ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಲೆಂದು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೆ. ದರ್ಧೈವವೆಂದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಈ ಯೋಜನೆಗೆ ತಿಲಾಂಜಲಿಯನ್ನಿಟ್ಟು ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನು ತಪ್ಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೊಪಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ಶನಿವಾರ ದಲಿತರ ಕೇರಿಯಲ್ಲಿ ಮುನಿರಾಜು ಕುಟ್ಟಿ ಅವರ ಮನೆಯಲ್ಲಿ ಉಪಾಹಾರವನ್ನು ಸೇವಿಸಿದ ನಂತರ ಮಾತನಾಡಿದರು.
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಶೋಷಿತ, ಪೀಡಿತ ದಲಿತ ಜನಾಂಗದ ಅಭಿವೃದ್ಧಿ ಎಷ್ಟು ಪ್ರಮಾಣದಲ್ಲಿ ಆಗಬೇಕಿತ್ತೋ ಅಷ್ಟು ಆಗಿಲ್ಲ ಎಂಬ ನೋವು ಕಾಡುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಸಮೂಹಕ್ಕೆ, ಅಲ್ಪಸಂಖ್ಯಾತ ಮುಸ್ಲೀಂ ಜನಾಂಗಕ್ಕೆ ಹಾಗೂ ಎಲ್ಲಾ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ಹರಿಜನ ಕೇರಿಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ಹಣ ಬಿಡುಗಡೆ ಮಾಡಿದ್ದೆ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾರ್ಯಕ್ರಮಗಳು, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದೆ.
ಈ ಭಾಗದಲ್ಲಿ ತರಕಾರಿ, ರೇಷ್ಮೆ, ದ್ರಾಕ್ಷಿ, ಹಣ್ಣು ಹಂಪಲು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಆಶೀರ್ವಾದವಿದ್ದಲ್ಲಿ ಈ ಭಾಗದ ಕೆರೆ ಕುಂಟೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡುತ್ತೇನೆ.
ಯಾವುದೇ ಸರ್ಕಾರವಿರಲಿ ನೀರಾವರಿಗೆ ಆಧ್ಯತೆ ಕೊಟ್ಟು ನಮ್ಮ ನೇಗಿಲ ಯೋಗಿ ರೈತರು ನೆಮ್ಮದಿಯಿಂದ ಬದುಕಲು ಬೇಕಾದ ವ್ಯವಸ್ಥೆ ಮಾಡಬೇಕಾದುದು ಆದ್ಯ ಕರ್ತವ್ಯ. ಆದರೆ ಅದು ನಮ್ಮಲ್ಲಿ ಆಗುತ್ತಿಲ್ಲ. ವಿದ್ಯಾವಂತರಿಗೆ ಉದ್ಯೋಗ ಸಿಗಲು ಬೇಕಾದ ಕಾರ್ಯಕ್ರಮಗಳು ಈಗಿನ ಸರ್ಕಾರದಿಂದ ಆಗುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಉತ್ಪನ್ನ ಎರಡು ಪಟ್ಟಾಗಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುದ್ರಾ ಬ್ಯಾಂಕ್ ಯೋಜನೆಯಿಂದ ಹಲವು ಕೋಟಿ ಜನರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಜನಾಂಗದ ಹೆಣ್ಣುಮಕ್ಕಳಿಗೆ ಬ್ಯಾಂಕ್ ಮೂಲಕ ಸಾಲ ಸಿಗುತ್ತದೆ. ರಾಜ್ಯದಲ್ಲಿ 33 ಲಕ್ಷ ಜನರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡುವ ಕಾರ್ಯಯೋಜನೆಯನ್ನು ಹುಬ್ಬಳ್ಳಿಯಿಂದ ನಾವು ಪ್ರಾರಂಭಿಸಿದ್ದೇವೆ.
ಅನ್ನಭಾಗ್ಯ ಯೋಜನೆಯ ಬಗ್ಗೆ ಜನರು ತಿಳಿಯಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಕ್ಕಿಯನ್ನು ಒಂದು ಕೇಜಿಗೆ 32 ರೂಗಳಂತೆ ಅಕ್ಕಿಯನ್ನು ಖರೀದಿಸಿ 3 ರೂಗಳಿಗೆ ನಮ್ಮ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಗೋದಿಯನ್ನು ಸಹ 28 ರೂಗಳಿಗೆ ಖರೀದಿಸಿ 2 ರೂಗಳಿಗೆ ಕಳುಹಿಸುತ್ತಿದ್ದಾರೆ. ಕೇಂದ್ರದ ಅನುದಾನ ಪಡೆಯುತ್ತಾ ತಮ್ಮ ಫಲಕವನ್ನು ಸಿದ್ಧರಾಮಯ್ಯನವರು ಹಾಕಿಕೊಂಡಿದ್ದಾರೆ. ಈ ಅಕ್ಕಿಗಳ ವಿತರಣೆಯಲ್ಲೂ ಕಳಪೆ ಗುಣಮಟ್ಟ ಹಾಗೂ ಹಗರಣಗಳು ಮಾಡಿಕೊಂಡು ಸಿಕ್ಕಿಬಿದ್ದಿದ್ದಾರೆ. ಎಲ್‌ಇಡಿ ಬಲ್ಪ್ ಸಹ ಕೇಂದ್ರದ ಯೋಜನೆಯೇ. ಆದರೆ ಯೋಜನೆಗಳು ಬಡಜನರಿಗೆ ತಲುಪುತ್ತಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅವರಂಥ ಮೇಧಾವಿಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಅವರ ಶವಸಂಸ್ಥಾರಕ್ಕೆ ದೆಹಲಿಯಲ್ಲಿ ಸ್ಥಳ ಕೊಡದೆ ಮುಂಬೈನ ದಾದರ್‌ನ ಸಮುದ್ರ ತೀರದಲ್ಲಿ ಮಾಡುವಂಥ ಸ್ಥಿತಿಯನ್ನು ತಂದಿದ್ದು ಕಾಂಗ್ರೆಸ್ ಸರ್ಕಾರ. ಬಾಬು ಜಗಜೀವನ್‌ರಾಮ್ ಅವರನ್ನು ಪ್ರಧಾನಿ ಮಾಡಲೆಂದು ವಾಜಪೇಯಿ ಚಿಂತನೆ ನಡೆಸಿದ್ದಾಗ ಅದಕ್ಕೆ ಕಲ್ಲು ಹಾಕಿದ್ದು ಕಾಂಗ್ರೆಸ್‌ನವರು. ದಲಿತ ಸಮಾಜದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಕಾಂಗ್ರೆಸ್‌ನವರಿಗಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಾಸಿಸಿದ ಮನೆ ಸೇರಿದಂತೆ ಐದು ಸ್ಥಳಗಳನ್ನು ಪಂಚ ಪವಿತ್ರ ಕ್ಷೇತ್ರಗಳೆಂದು ಗುರುತಿಸಿ ಒಂದು ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ಪ್ರಧಾನಿಯವರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ನಿಮ್ಮ ಈ ಯಡಿಯೂರಪ್ಪ ಮಾಡಿರುವ ಉತ್ತಮ ಕೆಲಸಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಇಡೀ ರಾಜ್ಯದಲ್ಲಿ ಹೆಚ್ಚಿನ ಬೆಂಬಲದಿಂದ ಗೆದ್ದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ. ಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿ ಇರಲಿ ಬಿಜೆಪಿಗೆ ಮತ ನೀಡಿ. ನೀರಾವರಿ, ರೈತರ, ಬಡವರ ಶೋಷಿತರ ದಲಿತರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.
ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ವೆಲ್‌ಫೇರ್ ಅಸೋಸಿಯೇಷನ್ ಸದಸ್ಯರು ವಿವಿಧ ಬೇಡಿಕೆಗಳ ಮನವಿಯನ್ನು ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ಕರ್ಣಶ್ರೀ ಚಾರಿಟೆಬಲ್ ಟ್ರಸ್ ವತಿಯಿಂದ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು.
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕರಾದ ಜ್ಯೋತಿರೆಡ್ಡಿ, ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜೆ.ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ನಾರ್ಥ್‌ಈಸ್ಟ್ ಸುರೇಶ್, ಭಾಸ್ಕರರೆಡ್ಡಿ, ಅಬ್ದುಲ್ ಅಜೀಂ, ರವಿಕುಮಾರ್, ಜಯದೇವಣ್ಣ, ಸಚ್ಚಿದಾನಂದಮೂರ್ತಿ, ಡಿ.ಆರ್.ಶಿವಕುಮಾರಗೌಡ, ಸುರೇಂದ್ರಗೌಡ, ಸಿ.ವಿ.ಲೋಕೇಶ್ ಗೌಡ, ನಗರಸಭೆ ಸದಸ್ಯ ಎಸ್.ರಾಘವೇಂದ್ರ ಹಾಜರಿದ್ದರು.
ನಿಮ್ಮ ಮನೆಗೆ ನೀವೇ ಬರದಂತಾಯಿತೆ, ಛೆ! : ‘ನಮ್ಮಿಂದಾಗಿ ನಿಮ್ಮ ಮನೆಗೆ ನೀವೇ ಬರದಂತಾಯಿತೆ, ಛೆ! ಎಂಥ ಕೆಲಸವಾಯಿತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪೇಚಾಡಿದರು. ತಾಲ್ಲೂಕಿನ ಜಂಗಮಕೋಟೆಯ ದಲಿತರ ಕೇರಿಯಲ್ಲಿ ಮುನಿರಾಜು ಕುಟ್ಟಿ ಅವರ ಮನೆಯಲ್ಲಿ ಉಪಾಹಾರ ಸೇವಿಸುವ ಸಂದರ್ಭದಲ್ಲಿ, ‘ನಿಮಗೆ ಎಷ್ಟು ಮಂದಿ ಮಕ್ಕಳು?’ ಎಂದು ವಿಚರಿಸಿದರು. ‘ಒಬ್ಬಳೇ ಮಗಳು ಸ್ಮೈಲಿ ಎಂದು ಹೆಸರು. ನಿಮ್ಮನ್ನು ಸ್ವಾಗತಿಸಲು ಪೂರ್ಣಕುಂಭದೊಡನೆ ಬಂದಿದ್ದಳು. ಒಳಗೆ ಬರಲಾಗದೆ ಮನೆಯ ಹೊರಗಡೆ ಇದ್ದಾಳೆ’ ಎಂದು ಮುನಿರಾಜು ಕುಟ್ಟಿ ಅವರ ಪತ್ನಿ ಅನೀತಾ ಹೇಳಿದರು. ‘ಮೊದಲು ಕರೆಸಿ ಮಗುವನ್ನು, ನಿಮ್ಮ ಮನೆಗೆ ನೀವೇ ಬರಲು ಆಗದಿದ್ದರೆ ಹೇಗೆ’ ಎಂದರು.
ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು : ‘ನಾನು ಸಿಹಿ ತಿನ್ನುವಂತಿಲ್ಲಮ್ಮ, ಕೇವಲ ಇಡ್ಲಿ ಚಟ್ನಿ ಮತ್ತು ವಡೆ ಕೊಡಿ ಸಾಕು’ ಎಂದು ಕೇಳಿ ಪಡೆದ ಬಿ.ಎಸ್.ಯಡಿಯೂರಪ್ಪ ಅವರನ್ನು ಮನೆಯೊಡತಿ ಅನೀತಾ, ‘ಅಡುಗೆ ಹೇಗಿದೆ ಸರ್?’ ಎಂದು ಕೇಳಿದರು. ‘ಫಸ್ಟ್ ಕ್ಲಾಸಾಗಿದೆ ಕಣಮ್ಮ, ಚಟ್ನಿ ಬಹಳ ರುಚಿಯಾಗಿದೆ’ ಎಂದು ಅವರು ಉತ್ತರಿಸಿದರು.
‘ಕೆಲಸಕ್ಕೆ ಹೋಗುತ್ತೀಯೇನಮ್ಮ?’ ಎಂದು ಅನೀತಾ ಅವರನ್ನು ಬಿ.ಎಸ್.ಯಡಿಯೂರಪ್ಪ ವಿಚಾರಿಸಿದರು. ‘ನಾನು 108 ಆಂಬುಲೆನ್ಸ್‌ನಲ್ಲಿ ನರ್ಸ್ ಆಗಿದ್ದೆ. ಮಗಳು ಹುಟ್ಟಿದ ನಂತರ ಕೆಲಸ ಬಿಟ್ಟೆ. ಈಗ ಮಗಳು ಬೆಳೆದಿದ್ದಾಳೆ ಹಾಗಾಗಿ ಖಾಸಗಿ ಕ್ಲಿನಿಕ್‌ನಲ್ಲಿ ನರ್ಸ್ ಕೆಲಸ ಮಾಡುತ್ತಿದ್ದೇನೆ‘ ಎಂದು ಅನೀತಾ ಉತ್ತರಿಸಿದಾಗ. ‘ಒಳ್ಳೇದಾಗಲಮ್ಮ, ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು’ ಎಂದರು.
- Advertisement -
- Advertisement -
- Advertisement -
- Advertisement -