ಸಮಾಜದಲ್ಲಿ ಹಿರಿಯ ನಾಗರಿಕರ ರಕ್ಷಣೆ ಮತ್ತು ಹಕ್ಕುಗಳ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಮನೆಯಲ್ಲಿಯೂ ಹಿರಿಯ ನಾಗರಿಕರಿಗೆ ಪ್ರೀತಿ-ಸಹಾನುಭೂತಿ ಸಿಗುತ್ತಿಲ್ಲ. ವಯಸ್ಸಾದ ಹಿರಿಯ ನಾಗರಿಕರಿಗೆ ಸಹಾನುಭೂತಿ ಹಾಗೂ ಪ್ರೀತಿ ನೀಡಿದಲ್ಲಿ ನೆಮ್ಮದಿ ಜೀವನ ಮಾಡಲು ಸಾಧ್ಯವಾಗುತ್ತದೆ.
ಎಲ್ಲಾ ಮನೆಗಳಲ್ಲೂ ಹಲವಾರು ಒತ್ತಡಗಳಿಂದ ತಂದೆ, ತಾಯಿ, ಅಜ್ಜ, ಅಜ್ಜಿ ಹಾಗೂ ಇತರ ಹಿರಿಯರ ಕಡಗಣನೆ ಸಾಮಾನ್ಯವಾಗಿದೆ. ಇದರಿಂದ ಅವರು ಖಿನ್ನತೆಗೊಳಗಾಗಿ ಹಲವಾರು ಸಮಸ್ಯೆಗಳಿಗೀಡಾಗುತ್ತಾರೆ. ಇದನ್ನು ದೂರ ಮಾಡುವ ಕೆಲಸ ಕಿರಿಯರಿಂದ ನಡೆಯಬೇಕು ಎಂದು ಅವರು ತಿಳಿಸಿದರು.
ಕಾನೂನು ಅರಿವು ಪ್ರತಿಯೊಬ್ಬ ನಾಗರಿಕರಿಗೆ ಅಗತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರು ಎದುರಿ ಸುತ್ತಿರುವ ಕಾನೂನಾತ್ಮಕ ತೊಡಕು ಸರಿಪಡಿಸಲು ಕಾನೂನಿನ ಸಹಕಾರ ಅವಶ್ಯ ಎಂದು ತಿಳಿಸಿದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ಯಾರಿಗಾದರೂ ಜೀವನ ಸಾಗಿಸಲು ತುಂಬಾ ಕಷ್ಟದ ಪರಿಸ್ಥಿತಿ ಎದುರಾಗಿದ್ದರೆ ತಕ್ಷಣ ಕಾನೂನು ಪ್ರಕಾರ ಸಿಗಬೇಕಾದ ಹಕ್ಕು ಪಡೆದುಕೊಳ್ಳಲು ಸಿದ್ದರಾಗಬೇಕು. ಹಿರಿಯ ನಾಗರಿಕರ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರಾದ ಬೈರಾರೆಡ್ಡಿ, ಎಸ್.ಎನ್.ಚಂದ್ರಶೇಖರ್, ವಿ.ಎನ್.ನಾಗೇಂದ್ರಬಾಬು, ಮಂಜುನಾಥ, ಕೆ.ಎಂ.ನಾಗಮಣಿ, ವೀಣಾ, ವೆಂಕಟರೆಡ್ಡಿ, ಮಂಜುನಾಥ ಹಾಜರಿದ್ದರು.