ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಕಾನೂನು ವ್ಯವಸ್ಥೆ ಪ್ರಭಲವಾಗಿರಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿ ಇಡೀ ದೇಶದ ಭದ್ರತೆ ಕಾಪಾಡಿದ ಕೀರ್ತಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಕೆ.ಮೂರ್ತಿ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಗಂಗಮ್ಮ ದೇವಾಲಯ ಆವರಣದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೦ ನೇ ಮಹಾಪರಿನಿರ್ವಾಣ ದಿನ ಹಾಗೂ ಅಬ್ಲೂಡು ಗ್ರಾಮ ಪಂಚಾಯಿತಿ ದಲಿತಸೇನೆ ಶಾಖೆ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆಗಳು, ಶೋಷಣೆಯಿಂದಾಗಿ ನಿರಂತರವಾದ ಚಿಂತನೆಗಳನ್ನು ನಡೆಸಿದ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಜನರಿಗೂ ನಿಜವಾದ ಸ್ವಾತಂತ್ರ್ಯ ಮತ್ತು ಉತ್ತಮ ಶಿಕ್ಷಣವನ್ನು ಕೊಡಿಸುವುದನ್ನು ಗುರಿಯನ್ನಾಗಿಸಿಕೊಂಡು ಸಂವಿಧಾನ ರಚಿಸಿದರು.
ಜೀವನವಿಡೀ ಶೋಷಿತರ ಏಳಿಗೆಗಾಗಿ ಶ್ರಮಿಸಿದ ಅವರ ಕನಸನ್ನು ನನಸು ಮಾಡುವಂತಹ ಮಹತ್ತರವಾದ ಜವಾಬ್ದಾರಿ ಇಂದಿನ ಸಂಘಟನೆಗಳ ಮೇಲೆ ನಿಂತಿದೆ. ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ ಬದಲಿಗೆ ಅವರು ರಾಷ್ಟ್ರನಾಯಕರು, ವಿಶ್ವನಾಯಕರಾಗಿದ್ದಾರೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಜೀವನದ ಉದ್ದೇಶಗಳನ್ನು ಅರ್ಥಮಾಡಿಕೊಂಡು ಅವರ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕು, ಅವರ ಹೋರಾಟದ ಹಾದಿಗಳನ್ನು ನೆನಪುಮಾಡಿಕೊಂಡು ಆದರ್ಶ ಜೀವನ ನಡೆಸುವಂತವರಾಗಬೇಕು ಎಂದರು.
ಸಂಘಟನೆಗಳು ಒಗ್ಗೂಡುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಗಳನ್ನು ಮಾಡಬೇಕು. ದೀನದಲಿತರ ಉದ್ದಾರಕ್ಕಾಗಿ ಚಿಂತನೆ ನಡೆಸುವುದರೊಂದಿಗೆ ಸಮಾಜದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಕಾರ್ಯದರ್ಶಿ ಅರಿಕೆರೆ ಮುನಿರಾಜು, ಆಮ್ ಆದ್ಮಿ ಪಕ್ಷದ ಸಂಚಾಲಕ ವಿಸ್ಡಂ ನಾಗರಾಜ್, ದಲಿತಸೇನೆ ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್, ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಕಲಾಮಂಡಳಿ ಜಿಲ್ಲಾಧ್ಯಕ್ಷ ಈಧರೆಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್.ರಮೇಶ್, ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಓ ಜಯಶ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು
- Advertisement -
- Advertisement -
- Advertisement -







