ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ಪಶುಸಂಗೋಪನಾ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋಶಾಲೆ ಕಾಮಗಾರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತೀ ಜಿಲ್ಲೆಗೆ ಒಂದು ಗೋಶಾಲೆ ನಿರ್ಮಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ನಾಗರೆಡ್ಡಿಹಳ್ಳಿ ಬಳಿಯ ಈ ಗೋಶಾಲೆ ರಾಜ್ಯದಲ್ಲಿಯೇ ಪ್ರಪ್ರಥಮ ಗೋಶಾಲೆಯಾಗಲಿರುವುದು ಸಂತಸದ ವಿಷಯ. 10 ಎಕರೆ ಪ್ರದೇಶದಲ್ಲಿ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ಈ ಗೋಶಾಲೆ ನಿರ್ಮಾಣವಾಗಲಿದೆ. ವಯಸ್ಸಾದ, ರೋಗಗ್ರಸ್ಥ, ಅಂಗವಿಕಲ ಜಾನುವಾರುಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು. ಗೋಶಾಲೆಯ ಉಪ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳಿಗೆ ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಮೂಲಕ ಮಾರುಕಟ್ಟೆ ಕಲ್ಪಿಸಿ, ಸುಸ್ಥಿರ ಸಂಪನ್ಮೂಲದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗೋ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು 50 ಲಕ್ಷ ರೂ ನಿಗದಿಪಡಿಸಿದೆ. ನಾಗರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ.41 ರಲ್ಲಿ 10 ಎಕರೆಯನ್ನು ಗೋಶಾಲೆಗೆ ಮೀಸಲಿಟ್ಟಿದ್ದು, 2021 ರ ಅಕ್ಟೋಬರ್ 2 ರೊಳಗಾಗಿ ಇದನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಕೊಟ್ಟಿಗೆ, ಕೃಷಿ ಹೊಂಡ, ಮೇವು ಉತ್ಪಾದನೆ ಮೊದಲಾದ ಯೋಜನೆಗಳನ್ನು ಒಂದು ಮಾಡಲು ಉದ್ದೇಶಿಸಲಾಗಿದೆ ಎಂದರು.
ಗೋಶಾಲೆಯ ಉಪ ಉತ್ಪನ್ನಗಳನ್ನು ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಅಥವಾ ಕೆಎಪಿಎಲ್ ನಿಂದ ಮಾರಾಟ ಮಾಡಿ, ಸಂಪನ್ಮೂಲ ಕ್ರೋಢೀಕರಣ ಮಾಡಲಾಗುತ್ತದೆ. ಗೋಶಾಲೆಯ ಸುಸ್ಥಿರತೆ, ನಿರ್ವಹಣೆಗೆ ಮೇವು ಬೆಳೆಯುವುದು, ಉತ್ಪನ್ನ ಮಾರಾಟ ಮಾಡಲು ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ, ಅದಕ್ಕೂ ಅವಕಾಶವಿದೆ ಎಂದು ನುಡಿದರು.
ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಮೊದಲ ಹಾಗೂ ಎರಡನೇ ಕಂತು ಸೇರಿ 24 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಅಥವಾ ಸಂಸ್ಥೆಗಳಿಂದ ನಡೆಸುವ ಗೋಶಾಲೆಯಲ್ಲಿ ಪ್ರತಿ ಜಾನುವಾರು ವೆಚ್ಚ ದಿನಕ್ಕೆ 17.30 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಒಟ್ಟು ಜಾನುವಾರು ಪೈಕಿ ಶೇ 0.75 ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. 2018 ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 2,13,815 ದನಗಳು ಹಾಗೂ 26,397 ಎಮ್ಮೆಗಳಿವೆ.
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನು ಜಾರಿಯಾದ ಬಳಿಕ, ಗೋ ಸಂರಕ್ಷಣೆಗಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ದೊರೆತಿದೆ. ಈ ಹಿಂದೆಯೇ ರಾಜ್ಯ ಸರ್ಕಾರ ಗೋ ಸಂರಕ್ಷಣೆಗೆ ಆದ್ಯತೆ ನೀಡಿ ಕಠಿಣ ಕಾನೂನು ಜಾರಿ ಮಾಡಿದೆ. ಇದಕ್ಕೆ ಪೂರಕವಾಗಿ ಗೋ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭಾರತೀಯ ಪರಂಪರೆ, ಸಾಂಪ್ರದಾಯಿಕ ಕೃಷಿಯನ್ನು ಕಾಪಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಬಿಜೆಪಿ ತಾಲ್ಲೂಕು ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi