ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚುಂಚನಕುಪ್ಪೆ ಸಿ.ಬಿ.ಸಿದ್ಧಗಂಗಪ್ಪ ಸುಶೀಲಮ್ಮ ದತ್ತಿ ಉಪನ್ಯಾಸ, ವಚನಶ್ರಾವಣ ವಚನವ್ಯಾಖ್ಯಾನ ಹಾಗೂ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ಮಾತನಾಡಿದರು.
ಸತ್ಯಶುದ್ಧ ಕಾಯಕ, ದಾಸೋಹ, ಏಕದೇವೋಪಾಸನೆಯಂತಹ ಶರಣರ ಆದರ್ಶಗಳು ಸಾರ್ವಕಾಲಿಕ ಅನುಕರಣೀಯವಾದುವು. ಸಾಮಾಜಿಕ ಸೇವೆಯೂ ಅವರ ಬಳುವಳಿಯೇ ಎಂದು ಅವರು ತಿಳಿಸಿದರು.
ವಚನಕಾರರು ಹಾಗು ಶರಣರು ತಮ್ಮ ಕಾಯಕ ಬದುಕಿನಲ್ಲಿ ಗಳಿಸಿದ ಅನುಭವಗಳ ಸಾರವನ್ನು ವಚನಗಳ ರೂಪದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದರು.
ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿದಾನಂದಬಿರಾದಾರ್ ಅವರು ವಚನವ್ಯಾಖ್ಯಾನ ಮಾಡಿ, ಅಜ್ಞಾನದ ಅಂಧಕಾರ, ಜೀವನದ ಮಾರ್ಗದ ಕತ್ತಲನ್ನು ಹೋಗಲಾಡಿಸಲು ಜ್ಞಾನದ ಬೆಳಕಿನ ಅಗತ್ಯವಿದೆ. ಶರಣರ ವಚನಗಳಲ್ಲಿ ಬದುಕಿನ ಮಾರ್ಗಗಳಿವೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಧರ್ಮಗಳ ನಡುವೆ ಬೇದ ಭಾವ ಬಾರದೇ ಮಾನವಧರ್ಮದ ಪಾಲನೆಯಾಗುವಂತಾಗಬೇಕು. ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಶರಣರ ಗುರು, ಲಿಂಗ, ಜಂಗಮ ತತ್ವಗಳ ಪಾಲನೆಯು ಶ್ರೇಷ್ಟವಾದುದು. ಮಕ್ಕಳ ದಿಸೆಯಿಂದಲೇ ವಚನಗಳ ಅಧ್ಯಯನಶೀಲತೆಯನ್ನು ಬೆಳೆಸಬೇಕು. ವಚನಗಳ ಆಳವಾದ ಅರ್ಥವನ್ನು ಪ್ರಸಾರ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕಗಳನ್ನು ಹಾಗೂ ಪ್ರತಿಭಾ ಕಾರಂಜಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಕೆ.ಎಲ್.ಅನಿತಾ, ಹಾಜರಿದ್ದರು
- Advertisement -
- Advertisement -
- Advertisement -
- Advertisement -