ಶಿಡ್ಲಘಟ್ಟ ನಗರದ BESCOM ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಹಕರ ಸಂವಾದ ಹಾಗೂ ವಿದ್ಯುತ್ ಸುರಕ್ಷತಾ ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಗುರುಸ್ವಾಮಿ ಮಾತನಾಡಿದರು.
ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬೆಸ್ಕಾಂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಮತ್ತು ವಿದ್ಯುತ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ, ಸಾದ್ಯವಾದಷ್ಟು ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಗ್ರಾಹಕರ ಸಂವಾದವನ್ನು ನಡೆಸುತ್ತಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಬೆಸ್ಕಾಂ ಇಲಾಖೆಯ ವತಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರದಂದು ನಡೆಯುವ ಗ್ರಾಹಕರ ಸಂವಾದ ಹಾಗೂ ವಿದ್ಯುತ್ ಸುರಕ್ಷತಾ ಸಭೆಯನ್ನು ರೈತರು ಮತ್ತು ನಾಗರಿಕರು ಸದುಪಯೋಗ ಮಾಡಿಕೊಂಡು ಇಲಾಖೆಯೊಂದಿಗೆ ಕೈಜೋಡಿಸಬೇಕು. ಇಲಾಖಾ ಅಧಿಕಾರಿಗಳು ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕೆಂದು ಅವರು ಸೂಚಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಭಾಗದಲ್ಲಿ ವಿದ್ಯುತ್ ತಂತಿಗಳು ಮತ್ತು ಪರಿವರ್ತಕಗಳ ಬದಲಾವಣೆಗಾಗಿ ಕೇಂದ್ರ ಸರ್ಕಾರ ಶಿಡ್ಲಘಟ್ಟ ತಾಲೂಕಿಗೆ 48 ಕೋಟಿ ಸಹಿತ ಉಪವಿಭಾಗದ ವ್ಯಾಪ್ತಿಯಲ್ಲಿ ಸುಮಾರು 400 ಕೋಟಿ ರೂಗಳನ್ನು ಮಂಜೂರು ಮಾಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಜೊತೆಗೆ ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ಅಪಘಾತ ರಹಿತ ವರ್ಷ ಮಾಡಲು ಸಹಕರಿಸಬೇಕೆಂದು ಕೋರಿದರು.
ಸಭೆಯಲ್ಲಿ ಶಿಡ್ಲಘಟ್ಟ ನಗರದ ಅಮಾನಿಕೆರೆಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಿಂದ ಭವಿಷ್ಯದಲ್ಲಿ ಅಪಾಯ ಸಂಭವಿಸುವ ಆತಂಕವನ್ನು ರೈತ ಮುಖಂಡರು ವ್ಯಕ್ತಪಡಿಸಿದಾಗ, ತಕ್ಷಣ ಕಾರ್ಯಪ್ರವೃತ್ತರಾದ ಅಧೀಕ್ಷಕ ಎಂಜಿನಿಯರ್, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುವ ವಿದ್ಯುತ್ ಕಂಬಗಳು ಅಥವಾ ಪರಿವರ್ತಕಗಳನ್ನು ತತಕ್ಷಣವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ಮಾಡಿದರು.
ಶಿಡ್ಲಘಟ್ಟ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಕಬ್ಬಿಣದ ವಿದ್ಯುತ್ ಕಂಬಗಳಿದ್ದು ಇತ್ತೀಚೆಗೆ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಸ್ಪರ್ಶ ಸಂಭವಿಸುವ ಆತಂಕವನ್ನು ರೈತ ಮುಖಂಡರು ವ್ಯಕ್ತಪಡಿಸಿದಾಗ, ಈ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ತಾಲ್ಲೂಕು ಕಚೇರಿಯ ಸಮೀಪದಲ್ಲಿ ರಸ್ತೆ ಮಧ್ಯೆ ಭಾಗದಲ್ಲಿರುವ ವಿದ್ಯುತ್ ಪರಿವರ್ತಕವನ್ನು ಪಕ್ಕದಲ್ಲಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಮಹಿಳೆ ಮತ್ತು ದನಕರುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರಲ್ಲದೆ, ರೈತರು ಈಗಾಗಲೇ ಮಳೆಯ ಪ್ರಭಾವದಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಸಹಕರಿಸಬೇಕೆಂದು ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಅಧೀಕ್ಷಕರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ದನಕರುಗಳ ರೈತರಿಗೆ ಒಂದು ವಾರದೊಳಗೆ ಪರಿಹಾರ ಕಲ್ಪಿಸುವ ಜೊತೆಗೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಮಹಿಳೆಯ ಕುಟುಂಬ ಸದಸ್ಯರಿಗೆ 15 ದಿನದೊಳಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಬೆಸ್ಕಾಂ ಕೋಲಾರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಗುಣಮಟ್ಟ ಸುರಕ್ಷತೆ) ಸೈಯದ್ ಹುಸೇನಿ, ಬೆಸ್ಕಾಂ ಗ್ರಾಮಾಂತರ ಎಇಇ ಬಿ.ಪ್ರಭು, ನಗರ ಉಪವಿಭಾಗದ ಎಇಇ ಸೈಯದ್ ಅಬ್ದುಲ್ ರೆಹಮಾನ್, ರೈತ ಸಂಘದ ಮುಖಂಡರಾದ ವೇಣುಗೋಪಾಲ್, ಸುರೇಶ್, ಗೋಪಾಲಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ನಾರಾಯಣಸ್ವಾಮಿ, ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ನವೀನ್, ಮುನಿರಾಜು, ವಿಜಯಕುಮಾರ್ ಹಾಗೂ ಬೆಸ್ಕಾಂ ಇಲಾಖೆಯ ವಿಷಯ ನಿರ್ವಾಹಕರು, ಕಿರಿಯ ಎಂಜಿನಿಯರುಗಳು ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.