ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಖಾಸಗಿ ಸಮುದಾಯದ ಸಹಭಾಗಿತ್ವದಲ್ಲಿ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಬಣ್ಣ ಹೊಡೆದು ಅಂದಗೊಳಿಸಲಾಗಿದೆ.
ಬೆಂಗಳೂರಿನ ಟೀಮ್ ಡಿಒಎಚ್ ಮತ್ತು ಲೈಕನ್ ರೈಡರ್ಸ್ ಎಂಬ ಹವ್ಯಾಸಿ ಬುಲೆಟ್ ಬೈಕ್ ಓಡಿಸುವ ಗುಂಪಿನ ಸುಮಾರು ೨೫ ಯುವಕರು ಮತ್ತು ಯುವತಿಯರು ಒಗ್ಗೂಡಿ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಶಬರಿ ಮತ್ತು ಗೌತಮ್ ನೇತೃತ್ವದ ಹವ್ಯಾಸಿ ಬುಲೆಟ್ ಬೈಕ್ ಓಡಿಸುವ ಸದಸ್ಯರು ಪ್ರತಿ ತಿಂಗಳು ಬುಲೆಟ್ ಬೈಕಿನಲ್ಲಿ ವಿವಿದೆಡೆ ಹೋಗುವ ರೂಢಿಯಿಟ್ಟುಕೊಂಡಿದ್ದು, ಅವರಲ್ಲಿ ಯುವತಿಯರೂ ಇದ್ದಾರೆ. ಈ ಹವ್ಯಾಸಿ ತಂಡವು ಬೈಕ್ ಓಡಿಸುವುದರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಆಲೋಚಿಸಿ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಸುಗಟೂರಿಗೆ ಬಂದಿದ್ದಾರೆ.
ಶನಿವಾರ ಮತ್ತು ಭಾನುವಾರ ಗ್ರಾಮದಲ್ಲಿಯೇ ತಂಗಿದ್ದು ಅಂಗನವಾಡಿಯಿಂದ ಹಿಡಿದು ಶಾಲೆಯ ಎಲ್ಲಾ ಕೊಠಡಿಗಳಿಗೆ ತಾವೇ ಬಣ್ಣ ಬಳಿದಿದ್ದಾರೆ. ಆಗಸ್ಟ್-೧೫ ರಂದು ಕಾರ್ಯಕ್ರಮದಲ್ಲಿ ಕ್ರೀಡೋಪಕರಣಗಳು ಮತ್ತಿತರ ಅಗತ್ಯ ಪರಿಕರಗಳನ್ನು ಶಾಲೆಗೆ ವಿತರಿಸಲು ಅವರು ನಿರ್ಧರಿಸಿದ್ದಾರೆ.
- Advertisement -
- Advertisement -
- Advertisement -