ನಗರದ ಪೂಜಮ್ಮದೇವಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಶಿಡ್ಲಘಟ್ಟ ತಾಲ್ಲೂಕು ತಮಟೆ ಕಲಾವಿದರ ನೂತನ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್.ರವಿಶಂಕರ್ ಮಾತನಾಡಿದರು.
ತಮಿಳುನಾಡು ಮಾದರಿಯಲ್ಲಿ ರಾಜ್ಯದ ತಮಟೆ ಕಲಾವಿದರಿಗೂ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ನೆರೆಯ ತಮಿಳುನಾಡಿನಲ್ಲಿ ತಮಟೆ ಕಲಾವಿದರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಕಾರ್ಯಕ್ರಮಗಳನ್ನು ನೆರವೇರಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ರೈಲು ಮತ್ತು ಬಸ್ಸಿನಲ್ಲಿ ಸಂಚರಿಸಲು ಉಚಿತವಾಗಿ ಟಿಕೇಟ್ ಸೌಲಭ್ಯ ಕಲ್ಪಿಸಲಾಗಿದೆ. 35 ವರ್ಷ ಅನುಭವ ಹೊಂದಿರುವ ಕಲಾವಿದನ ಬಳಿ ಸೇವೆ ಸಲ್ಲಿಸುವ 10 ಮಂದಿ ಕಲಾವಿದರಿಗೆ ಪ್ರತಿ ಆರು ತಿಂಗಳೊಮ್ಮ ಸಮವಸ್ತ್ರ ಖರೀದಿಸಲು 30 ಸಾವಿರ ರೂಗಳ ಆರ್ಥಿಕ ನೆರವು ನೀಡಲಾಗುತ್ತದೆ. ಅದರಲ್ಲದೆ ಅವರ ಮಕ್ಕಳಿಗೆ ಶ್ಯೆಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಾಲಾ ಶುಲ್ಕ,ಆರೋಗ್ಯ ರಕ್ಷಣೆಗೆ ನೆರವು ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತಮಟೆ ಕಲಾವಿದರಿಗೆ ಯಾವುದೇ ರೀತಿಯ ಅನುಕೂಲಗಳಿಲ್ಲ. ಈ ನಿಟ್ಟಿನಲ್ಲಿ ಕಲಾವಿದರು ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಲಭಿಸಿಲ್ಲ.
ಕನಿಷ್ಠ ಪಕ್ಷ ಕಲಾವಿದರಿಗೆ ಮೊದಲು ಗುರುತಿನ ಚೀಟಿ ನೀಡಿ ನೆರೆ ರಾಜ್ಯಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್.ಡಿ.ಮೂರ್ತಿ ಮಾತನಾಡಿ, ಪ್ರತಿ ಹಳ್ಳಿಯಲ್ಲಿ ತಮಟೆ ಕಲಾವಿದರನ್ನು ಗುರುತಿಸಿ ಸಂಘಟನೆಯನ್ನು ಬಲಪಡಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕೆಂದರು.
ನಾಡೋಜ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ತಮಟೆ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಆನಂದ್,ಉಪಾಧ್ಯಕ್ಷ ಮೂರ್ತಿ, ಪ್ರಧಾನ ಕಾರ್ಯದರ್ಶಿ ಸುನೀಲ್, ನಗರಸಭಾ ಸದಸ್ಯ ಕೃಷ್ಣಮೂರ್ತಿ, ಕಲಾವಿದ ಈಧರೆ ಪ್ರಕಾಶ್, ತಾಲ್ಲೂಕು ತಮಟೆ ಕಲಾವಿದರ ಒಕ್ಕೂಟದ ಹಂಡಿಗನಾಳ ಮಾದೇಶ್, ಇ-ತಿಮ್ಮಸಂದ್ರ ಕಿರಣ್, ಶಿಡ್ಲಘಟ್ಟ ನಗರದ ಮಂಜು ಹಾಜರಿದ್ದರು.
ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪದ ವೇದಿಕೆ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಾದ ಮಾಲತಿ, ಮನೋರ್ ಮಣಿ, ಹಾಗೂ ದಾವೂದ್ ಪಾಷಾ ಅವರನ್ನು ಸನ್ಮಾನಿಸಲಾಯಿತು. ಕೇಕ್ ಕತ್ತರಿಸಿ ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್,ರಿಯಲ್ ಸ್ಟಾರ್ ಉಪೇಂದ್ರ, ಹಾಗೂ ಶೃತಿರವರ ಹುಟ್ಟು ಹಬ್ಬವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಚಲನಚಿತ್ರಗಳು ಹಾಗೂ ಸಾಧನೆಗಳನ್ನು ಮೆಲುಕು ಹಾಕಿದರು ಮತ್ತು ನಮ್ಮ ಶಿಡ್ಲಘಟ್ಟದ ಸಮೀಪದ ಕೇಶವಾರ ಆರ್.ಚಂದ್ರು ನಿರ್ದೇಶನದಲ್ಲಿ ರೀಯಲ್ ಸ್ಟಾರ್ ಉಪೇಂದ್ರ ರವರ ನಟನೆಯಲ್ಲಿ 7 ಭಾಷೆಯಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರವು ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಶೃತಿ ಅವರಿಗೆ ಇನ್ನು ಹೆಚ್ಚು ಅವಕಾಶಗಳನ್ನು ದೊರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಲಾವಿದರಾದ ಸಿ.ಎನ್.ಮುನಿರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ಧಾರವಾಹಿ ಸಂಯೋಜಕ ಎಲ್.ಮುತ್ತಕದಹಳ್ಳಿಯ ಮಧು ಎಮ್ ಗೌಡ, ನಗರಸಭಾ ಸದಸ್ಯ ಎಸ್.ಎನ್.ನಾರಾಯಣಸ್ವಾಮಿ, ಮೆಗಾಸ್ಟಾರ್ ಚಿರಂಜೀವಿ ಸಂಘದ ದಿನೇಶ್ ಬಾಬು, ನಾರಾಯಣಸ್ವಾಮಿ, ರಾಮದಾಸ, ರಾಧಾಕೃಷ್ಣ, ದಾಮೋದರ್, ಮುನಿರಾಜು, ದೊಡ್ಡ ದಾಸರಹಳ್ಳಿ ದೇವರಾಜ್, ಕಲಾವಿದ ನಾಗಭೂಷಣ್, ರಂಗಭೂಮಿ ಕಲಾವಿದ ವಿಶ್ವಕರ್ಮ ಶ್ರೀನಿವಾಸ್, ದೇವರಮಳ್ಳೂರು ಮನೋಹರ್, ಶಿಕ್ಷಕರಾದ ವೆಂಕಟೇಶ್, ಸಾಧಿಕ್, ನೃತ್ಯ ನಿರ್ದೇಶಕಿ ಧನುಶ್ರೀ, ವೈಭವಿ, ಶಾಂತಮ್ಮ, ನವನೀತ, ಯಶಸ್ವಿನಿ, ಆಶಾಕಿರಾಣ ಶಾಲೆಯ ಸಿಬ್ಬಂದಿ ಹಾಜರಿದ್ದರು.
ಬಿ.ಜೆ.ಪಿ ಸರ್ಕಾರದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾವಲಂಬನೆ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತ, ದಲಿತ, ಕಾರ್ಮಿಕರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ರಕ್ಷಣೆಗಾಗಿ ಸೆಪ್ಟೆಂಬರ್ 21 ರ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ಮತ್ತು ಚಳುವಳಿಗಳ ಪರ್ಯಾಯ ಜನತಾ ಅಧಿವೇಶನ ಹಾಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜನಸಮುದಾಯ ಹಲವಾರು ಗಂಭೀರ ಸಮಸ್ಯೆಗಳಿಂದ ಬಳಲುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪ್ರಜಾಸತ್ತಾತ್ಮಕವಾಗಿ ಸಂವಿಧಾನ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿವೆ. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಿ ರೈತರನ್ನು ಭಿಕ್ಷುಕರನ್ನಾಗಿ ಮಾಡಲು ಹೊರಟಿದೆ. ಈ ಎಲ್ಲಾ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಫ್ರೀಡಂ ಪಾರ್ಕಿನಲ್ಲಿ ಅಧಿವೇಶನ ನಡೆಸುವುದಾಗಿ ಹೇಳಿದರು.
ರೈತ ಸಂಘ (ಕೆ.ಎಸ್.ಪುಟ್ಟಣ್ಣಯ್ಯ ಬಣ)ದ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಶ್ರೀಧರ್, ಮನೋಜ್, ರಮೇಶ, ವೀರಪ್ಪ, ಸೋಮಶೇಖರ, ಲೋಕೇಶ ಹಾಜರಿದ್ದರು
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ 21 ರಂದು ಬೆಂಗಳೂರಿನಲ್ಲಿ ಅಹೋರಾತ್ರಿ ಸತ್ಯಾಗ್ರಹ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಲ್ಲೆಯ ರೈತಬಾಂಧವರು ಒಗ್ಗೂಡಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಕೋರಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಶನಿವಾರ ಪೂರ್ವಭಾವಿ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ, ಮೌರ್ಯ ಸರ್ಕಲ್ ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಭೂ ಸುಧಾರಣಾ ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಅಹೋರಾತ್ರಿ ಸತ್ಯಾಗ್ರಹ ಹಾಗೂ ವಿಧಾನ ಸೌಧ ಮುತ್ತಿಗೆಯನ್ನು ಹಮ್ಮಿಕೊಂಡಿರುವುದರಿಂದ ಪಕ್ಷಾತೀತವಾಗಿ ಬೃಹತ್ ಸಂಖ್ಯೆಯಲ್ಲಿ ಎಲ್ಲಾರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಬೇಕೆಂದು ಒತ್ತಾಯ ಮಾಡುತ್ತಿರುವ ಸಂಘಟನೆಗಳ ಕಾಳಜಿಯನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾಣಲಾಗುತ್ತಿದ್ದು, ಗಣಿ ಮಾಲಿಕರ ಬೆನ್ನಿಗೆ ರಕ್ಷಣೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಆರೋಪಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾದಲಿ ಹೋಬಳಿ ಬೈರನಹಳ್ಳಿ ಗ್ರಾಮದ ಸರ್ವೆ ನಂ.2 ರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಮಾತ್ರ ಎಲ್ಲವೂ ಕಾನೂನುಬದ್ಧವಾಗಿಯೇ ಕಾಣುತ್ತಿದೆ. ಅನುಮತಿ ಪಡೆದೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡು ಗಣಿ ಮಾಲಿಕರ ಬೆನ್ನಿಗೆ ರಕ್ಷಣೆಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಂತಿದೆ. ಇಲಾಖೆ ವರ್ತನೆಯಿಂದ ಅನುಮತಿ ಪಡೆದವರು ಹಲವಾರು ಎಕರೆಗಳಷ್ಟು ಗಣಿಗಾರಿಕೆ ವಿಸ್ತರಿಸಿಕೊಂಡಿದ್ದಾರೆ” ಗಣಿಗಾರಿಕೆ ನಡೆಯುತ್ತಿರುವುದರಿಂದ ಪರಿಸರಕ್ಕೆ ಹಾನಿಯುಂಟಾಗಿದ್ದು, ರೈತರು ಕೃಷಿ ಹಾಗೂ ವಾಸ ಮಾಡಲು ಸುತ್ತಮುತ್ತಲೂ ತೊಂದರೆಯಾಗಿದೆ. ಯಾವುದೇ ಕಂಪನಿ ಅಥವಾ ಪ್ರಭಾವಿತರಿಗೆ ಕಲ್ಲುಗಣಿಗಾರಿಕೆ ಮಾಡಲು ಅನುಮತಿ ನೀಡಬಾರದೆಂದು ಸಾರ್ವಜನಿಕರ ಪರವಾಗಿ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದಿಂದ ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದರು. ತಾಲ್ಲೂಕಿನ ಸಾದಲಿ ಗ್ರಾಮದ ಸಮೀಪದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಇತ್ತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಸ್ಥಳೀಯರು ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ವಿರುದ್ಧ ಹೋರಾಟಗಳನ್ನು ಮಾಡಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ದೂರು ನೀಡಲಾಗಿದೆ. “ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅರಣ್ಯ ಪರಿಸರ ಹಾಳಾಗುತ್ತಿದೆ. ಜಾನುವಾರುಗಳಿಗೆ ಬರಗಾಲದ ಸಂದರ್ಭದಲ್ಲಿ ಮೇಯಲು ತೊಂದರೆಯಾಗುತ್ತದೆ. ಈ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದರೆ ಕೃಷಿ ಉದ್ಯೋಗ ಮನುಕುಲಕ್ಕೆ ವಿನಾಶಕ್ಕೆ ದಾರಿಯಾಗುತ್ತದೆ. ಜನ ಗುಳೆ ಹೋಗುವಂತಾಗುತ್ತದೆ. ಇದರಿಂದ ಪ್ರಕೃತಿ ಮಡಿಲಿನಲ್ಲಿರುವ ಬೆಟ್ಟಗುಡ್ಡಗಳನ್ನು ಹಾಗೂ ಅರಣ್ಯವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಇರುತ್ತದೆ. ಈಗಾಗಲೆ ನಮ್ಮ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು, 2000 ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗದೇ ಬರಡು ಭೂಮಿ ಆಗಿರುತ್ತದೆ. ಈ ಕಾರಣಗಳಿಂದ ಪರಿಸರ ಉಳಿಸಿ ಹಾಗೂ ರೈತರು ಉಳಿವಿಗಾಗಿ ಜಿಲ್ಲಾಡಳಿತ ಸರ್ಕಾರಿ ಭೂಮಿಗಳನ್ನು ಮೀಸಲಿಡಿ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಮುಂದೆ ಗಣಿಗಾರಿಕೆಗಳಿಗೆ ಅನುಮತಿ ನೀಡಿದಲ್ಲಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದರು.
ಆಂಧ್ರದ ವಿಜಯವಾಡದ ಸ್ಕೂಲ್ ಆಫ್ ಡೈನಮಿಕ್ ಕರಾಟೆ ಸಂಸ್ಥೆಯವರು ಆಯೋಜಿಸಿದ್ದ ದಕ್ಷಿಣ ಭಾರತ ಓಪನ್ ಈ ಕತಾ ಕರಾಟೆ ಚಾಂಪಿಯನ್ ಷಿಪ್ ನ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಡ್ಲಘಟ್ಟದ ದಿವ್ಯಭಾರತ್ ಕರಾಟೆ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದಿದ್ದಾರೆ. ಎಸ್.ನಿಶ್ಚಿತ್ (9 ವರ್ಷ – ಆರೆಂಜ್ ಬೆಲ್ಟ್), ಕೆ.ವಿ.ಶ್ರೀಕರ್ (12 ವರ್ಷ – ಆರೆಂಜ್ ಬೆಲ್ಟ್),ಎಂ.ಭವನೇಶ್ (10 ವರ್ಷ – ಗ್ರೀನ್ ಬೆಲ್ಟ್), ಡಿ.ಶಿರಿಶ್ ತೇಜ್ (10 ವರ್ಷ – ಗ್ರೀನ್ ಬೆಲ್ಟ್) ಮತ್ತು ಎಚ್.ಓಜಸ್ (13 ವರ್ಷ – ಬ್ಲೂ ಬೆಲ್ಟ್) ಚಿನ್ನದ ಪದಕಗಳನ್ನು ಪಡೆದಿದ್ದಾರೆ, ಟಿ.ಜೆ.ಹರ್ಷಿತ್ (14 ವರ್ಷ – ಬ್ರೌನ್ 2 ಬೆಲ್ಟ್)ಮತ್ತುಎ.ಜಯಸಿಂಹ (15 ವರ್ಷ – ಬ್ರೌನ್ 4 ಬೆಲ್ಟ್) ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ ಎಂದು ದಿವ್ಯಭಾರತ್ ಕರಾಟೆ ಸಂಸ್ಥೆಯ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಎತ್ತು ಅಸುನೀಗಿದ್ದರಿಂದ, ಎತ್ತಿನಗಾಡಿಯ ಮೂಲಕ ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ರಾಜೀವ್ ಗಾಂಧಿ ಲೇಔಟ್ ನ ಹಾಜೀರಾ ಅವರ ಆದಾಯ ಮೂಲವೇ ಇಲ್ಲವಾಗಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹತ್ತು ಸಾವಿರ ರೂಗಳ ಸಹಾಯಧನವನ್ನು ನೀಡಲಾಯಿತು. ನಗರಸಭಾ ಸದಸ್ಯ ಬಾಬಾ ಫಕ್ರುದ್ದೀನ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ಚೇತನ್, ಸೇವಾಪ್ರತಿನಿಧಿ ಅರ್ಷಿಯಾ, ಪದಾಧಿಕಾರಿ ಫರ್ಜಾನಾ ನೌಷಾದ್ ಹಾಜರಿದ್ದರು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರಿಗೆ ಜಾಬ್‍ಕಾರ್ಡ್ (ಉದ್ಯೋಗ ಚೀಟಿ) ನೀಡಲು ಅಭಿಯಾನವನ್ನು ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಫೌಝೀಯಾ ತರುನ್ನುಮ್ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರನ್ನು ಗುರುತಿಸಿ ಮನೆಮನೆಗೂ ತೆರಳಿ ಜಾಬ್‍ಕಾರ್ಡ್ ನೀಡಲು ವಿಶೇಷ ಅಭಿಯಾನ ನಡೆಸಬೇಕೆಂದು ತಿಳಿಸಿದರು.
ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಅಣಬೆ ಬೇಸಾಯ, ದನಕರುಗಳಶೆಡ್, ಪೌಷ್ಟಿಕ ತೋಟ ಒಳಗೊಂಡಂತೆ ಒಂದು ಪ್ಯಾಕೇಜ್ ಯೋಜನೆಯನ್ನು ಜಾರಿಗೊಳಿಸಿದ್ದು ರೈತರು ಮತ್ತು ಜನಸಾಮಾನ್ಯರು ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸ್ವಚ್ಛಭಾರತ್ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದ್ರವ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳಾಲಾಗಿದೆ. ಕೆಲವೊಂದು ಕಡೆ ಜಾಗದ ಕೊರತೆಯಿಂದ ಘಟಕದ ಕಾಮಗಾರಿ ವಿಳಂಭವಾಗಿದೆ. ತಾಲ್ಲೂಕು ದಂಡಾಧಿಕಾರಿಗಳು ಸೂಕ್ತ ನಿವೇಶನವನ್ನು ಒದಗಿಸಲು ಸಹಕರಿಸಬೇಕೆಂದು ಹೇಳಿದರು.
ಕೋವಿಡ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗವನ್ನು ಕಲ್ಪಿಸಲಾಗಿದೆ. ಅದೇ ರೀತಿ ರೈತರು ಮತ್ತು ಜನ ಸಾಮಾನ್ಯರಿಗೆ ಈ ಯೋಜನೆಯ ಮೂಲಕ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗಿದ್ದು, ಪ್ರಸ್ತುತ ಶಿಡ್ಲಘಟ್ಟ ತಾಲೂಕಿನಲ್ಲಿ 26 ಸಾವಿರ ಜಾಬ್‍ಕಾರ್ಡ್‍ಗಳನ್ನು ನೀಡಲಾಗಿದೆ. ಮುಂದಿನ ತಿಂಗಳ ಅಂತ್ಯದೊಳಗೆ 40 ಸಾವಿರ ಜಾಬ್‍ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಪಿಡಿಓ ಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ತಕ್ಷಣ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ವರದಿ ಸಲ್ಲಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಗಳು ವಿದ್ಯುತ್ ಕಣ್ಣು ಮುಚ್ಚಾಲೆಯ ಸಮಸ್ಯೆಯನ್ನು ನೀಗಿಸಲು ಗಮನಹರಿಸಬೇಕು. ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದರು.
ವಸತಿ-ಕುಡಿಯುವ ನೀರು ಪೂರೈಕೆ,ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆ ಮತ್ತು ವಸೂಲಾತಿ, ಕೊರೊನಾ ಸೋಂಕು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು, ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಎನ್.ಆರ್.ಎಲ್.ಎಂ ಯೋಜನೆ ಮತ್ತು ಅಡ್‍ಹಾಕ್ ಸಮಿತಿಯ ಪ್ರಗತಿ ವರದಿಗಳನ್ನು ಪರಿಶೀಲಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಇಒ ಶಿವಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ವಿನಯ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ, ಸಿಡಿಪಿಒ ನಾಗವೇಣಿ, ಕುಡಿಯುವ ನೀರು, ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ಲೋಕೇಶ್, ಬಿಸಿಎಂ ಅಧಿಕಾರಿ ಸಕ್ಪಾಲ್, ಪಂಚಾಯತ್ ರಾಜ್ ಇಲಾಖೆಯ ಎಇಇ ರಮೇಶ್ ಹಾಗೂ ವಿವಿಧ ಗ್ರಾಮ ಪಂಚಾತಿಯಿಗಳ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಕರ ವಸೂಲಿಗಾರರು ಹಾಜರಿದ್ದರು.
ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ, ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಸಿಹಿ ಹಾಗೂ ಲಘು ಉಪಹಾರ ವಿತರಿಸಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಮಾತನಾಡಿದರು.
ಇಡೀ ಪ್ರಪಂಚ ಭಾರತದ ಕಡೆ ಮೆಚ್ಚುಗೆಯಿಂದ ನೋಡುವಂತೆ ಮಾಡಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿಯೂ, ಆರ್ಥಿಕ ಹಿಂಜರಿತವಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ನರೇಂದ್ರ ಮೋದಿಯವರನ್ನು ರಾಯಭಾರಿಯನ್ನಾಗಿ ಮಾಡಿರುವುದು ದೇಶಕ್ಕೆ ಹೆಮ್ಮೆ ಎಂದು ಅವರು ತಿಳಿಸಿದರು.
ಕೋವಿಡ್ ನಿಂದ ಇಡೀ ಪ್ರಪಂಚವೇ ತೊಂದರೆಗೊಳಗಾದರೂ ನಮ್ಮ ದೇಶ, ಅದರಲ್ಲಿಯೂ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ವಿವಿಧ ರಂಗಗಳಲ್ಲಿ ಆಗಬಹುದಾಗಿದ್ದ ತೊಂದರೆಗಳನ್ನು ತಡೆಗಟ್ಟಲು ನಮ್ಮ ಪ್ರಧಾನಿಯವರು ಸಾಕಷ್ಟು ಶ್ರಮಿಸಿದ್ದಾರೆ. ರೈತರ ಮಣ್ಣಿನಿಂದ ಮಾರುಕಟ್ಟೆಯವರೆಗೂ ನೆರವಾಗಲು ಅವರು ಕೃಷಿ ಸಿಂಚನ ಮುಂತಾದ ಯೋಜನೆಗಳ ಮೂಲಕ ಪರಿಶ್ರಮಿಸುತ್ತಿದ್ದಾರೆ. ಕೃಷಿ ಕ್ಷೇತ್ರದತ್ತ ಜನರ ಒಲವು ಹೆಚ್ಚಾಗಿದೆ. ಕೃಷಿ ಕ್ಷೇತ್ರ ಶೇ 9 ರಷ್ಟು ಬೆಳವಣಿಗೆಯಾದರೆ, ಕೃಷಿ ಉತ್ಪನ್ನಗಳ ಬೆಳವಣಿಗೆಯಲ್ಲಿ ಶೇ 27 ರಷ್ಟು ಬೆಳವಣಿಗೆಯಾಗಿದೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಜಂಗಮಕೋಟೆ, ಎಚ್ ಕ್ರಾಸ್ ಹಾಗೂ ಚೀಮಂಗಲ ಕೇಂದ್ರಗಳಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯರು ಹಾಗೂ ಹಿರಿಯರನ್ನು ಗುರುತಿಸಿ ಹಣ್ಣು-ಹಂಪಲು ಮತ್ತು ಸಿಹಿಯನ್ನು ಹಂಚಲಾಯಿತು. ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಭಾರತೀಯ ಜನತಾ ಪಾರ್ಟಿ ಶಿಡ್ಲಘಟ್ಟ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಗ್ರಾಮಂತರ ಅಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ನಂದೀಶ್, ಮಾಜಿ ಶಾಸಕ ಎಂ.ರಾಜಣ್ಣ, ನಗರಸಭಾ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷೆ ಸುಜಾತಮ್ಮ, ದಾಮೋದರ್, ಅರಿಕೆರೆ ಮುನಿರಾಜು, ರಾಮಚಂದ್ರಪ್ಪ, ರಜನಿಕಾಂತ್ ಬಾಬು, ನಟರಾಜ್, ರವಿ ಚಾರಿ, ಅಂಬರೀಶ್, ಮಾದೇನಹಳ್ಳಿ ಮಂಜುನಾಥ್, ಎಚ್ ಕ್ರಾಸ್ ಸುಬ್ರಮಣಿ, ಗೋವಿಂದ, ಶ್ರೀನಿವಾಸ್, ಸಾದಲಿ ನವೀನ್, ಭೈರಾರೆಡ್ಡಿ, ನರೇಂದ್ರ ಮಂಜುನಾಥ್, ಸುಶೀಲಮ್ಮ, ಆದಿನಾರಾಯಣಪ್ಪ, ಶ್ರೀರಾಮ್ ಹಾಜರಿದ್ದರು.