Sidlaghatta : “ಮಕ್ಕಳಿಗೆ ವಿದ್ಯೆ, ಬುದ್ಧಿ, ಸಾಮಾನ್ಯ ಜ್ಞಾನ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಕೆಲಸ ಮನೆಯಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಸಮಾನವಾಗಿ ನಡೆಯಬೇಕು,” ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
ಹಂಡಿಗನಾಳದ ಶ್ರೀ ಬಾಲಾಜಿ ಕನ್ವೆಂಷನ್ ಹಾಲ್‌ನಲ್ಲಿ ಬುಧವಾರ ನಡೆದ ಡಾಲ್ಫಿನ್ ವಿದ್ಯಾಸಂಸ್ಥೆಯ “ಕಲಾ ಸಮ್ಮಿಲನ” ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ಸ್ವಾಮಿಯವರ ಪ್ರಕಾರ, ಮನೆ ಮಗುವಿನ ಮೊದಲ ಪಾಠಶಾಲೆ. ಶಾಲೆಗೆ ಹೋಗುವ ಮೊದಲು ಮಗು ಮನೆಯಲ್ಲಿ ಕಲಿಯಲು ಆರಂಭಿಸುತ್ತದೆ. “ಮಗುವು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ತಮ್ಮ ನಡೆ-ನುಡಿಯನ್ನು ಉತ್ತಮಪಡಿಸಿಕೊಳ್ಳಬೇಕು,” ಎಂದು ಹೇಳಿದರು.
ಮನೆಯ ವಾತಾವರಣವು ಮಕ್ಕಳಿಗೆ ಮುಕ್ತವಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಬೇಕೆಂದು ಅವರು ಒತ್ತಿಹೇಳಿದರು. “ಸಮಾಜದ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವೇಚನೆ ಮಾಡುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು. ಜೊತೆಗೆ, ಮೊಬೈಲ್ ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಸೃಜನಶೀಲ ಚಟುವಟಿಕೆಗಳಿಗೆ ಅವರಿಗೆ ಸಾದುವ ಪರಿಸರ ಒದಗಿಸಬೇಕು,” ಎಂದು ಹೇಳಿದರು.
“ವಿದ್ಯಾರ್ಥಿಗಳ ಗುರಿ ಕೇವಲ ಹೆಚ್ಚು ಅಂಕಗಳನ್ನು ಗಳಿಸುವುದಾಗಿ ಇರಬಾರದು. ಬದಲು, ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಬಲ್ಲಂತಹ ಶಿಕ್ಷಣ ದೊರೆಯಬೇಕು,” ಎಂದು ತಹಶೀಲ್ದಾರ್ ಹೇಳಿದರು. “ಶಿಕ್ಷಣದಲ್ಲಿ ಪೋಷಕರ ಸಹಭಾಗಿತ್ವವೂ ಅತೀಮುಖ್ಯವಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಹಾಡುಗಾರಿಕೆ, ಏಕಪಾತ್ರಾಭಿನಯಗಳು ನಡೆಯಿತು. ಶಾಲಾ ವಾರ್ಷಿಕ ವರದಿ ಹಾಗೂ ವಿದ್ಯಾರ್ಥಿಗಳ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಮತ್ತು ಶೈಕ್ಷಣಿಕ ಸಾಧನೆಗಳ ವರದಿಯನ್ನು ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ ರಾಸಾಯನಿಕ ಉಪನ್ಯಾಸಕ ಸಿ. ವೆಂಕಟಶಿವಾರೆಡ್ಡಿ, ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎ. ನಾಗರಾಜ್, ಕಾರ್ಯದರ್ಶಿ ವಿ. ಕೃಷ್ಣಪ್ಪ, ಖಜಾಂಚಿ ರತ್ನಮ್ಮ, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಆಡಳಿತಾಧಿಕಾರಿ ಚಂದನ, ವರಲಕ್ಷ್ಮಿ, ಶ್ರೀಧರ್, ಪ್ರಿನ್ಸಿಪಾಲ್ ಜೆ.ಎ. ಸುದರ್ಶನ್, ನೂರ್ ಜಹಾನ್ ಬೇಗಂ, ಎಲ್. ಮುನಿಕೃಷ್ಣಪ್ಪ, ಆರೀಫ್ ಅಹ್ಮದ್, ಎಂ. ಮುನಿಶಾಮಪ್ಪ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.