ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಹುಳು ಸಾಕಾಣಿಕಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ನರ್ಸರಿ ಮತ್ತು ಪಾಲಿ ಹೌಸ್ ರಚನೆಯ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿದರು.
ನರ್ಸರಿಯನ್ನು ಮಾಡಿದರೆ ಹೆಚ್ಚು ಲಾಭವನ್ನು ಗಳಿಸಲು ಅವಕಾಶವಿದೆ. ಆದರೆ ವೈಜ್ಞಾನಿಕವಾಗಿ ನರ್ಸರಿ ಅಥವಾ ಪಾಲಿಹೌಸ್ ರಚನೆ ಮಾಡಬೇಕಾದರೆ ತಾಂತ್ರಿಕ ಮಾಹಿತಿ ಅಗತ್ಯವಿರುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾಂತ್ರಿಕ ತರಬೇತಿಯನ್ನು ತೋಟಗಾರಿಕೆ ಇಲಾಖೆಯ ತರಬೇತಿ ಸಂಸ್ಥೆಯಲ್ಲಿ ನೀಡಲಾಗುವುದು. ಇದರ ಪ್ರಯೋಜನ ಪಡೆದುಕೊಳ್ಳಿ. ನರ್ಸರಿ ಹಾಗೂ ಪಾಲಿಹೌಸ್ ರಚನೆ ಮಾಡಿದರೆ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುವುದು. ಆಸಕ್ತ ಯುವಕ ಮತ್ತು ಯುವತಿಯರು ಮುಂದೆ ಬರಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿ ಕೀರ್ತಿ ಮಾತನಾಡಿ, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಮಾಡುವಾಗ ನೇರವಾಗಿ ಮಾರುಕಟ್ಟೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು. ರೈತರು ಸ್ವಂತ ಬೆಳೆಗಾರರ ತಂಡವನ್ನು ರಚಿಸಿಕೊಂಡು ತಂಡದಿಂದ ಒರ್ವ ಮಾರುಕಟ್ಟೆ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಅವರ ಮೂಲಕ ನೇರ ಮಾರುಕಟ್ಟೆ ಮಾಡಿದರೆ ಹೆಚ್ಚು ಆದಾಯ ಗಳಿಸಬುಹುದೆಂದು ಸಲಹೆ ನೀಡಿದರು.
ಆತ್ಮಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಅಶ್ವತ್ಥನಾರಾಯಣ ಮಾತನಾಡಿ, ಆತ್ಮಯೋಜನೆಯ ಅಡಿಯಲ್ಲಿ ಕೃಷಿ ಇಲಾಖೆಯ ಮೂಲಕ ರೈತರಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಲು ಜೈವಿಕ ಜೀವಾಣು ಗೊಬ್ಬರಗಳಾದ ಅಜೋಸ್ಪೇರಿಯಂ, ಟ್ರೈಕೋಡರ್ಮ, ಪಿ ಎಸ್ ಪಿ ಗೊಬ್ಬರಗಳನ್ನು ರೈತರಿಗೆ ಕೃಷಿ ಇಲಾಖೆಯ ಮೂಲಕ ಉಚಿತವಾಗಿ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಆತ್ಮಯೋಜನೆಯ ಅಡಿಯಲ್ಲಿ ಮಾದರಿ ಸಾವಯವ ಕುಟುಂಬಗಳನ್ನು ಆಯ್ಕೆ ಮಾಡಲಗಿದೆ. ಅಂತಹ ಮಾದರಿ ಸಾವಯವ ತೋಟಗಳಿಗೆ ರೈತರನ್ನು ಕೃಷಿ ಅಧ್ಯಯನ ಪ್ರವಾಸ ಮಾಡಿಸಿ ಮಹಿತಿ ಕೊಡಿಸಲಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಮೇಲ್ವಿಚಾರಕರಾದ ಹರೀಶ್‌ಕುಮಾರ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರೈತರಿಗೆ ದೊರಕುವ ಸಹಾಯಧನಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕ ಗೋಪಾಲಗೌಡ ಮಾತನಾಡಿ, ಪ್ರತಿಯೊಬ್ಬಕೃಷಿಕರು ಒಂದೇ ಕೃಷಿಯನ್ನು ನಂಬಿಕೊಳ್ಳದೇ ಸಮಗ್ರವಾಗಿ ಹಲವಾರು ಬೆಳೆಗಳನ್ನು ಬೆಳೆದರೆ ಹೆಚ್ಚು ಲಾಭವನ್ನು ಗಳಿಸಬಹದು. ಅದರೊಟ್ಟಿಗೆ ಕುರಿ, ಮೇಕೆ, ಹಸು ಸಾಕಣೆ, ನಾಟಿ ಮೊಟ್ಟೆ ಕೋಳಿ ಸಾಕಣೆ ಮಾಡಿದರೆ ಇನ್ನು ಹೆಚ್ಚು ಆದಾಯವನ್ನು ಗಳಿಸಬಹದುದೆಂದು ಸಲಹೆ ನೀಡಿದರು.
ವಲಯ ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ವೆಂಕಟಲಕ್ಷ್ಮೀ ಹಾಜರಿದ್ದರು.