ಮೂರು ಕೋಟಿ ರೂ ವೆಚ್ಚದಲ್ಲಿ ಹಂತಹಂತವಾಗಿ ಮೂರು ವರ್ಷಗಳಲ್ಲಿ ಅತ್ಯುತ್ತಮ ಸಸ್ಯೋದ್ಯಾನವನ್ನು ಅರಣ್ಯ ಇಲಾಖೆ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಅತ್ಯುತ್ತಮ ತಾಣವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಪಟ್ರಹಳ್ಳಿ ಅರಣ್ಯ ಪ್ರದೇಶದಲ್ಲಿ ಶನಿವಾರ ಸಸ್ಯೋದ್ಯಾನದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಮಕ್ಕಳ ಆಟದ ಮೈದಾನ, ಗ್ರೀನ್ ಕ್ಯಾಂಟೀನ್, ಪರಿಸರ ಅಧ್ಯಯನ ಕೇಂದ್ರ, ವಾಚ್‌ಟವರ್, ಪಕ್ಷಿವೀಕ್ಷಣೆ, ಚಿಟ್ಟೆ ವೀಕ್ಷಣೆಗೆ ಅವಕಾಶ, ಸ್ಥಳೀಯ ವಸ್ತುಗಳ ಮಾರಾಟ ಕೇಂದ್ರ ಮುಂತಾದ ಹಲವು ಉದ್ದೇಶಗಳಿಂದ ಈ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಜಲ ಮೂಲವನ್ನು ಕಾಪಾಡಿಕೊಂಡು ಬಂದಿರುವ ಅರಣ್ಯಗಳೆಂಬ ವೃಕ್ಷ ಸಮೂಹಗಳನ್ನು ರಕ್ಷಿಸಿಸದಿದ್ದಲ್ಲಿ ಮತ್ತು ಹೆಚ್ಚಿಸದಿದ್ದಲ್ಲಿ ಮನುಕುಲಕ್ಕೆ ಉಳಿಗಾವಿಲ್ಲ ಎಂಬ ಆಶಯವನ್ನು ಜನರಿಗೆ ತಲುಪಿಸಲು ಸಸ್ಯೋದ್ಯಾನವನ್ನು ಅರಣ್ಯ ಇಲಾಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮೊದಲ ಹಂತವಾಗಿ 40 ಲಕ್ಷ ರೂಗಳು ಬಿಡುಗಡೆಯಾಗಿದ್ದು, ವಾಯುವಿಹಾರಕ್ಕೆ, ಕುಡಿಯುವ ನೀರಿಗೆ, ಕೂರಲು ಬೆಂಚುಗಳಿಗೆ, ಶೌಚಾಲಯ, ಫಲಕಗಳು ಮುಂತಾದವುಗಳಿಗೆ ಬಳಸಲಾಗುತ್ತದೆ. ಜನರಿಗೆ ಮನೋಲ್ಲಾಸ, ಮಕ್ಕಳಿಗೆ ಜ್ಞಾನ ನೀಡುವ ಸ್ಥಳವಾಗಲಿದೆ ಎಂದರು.
ಬೆಂಗಳೂರು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಮಾತನಾಡಿ, ಸಸ್ಯೋದ್ಯಾನವನ್ನು ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿದೆಡೆ ಅರಣ್ಯ ಇಲಾಖೆಯಿಂದ ಮಾಡುತ್ತಿದ್ದು, ಈ ವರ್ಷದಿಂದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ಸಸ್ಯೋದ್ಯಾನವನ್ನು ಸಾಲುಮರದ ತಿಮ್ಮಕ್ಕ ಅವರ ಹೆಸರಿಟ್ಟು ನಿರ್ಮಿಸುತ್ತಿದ್ದೇವೆ.
ಸಸ್ಯೋದ್ಯಾನದ ಮುಖ್ಯ ಉದ್ದೇಶ ನಗರದ ಆಸುಪಾಸಿನಲ್ಲಿರುವ ಚಿಕ್ಕಚಿಕ್ಕ ಅರಣ್ಯ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ. ಆ ಮೂಲಕ ಸಾರ್ವಜನಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು. ಜನರು ಅಲ್ಲಿಗೆ ಬಂದು ಜೀವ ವೈವಿಧ್ಯ, ಹಕ್ಕಿ, ಚಿಟ್ಟೆ, ಸಸ್ಯಗಳ ಪರಿಚಯ ಮಾಡಿಕೊಳ್ಳುವುದರಿಂದ ಒಂದೆಡೆ ಅವರಲ್ಲಿ ಪರಿಸರ ಕಾಳಜಿ ಮೂಡುತ್ತದೆ, ಮತ್ತೊಂದೆಡೆ ಹಸಿರನ್ನು ಉಳಿಸಿ ಬೆಳೆಸುವ ಬಗ್ಗೆ ಅವರಲ್ಲಿ ಪ್ರೇರಣೆ ಮೂಡುತ್ತದೆ ಹಾಗೂ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಅರಣ್ಯ ಇಲಾಖೆಯು ‘ನೀರಿಗಾಗಿ ಅರಣ್ಯ’ ಎನ್ನುವ ಘೋಷವಾಕ್ಯದಡಿ ಪ್ರಸಕ್ತ ಸಾಲಿನಲ್ಲಿ ಆರು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮದ ಜೊತೆಗೆ ಕೋಟಿ ಕೋಟಿ ಬೀಜವನ್ನು ಹೊತ್ತ ಮಣ್ಣಿನ ಉಂಡೆಗಳನ್ನು ಬಿತ್ತುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದೆ. ಕಾಡಿನ ರಕ್ಷಣೆಯನ್ನು ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಜನರ ಸಹಕಾರ ಇದ್ದಾಗ ಮಾತ್ರ ಕಾಡಿನ ರಕ್ಷಣೆ ಮತ್ತು ನಿರ್ವಹಣೆ ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಗಣ್ಯರು ಸಸ್ಯೋದ್ಯಾನದಲ್ಲಿ ಗಿಡಗಳನ್ನು ನೆಟ್ಟರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಡಿ.ಮಂಜುನಾಥ್, ಸಹಾಯಕ ಅರಣ್ಯ ಅಂರಕ್ಷಣಾಧಿಕಾರಿ ಆರ್.ವೆಂಕಟರೆಡ್ಡಿ, ವಲಯ ಅರಣ್ಯಾಧಿಕಾರಿಗಳಾದ ತಿಮ್ಮರಾಯಪ್ಪ, ಮಂಜುನಾಥ್, ಅಶ್ವತ್ಥಪ್ಪ, ಚಿನ್ನಪ್ಪಯ್ಯ, ಸಿ.ಟಿ.ಗೌಡ, ನಿಜಾಮುದ್ದೀನ್, ಉಪವಲಯ ಅರಣ್ಯಾಧಿಕಾರಿ ರಾಮಾಂಜಿನೇಯುಲು, ಮುಖಂಡರಾದ ರಾಂಬಾಬು, ವೆಂಕಟೇಶ್, ಮುನಿವೆಂಕಟಸ್ವಾಮಿ, ಲಕ್ಷ್ಮೀನಾರಾಯಣ, ಮುಷ್ಟಾಕ್, ಕನಕಪ್ರಸಾದ್, ಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -