ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಂಪೌಂಡ್ ಇಲ್ಲದ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ನರೇಗಾದಲ್ಲಿ ಅವಕಾಶವಿದೆ. ಆದಷ್ಟು ಬೇಗ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿ, ಅನುಮೋದನೆಯನ್ನು ಪಡೆದು ಕೆಲಸ ಪ್ರಾರಂಭಿಸಿ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿಗೆ ಬುಧವಾರ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಕಳೆದ ಸಾಲಿಗಿಂತ ಹತ್ತುಪಟ್ಟು ಕೆಲಸವನ್ನು ಮಾಡಿರುವುದು ಅಭಿನಂದನೀಯ. ಆದರೆ ಇನ್ನೂ ಹೆಚ್ಚು ಕೆಲಸ ಮಾಡಿಸಿ. ಇದರಿಂದ ಗ್ರಾಮಸ್ಥರಿಗೆ ಕೆಲಸ ಹಾಗೂ ಹಣ ಸಿಗುತ್ತದೆ. ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯ್ತಿಯನ್ನಾಗಿಸಬೇಕು. ಅದಕ್ಕಾಗಿ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಶ್ರಮಿಸಬೇಕು. ಕುಡಿಯುವ ನೀರು ಯಾವುದೇ ಗ್ರಾಮದಲ್ಲೂ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಲಗಿರಿ ಗಿಡಗಳಿರಬಾರದು. ಸರ್ಕಾರಿ ಜಾಗಗಳಲ್ಲಿ ನರೇಗಾ ಯೋಜನೆಯಡಿ ಗಿಡಗಳನ್ನು ನೆಡುವ ಅವಕಾಶವಿದ್ದು ಹಸಿರನ್ನು ಬೆಳೆಸುವ ಯೋಜನೆಯನ್ನು ಯಶಸ್ವಿಯಾಗಿ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಎಲ್.ಮುತ್ತುಗದಹಳ್ಳಿಯಲ್ಲಿ ನಡೆದಿರುವ ಕಾಮಗಾರಿಗಳು, ನರೇಗಾ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಿರುವ ಶೌಚಾಲಯಗಳ ಪ್ರಗತಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಯ್ಯ, ಸಹಾಯಕ ಎಂಜಿನಿಯರ್ ವಾದಿರಾಜ್, ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ.ಎಂ.ಜಯರಾಮ್, ಎ.ಎಂ.ತ್ಯಾಗರಾಜ್, ಅಭಿವೃದ್ಧಿ ಅಧಿಕಾರಿ ಅಂಜನ್‌ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -