Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ , ತಾಲ್ಲೂಕು ಪಂಚಾಯಿತಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಜನಸಂಖ್ಯೆ ದಿನಾಚರಣೆ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಇದು ಜನರಲ್ಲಿ ಜವಾಬ್ದಾರಿಯುತ ಚಿಂತನೆ ಮೂಡಿಸಬೇಕಾದ ಮಹತ್ವದ ವೇದಿಕೆ. ಇನ್ನು ಕೆಲವು ವರ್ಷಗಳಲ್ಲಿ ಭಾರತವು ಸಾವಿರ ಕೋಟಿ ಜನಸಂಖ್ಯೆ ತಲುಪುವ ಸಾಧ್ಯತೆ ಇದೆ. ಇದರಿಂದ ನಿರುದ್ಯೋಗ, ಬಡತನ, ಆಹಾರ ಕೊರತೆ, ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ಹೇಳಿದರು.
ಇವತ್ತಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅನೇಕ ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ತಮ್ಮ ಬದುಕನ್ನು ರೂಪಿಸುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ದೊರಕಿದಾಗ ಮಾತ್ರ ನಿಜವಾದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಭಾರತ ಈಗ 141 ಕೋಟಿ ಜನರೊಂದಿಗೆ ಚೀನಾವನ್ನು ಹಿಂದಿಕ್ಕಿದ್ದು, ವಿಶ್ವದ ಅತಿದೊಡ್ಡ ಜನಸಂಖ್ಯೆಯ ರಾಷ್ಟ್ರವಾಗಿದೆ. 805 ಕೋಟಿ ಜನ ವಿಶ್ವದಾದ್ಯಂತ ಬದುಕುತ್ತಿರುವ ಈ ಕಾಲಘಟ್ಟದಲ್ಲಿ, ಆರೋಗ್ಯ, ಆಹಾರ, ಉದ್ಯೋಗ ಮತ್ತು ವಾಸ್ತವ್ಯ ವ್ಯವಸ್ಥೆಗಳ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾ ವಸ್ತ್ರದ್, ಆಯುಷ್ ಇಲಾಖೆಯ ವೈದ್ಯ ಡಾ. ವಿಜಯ್ ಕುಮಾರ್,
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಡಾ. ಮಾಧವನ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಆರೋಗ್ಯ ಇಲಾಖೆಯ ಟಿ.ಟಿ. ನರಸಿಂಹಪ್ಪ, ನಂದಿನಿ, ಚೈತ್ರ, ಅಪೇಕ್ಷಾ,ಗೀತಾ,ಸುನಿಲ್,ಕೀರ್ತಿ, ಅಪ್ರೊಜ್, ಪ್ರಣತಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.