Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ, ದಿಬ್ಬೂರಹಳ್ಳಿ ಹಾಗೂ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಸ್ವಚ್ಛ ಸಂಕೀರ್ಣ ಘಟಕಗಳ ಸ್ವಚ್ಛತಾ ವಾಹನಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಹಾಗೂ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಸಿರು ನಿಶಾನೆ ತೋರಿ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ, “ಗ್ರಾಮಗಳ ಸ್ವಚ್ಛತೆಯನ್ನು ಕಾಪಾಡಲು ಪ್ರತಿ ಮನೆ ಹಾಗೂ ಅಂಗಡಿ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಕಸವಿಲೇವಾರಿ ವಾಹನಗಳಿಗೆ ತ್ಯಾಜ್ಯ ನೀಡುವುದರಿಂದ ಗ್ರಾಮಗಳು ಸ್ವಚ್ಛವಾಗಿ, ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು ಸಾಧ್ಯವಾಗುತ್ತದೆ,” ಎಂದು ತಿಳಿಸಿದರು.
ಸಮುದಾಯದ ಸಹಕಾರದಿಂದ ಮಾತ್ರ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ ಎಂಬುದನ್ನು ಅವರು ಹೀರಿಸಿ, “ನಮ್ಮ ಮನೆಯ ಸ್ವಚ್ಛತೆಯೊಂದಿಗೆ ಗ್ರಾಮ ಸ್ವಚ್ಛತೆಗೂ ಶ್ರದ್ದೆ ನೀಡಿದರೆ, ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಈ ಕಾರ್ಯದಲ್ಲಿ ಭಾಗಿಯಾಗಬೇಕು,” ಎಂದರು.
ಕಾರ್ಯಕ್ರಮದಲ್ಲಿ ತಲಕಾಯಲಬೆಟ್ಟ ಪಿಡಿಒ ಶ್ರೀನಿವಾಸ್, ದಿಬ್ಬೂರಹಳ್ಳಿ ಪಿಡಿಒ ರಮೇಶ್, ತಿಮ್ಮನಾಯಕನಹಳ್ಳಿ ಪಿಡಿಒ ರಾಮಚಂದ್ರಪ್ಪ, ತಾಲ್ಲೂಕು ಸಂಯೋಜಕ ಲೋಕೇಶ, ಎಂಜಿನಿಯರ್ ಹರಿನಾಥ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ ಉಪಸ್ಥಿತರಿದ್ದರು.