ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕೋವಿಡ್ ಲಸಿಕೆಯನ್ನು ಕೊಡಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ನಗರಸಭಾ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿದರು.
ಮಂಗಳವಾರ ನಗರಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ನಗರದ ಹಿರಿಯರಿಗೆ ಕೋವಿಡ್ ಲಸಿಕೆಯನ್ನು ಕೊಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ್ದರು. ಅವರ ಮಾತಿನಂತೆ 11 ನೇ ವಾರ್ಡಿನ ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್ ತಮ್ಮ ವಾರ್ಡಿನಲ್ಲಿ ಜನರ ಮನವೊಲಿಸಿ 60 ಮಂದಿ ಹಿರಿಯರನ್ನು ಕರೆತಂದು ಕೋವಿಡ್ ಲಸಿಕೆಯನ್ನು ಕೊಡಿಸಿದ್ದಾರೆ. ಇದೇ ರೀತಿ ಇತರರೂ ತಮ್ಮ ಭಾಗದ ಹಿರಿಯರಿಗೆ ಕೋವಿಡ್ ಲಸಿಕೆ ಕೊಡಿಸಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಈಗಾಗಲೇ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಗಳು, ನಗರಸಭೆ ಸದಸ್ಯರು, ಮಸೀದಿಗಳ ಮೌಲ್ವಿಗಳಿಗೆ, ಆರ್.ಐ, ವಿ.ಐ ಗಳಲ್ಲಿ ಕೋವಿಡ್ ಲಸಿಕೆ ಕೊಡಿಸುವ ಕುರಿತಂತೆ ಮಾತನಾಡಿದ್ದು, ಹತ್ತಿರದ ಲಸಿಕಾ ಕೇಂದ್ರಗಳಿಗೆ ಹಿರಿಯರನ್ನು ಕರೆತರಲು ಅಗತ್ಯವಿರುವವರಿಗೆ ವಾಹನ ಸೌಲಭ್ಯ ಹೊಂದಿಸಿಕೊಡಲು ಒಪ್ಪಿರುತ್ತಾರೆ. ಕೋವಿಡ್ ಲಸಿಕೆ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಮೂಲಕ ಈ ಮಹಾಮಾರಿಯನ್ನು ನಮ್ಮ ತಾಲ್ಲೂಕಿನ ಒಳಗೆ ಬರದಂತೆ ತಡೆಹಿಡಿಯಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್ ಮಾತನಾಡಿ, ನಮ್ಮ 11 ನೇ ವಾರ್ಡಿನಲ್ಲಿ 1344 ಜನರಿದ್ದಾರೆ. ಪ್ರತಿಯೊಂದು ಮನೆಗೂ ಹೋಗಿ 45 ವರ್ಷಕ್ಕಿಂತ ಮೇಲ್ಪಟ್ಟವರು ಅದರಲ್ಲೂ 60 ವರ್ಷಕ್ಕೂ ಹಿರಿಯರನ್ನು ಸಂಪರ್ಕಿಸಿ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡಿರುವೆ. ಸುಮಾರು 60 ಮಂದಿಗೆ ಲಸಿಕೆಯನ್ನು ಈ ದಿನ ಕೊಡಿಸಿದ್ದೇವೆ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಕೊರೊನಾದಿಂದ ರಕ್ಷಿಸಿಕೊಳ್ಳುವಂತಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.