ ಅವುಗಳನ್ನು ಸೇರಲು ಬೇಕಿರುವ ಅಗತ್ಯತೆಗಳನ್ನು ತಿಳಿಸಿದರು.
ಅಮೆರಿಕೆಯಿಂದ ಹಿಂದಿರುಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಜಾತ ನಾಯ್ಡು ಕದಂ ಮತ್ತು ಮಂಜುನಾಥ ಕದಂ ದಂಪತಿಗಳನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿಕ್ಷಕಿ ಚೇತನ ಶಾಲೆ ಬೆಳೆದು ಬಂದ ಹಾದಿ ಹಾಗೂ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ನೀಡಿದರು.
ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ದತ್ತಿ ಎಸ್.ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ನಾರಾಯಣಸ್ವಾಮಿ, ಸಮಾಜವಾದಿ ಚಿಂತಕರಾದ ಬಾಪು ಹೆದ್ದೂರು ಶೆಟ್ಟಿ, ಪ್ರೊ.ಹನುಮಂತ, ಟ್ರಸ್ಟಿಗಳಾದ ವೆಂಕಟಮೂರ್ತಿ, ಬಿ.ಕೆ.ರಾಮಚಂದ್ರ, ದೇವರಾಜು, ಮುನಿರಾಜು, ಶಿಕ್ಷಕ ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -