19.1 C
Sidlaghatta
Saturday, December 3, 2022

ಜಾಗತಿಕ ದಿಕ್ಸೂಚಿ ವ್ಯವಸ್ಥೆ (ಜಿಪಿಎಸ್) ಮತ್ತದರ ಹಿಂದಿನ ಮೂಲವಿಜ್ಞಾನ

- Advertisement -
- Advertisement -

ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ನಡುವಿನ ವೈಷಮ್ಯವೇ ಬಾಹ್ಯಾಕಾಶ ತಂತ್ರಜ್ಞಾನ ಮುಂದುವರೆಯಲು ಕಾರಣವಾಯ್ತೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ರಷ್ಯಾ ಮಾನವ ನಿರ್ಮಿತ ಪ್ರಪ್ರಥಮ ಉಪಗ್ರಹ ಸ್ಪುಟ್ನಿಕ್ ಅನ್ನು ಹಾರಿಬಿಟ್ಟಾಗ ದಂಗುಬಡಿದ ಅಮೆರಿಕ ಅತ್ಯಂತ ತೀವ್ರಗತಿಯಲ್ಲಿ ಅಪಾರ ಹಣ ಸುರಿದು ಸಂಶೋಧನೆ ನಡೆಸತೊಡಗಿತು. ಅದೇ ದಿನಗಳಲ್ಲಿ ಹಾರುತ್ತಿರುವ ಸ್ಪುಟ್ನಿಕ್ ಸೂಸುತ್ತಿದ್ದ ರೇಡಿಯೋ ಸಂಕೇತಗಳ ಅಧ್ಯಯನ ನಡೆಸುತ್ತಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳು ಕಂಪ್ಯೂಟರ್ ನಲ್ಲಿ ಅತಿ ಕ್ಲಿಷ್ಟವಾದ ಲೆಕ್ಕಾಚಾರಗಳನ್ನು ನಡೆಸಿ ಅದು ಹಾರಾಡುತ್ತಿರುವ ಪಥವನ್ನು ಕಂಡುಹಿಡಿದು ಅದನ್ನು ಬಹಿರಂಗ ಪಡಿಸಿದಾಗ ಅಚ್ಚರಿ ಪಡುವ ಸರದಿ ರಷ್ಯಾದ್ದಾಗಿತ್ತು.
ಅದು ಅಮೆರಿಕ ಮತ್ತು ರಷ್ಯಾ ದೇಶಗಳ ಮಿಲಿಟರಿ ಪಡೆಗಳು ಬಲಗೊಳ್ಳುತ್ತಿದ್ದ ಕಾಲ. ಬಲವರ್ಧನೆಗೆಂದು ತಂತ್ರಜ್ಞಾನದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ಎರಡೂ ದೇಶಗಳಲ್ಲಿ ನಡೆಯತೊಡಗಿದ್ದವು. ಭೂಮಿಯಲ್ಲೇ ಕುಳಿತು ಹಾರಾಡುತ್ತಿರುವ ಉಪಗ್ರಹದ ಪಥವನ್ನು ಲೆಕ್ಕಹಾಕುವ ತಂತ್ರವನ್ನು ವಿಜ್ಞಾನಿಗಳು ಆಗಲೇ ಶೋಧಿಸಿದ್ದರು. ಇದಕ್ಕೆ ವಿರುದ್ಧವಾದ ಅಂದರೆ, ಉಪಗ್ರಹವನ್ನು ಬಳಸಿಕೊಂಡು ಭೂಮಿಯಲ್ಲಿ ನಿರ್ದಿಷ್ಟ ಸ್ಥಳವನ್ನು ಪತ್ತೆ ಮಾಡುವ ತಂತ್ರವನ್ನು ಮುಂದೆ ಕಂಡುಹಿಡಿಯಲಾಯಿತು. ಮಿಲಿಟರಿ ವಿಮಾನಗಳು, ಕ್ಷಿಪಣಿಗಳು ಮುಂತಾದ ವಾಯುಯಾನಗಳಿಗೆ ದಿಕ್ಸೂಚಿಯಾಗಿ ಈ ತಂತ್ರದ ಬಳಕೆ ಜಾರಿಗೆ ಬಂತು. ತಾವು ಎಷ್ಟು ಎತ್ತರದಲ್ಲಿ ಹಾಗೂ ಕೇಂದ್ರದಿಂದ ಎಷ್ಟು ದೂರದಲ್ಲಿ ಹಾರಾಡುತ್ತಿದ್ದೇವೆನ್ನುವ ವಿವರಗಳನ್ನು ವಿಮಾನಗಳು ದೂರದಲ್ಲಿ ಚಲಿಸುತ್ತಿರುವ ಉಪಗ್ರಹಗಳು ಬಿತ್ತರಿಸುವ ರೇಡಿಯೋ ಸಂಕೇತಗಳ ಆಧಾರದ ಮೇಲೆ ಕಳುಹಿಸತೊಡಗಿದವು. ಆದರೆ ಈ ತಂತ್ರಜ್ಞಾನ ಅಮೆರಿಕದ ಆಸ್ತಿಯಾಗಿಯೇ ಕೆಲವು ವರ್ಷಗಳ ಕಾಲ ಉಳಿದುಕೊಂಡಿತು.
1989ರಲ್ಲಿ 269 ಜನರನ್ನು ಸಾಗಿಸುತ್ತಿದ್ದ ಕೊರಿಯಾದ ವಿಮಾನವೊಂದು ತಪ್ಪು ನಿರ್ದೇಶನದ ಫಲವಾಗಿ ರಷ್ಯಾದ ನಿಷೇಧಿತ ವಾಯುಪ್ರದೇಶಕ್ಕೆ ಪ್ರವೇಶಿಸಿತ್ತು. ವೈರಿವಿಮಾನದ ಪ್ರವೇಶವಾಯ್ತೆಂದುಕೊಂಡು ರಷ್ಯಾದ ಕ್ಷಿಪಣಿ ಆ ವಿಮಾನವನ್ನೇ ಹೊಡೆದುರುಳಿಸಿತು. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಆ ಘಟನೆಯ ನಂತರ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ತಮ್ಮ ದೇಶ ಬಳಸುತ್ತಿರುವ ಜಿಪಿಸ್ ಸಂಚಾರ ನಿರ್ದೇಶನ ವ್ಯವಸ್ಥೆ ಎಲ್ಲಾ ದೇಶಗಳೂ ಬಳಸುವಂತಾಗಲೆಂದು ಅನುಮತಿ ನೀಡಿದರು. ಆಗಿನಿಂದ ದಿಕ್ಸೂಚಿ ವ್ಯವಸ್ಥೆಯಿಂದಾಗಿ ವಿಶ್ವದ ವಾಯುಯಾನ ಕ್ಷೇತ್ರವು ಬಹಳೇ ಮುಂದುವರೆಯಲು ಸಾಧ್ಯವಾಗಿದೆ. ದಿನಕ್ಕೆ ದೇಶವಿದೇಶಗಳ ಸಾವಿರಾರು ವಿಮಾನಗಳು ಹಾರಾಡುತ್ತಿದ್ದರೂ ಪ್ರತಿಯೊಂದರ ದಿಕ್ಕು, ಹೋಗುವ ಮಾರ್ಗ, ಹಾರಾಟದ ಸಮಯ ಇತ್ಯಾದಿ ಮಾಹಿತಿಗಳು ಲಭ್ಯವಾಗುತ್ತಿವೆ.
ಇಂದು ಜಾಗತಿಕ ದಿಕ್ಸೂಚಿ ವ್ಯವಸ್ಥೆ ಜಿಪಿಎಸ್ ನ್ನು ಹತ್ತು ಹಲವಾರು ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದಲ್ಲಿ ಹೊಸಹೊಸ ಅನ್ವೇಷಣೆಗಳಾದಂತೆ ಸಾಮಾಜಿಕ, ಮಿಲಿಟರಿ ಹಾಗೂ ವ್ಯಾಪಾರೀ ಬೇಡಿಕೆಗಳಿಗನುಗುಣವಾಗಿ ಜಿಪಿಎಸ್ ವ್ಯವಸ್ಥೆಯಲ್ಲಿಯೂ ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂದಿಗೂ ಅಮೆರಿಕಾ ದೇಶದ ರಕ್ಷಣಾ ಇಲಾಖೆ ಕಾರ್ಯನಿರತವಾಗಿರುವ ಈ 30ಕ್ಕಿಂತ ಹೆಚ್ಚು ಉಪಗ್ರಹಗಳ ನಿರ್ವಹಣೆಯ ಹೊಣೆ ಹೊತ್ತಿದೆ. ಈ ಉಪಗ್ರಹಗಳು ಕನಿಷ್ಟ ಹತ್ತು ವರ್ಷ ಕಾರ್ಯನಿರತವಾಗಿರಬಲ್ಲವು. ಆದ್ದರಿಂದ ಅವಧಿ ಮೀರಿದ ಉಪಗ್ರಹಗಳಿಗೆ ಬದಲಿಯಾಗಿ ಹೊಸ ಹೊಸ ಉಪಗ್ರಹಗಳ ಉಡಾವಣೆಯಾಗುತ್ತಲೇ ಇರುತ್ತದೆ. ಇನ್ನು ಅವು ಕಳಿಸುವ ಸಂಕೇತಗಳು ಐ1 ಮತ್ತು ಐ2 ಎಂಬ ಬೇರೆ ಬೇರೆ ತರಂಗಾಂತರಗಳುಳ್ಳ ರೇಡಿಯೋ ಅಲೆಗಳು. ಐ1 ಅಲೆಗಳು ನಾಗರಿಕರ ಬಳಕೆಗಾದರೆ ಐ2 ಅಲೆಗಳು ಅಮೆರಿಕದ ರಕ್ಷಣಾ ಇಲಾಖೆಯ ಸ್ವತ್ತುಗಳು.
1978 ರಲ್ಲಿ ದಿಕ್ಸೂಚಿಯಾಗಿ ಬಳಕೆಗೆಂದು ಒಂದು ಉಪಗ್ರಹವನ್ನು ಅಮೆರಿಕದ ಮಿಲಿಟರಿ ಇಲಾಖೆಯ ವಿಜ್ಞಾನಿಗಳು ಆಗಸಕ್ಕೆ ಹಾರಿಬಿಟ್ಟರು. ಆದರೆ ಒಂದೇ ಒಂದು ಉಪಗ್ರಹ ಇಡೀ ಭೂಮಂಡಲವನ್ನು ನಿಟ್ಟಿಸಿ ಎಲ್ಲಾ ಕಡೆ ರೇಡಿಯೋ ಸಂಕೇತಗಳನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಅವುಗಳ ಸಂಖ್ಯೆಯನ್ನು ಹೆಚ್ಚಿಸುತ್ತ, 1994 ರಲ್ಲಿ ಏಕರೂಪದ, ಏಕ ಕಾರ್ಯವ್ಯಾಪ್ತಿಯ ಇಪ್ಪತ್ನಾಲ್ಕು ಉಪಗ್ರಹಗಳ ಜಾಲವೇ ಭೂಗ್ರಹದ ಸುತ್ತ ಆವರಿಸುವಂತೆ ಮಾಡಲಾಯಿತು.
ಈ 24 ಉಪಗ್ರಹಗಳು ಭೂಮಿಯ ಮೇಲಿರುವ ನಮಗೆ ನಾವಿರುವ ಸ್ಥಳದ ಅರಿವನ್ನು ಪಡೆಯುವಲ್ಲಿ ಅತ್ಯಂತ ದಕ್ಷವಾಗಿ ಕೆಲಸ ಮಾಡುತ್ತಿವೆ. ಭೂಮಿಯ ಮೇಲ್ಮೈನ ಯಾವುದೇ ಸ್ಥಳವನ್ನು ಗುರುತಿಸಲು ಸಾಧ್ಯವಾಗುವಂತೆ (ನಾಲ್ಕು ಉಪಗ್ರಹಗಳು ಹಾರಾಡುವ) ಆರು ವಿವಿಧ ಸಮತಲದ ನಿರ್ದಿಷ್ಟವಾದ 360 ಡಿಗ್ರಿಯ ವರ್ತುಲ ಕಕ್ಷೆಗಳಲ್ಲಿ ಈ 24 ಉಪಗ್ರಹಗಳು ಹಾರಾಡುತ್ತಿವೆ. 7000ಕಿಮೀ ವೇಗದಲ್ಲಿ ದಿನಕ್ಕೆ ಎರಡು ಬಾರಿ ಭೂಮಿಯನ್ನು ಗಸ್ತು ಹೊಡೆಯುವ ಉಪಗ್ರಹಗಳು ಅವು. ತಮ್ಮ ಪಥವನ್ನು ಬದಲಿಸಬಾರದೆಂದು ಪ್ರತಿಯೊಂದು ಉಪಗ್ರಹಕ್ಕೂ ರಾಕೆಟ್ ಬೂಸ್ಟರ್‍ನ ಲಗಾಮಿದೆ. ಇವುಗಳಲ್ಲಿ ಪ್ರತಿಯೊಂದೂ ಸುಮಾರು 2 ಸಾವಿರ ಪೌಂಡ್ ಅಥವಾ ಸುಮಾರು 900 ಕೆಜಿ ತೂಗುವ, ಹದಿನೇಳು ಅಡಿ ವಿಸ್ತಾರದ ಉಪಗ್ರಹ. ಅವುಗಳ ಶಕ್ತಿ ಸಂಚಯನಕ್ಕೆಂದು ಸೌರಫಲಕಗಳ ಪಟ್ಟಿ ಇದೆ. ಹಾಗಾಗಿ ಯಾವುದೇ ಹೊತ್ತಿನಲ್ಲಿ, ಕಟ್ಟಡದೊಳಗಿನ ಪ್ರದೇಶ, ದಟ್ಟ ಅರಣ್ಯದ ನೆಲ ಇವುಗಳನ್ನು ಹೊರತುಪಡಿಸಿ ಭೂಮಿಯ ಇಡೀ ಮೇಲ್ಮೈ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಉಪಗ್ರಹಗಳ ಅವಗಾಹನೆಗೆ ಒಳಗಾಗುತ್ತಲೇ ಇರುತ್ತದೆ. ಪ್ರತಿಯೊಂದೂ ಹತ್ತು ವರ್ಷಗಳ ಕಾಲ ಸಮರ್ಥವಾಗಿ ಕೆಲಸ ಮಾಡುವ ಉಪಗ್ರಹ. ಸತತವಾಗಿ ಬದಲೀ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆ ನಡೆಯುತ್ತಲೇ ಇವೆ.
ಈ ಉಪಗ್ರಹಗಳು ಬಿತ್ತರಿಸುವ ತರಂಗಗಳು ಮೋಡ, ನೀರು, ಪ್ಲಾಸ್ಟಿಕ್ ಮತ್ತು ಗಾಜುಗಳ ಮೂಲಕ ಹಾದುಹೋಗಬಲ್ಲವು ಆದರೆ ದಟ್ಟ ಕಾಡು, ಎತ್ತರದ ಬೆಟ್ಟ, ದಪ್ಪನೆಯ ಗೋಡೆಯ ಕಟ್ಟಡ ಇವುಗಳನ್ನು ದಾಟಲಾರವು. ಅವು ಕಳುಹಿಸುವ ಸಂದೇಶಗಳಲ್ಲಿ ಮೂರು ರೀತಿಯ ವಿವರಗಳು ಅಡಕವಾಗಿರುತ್ತವೆ. ಮೊದಲನೆಯದು ಉಪಗ್ರಹಕ್ಕೆ ನೀಡಲಾಗಿರುವ ಹೆಸರು ಅಥವಾ ಗುರುತುಪಟ್ಟಿ, ಎರಡನೆಯದು ಪ್ರಸಕ್ತ ದಿನಾಂಕ ಮತ್ತು ಸಮಯ ಹಾಗೂ ಮೂರನೆಯದು ಯಾವ ಉಪಗ್ರಹ ಯಾವ ಹೊತ್ತಿನಲ್ಲಿ ಎಲ್ಲಿರಬೇಕು ಎಂಬ ಮಾಹಿತಿಪಟ್ಟಿ.
ಭೂಗ್ರಹದ ಪೂರ್ತಿ ಮೇಲ್ಮೈನಲ್ಲಿ ಸತತವಾಗಿ ಬಿತ್ತರಗೊಳ್ಳುತ್ತಿರುವ ಉಪಗ್ರಹ ಸಂಕೇತಗಳನ್ನು ಬಳಸಿಕೊಳ್ಳಬೇಕೆಂದರೆ ಅವು ಬಿತ್ತರಿಸುವ ರೇಡಿಯೋ ಸಂದೇಶಗಳನ್ನು ಅರಿಯುವ ರಿಸಿವರ್ ಸಾಧನ ನಮ್ಮ ಬಳಿ ಇರಬೇಕು. ರಿಸಿವರ್ ಯಂತ್ರ ನಾಲ್ಕು ಉಪಗ್ರಹಗಳ ಸಂದೇಶಗಳ ಮೂಲಕ ಒಂದೊಂದಕ್ಕೂ ಇರುವ ದೂರವನ್ನು ಲೆಕ್ಕ ಹಾಕಿ ಗಣಿತದ ತತ್ವವೊಂದರ ಮೂಲಕ ಅದನ್ನು ಬಳಸಿಕೊಂಡು ತಾನಿರುವ ತಾಣವನ್ನು ಗುರುತಿಸುತ್ತದೆ.
ಉಪಗ್ರಹಗಳು ತಾವು ಸಂದೇಶಗಳನ್ನು ಹೊರಸೂಸಿದ ಸಮಯವನ್ನೂ ಕಳಿಸುತ್ತವೆ. 12,200 ಕಿಮೀ ದೂರದಿಂದ ಭೂಮಿಯನ್ನು ತಲುಪುವಾಗ ಬೆಳಕಿನ ವೇಗದ ಆ ಅಲೆಗಳಿಗೂ ಸ್ವಲ್ಪ ಸಮಯಾವಕಾಶ ಬೇಕೇ ಬೇಕು. ರಿಸಿವರ್ ತನ್ನ ಸಮಯದೊಂದಿಗೆ ಅದನ್ನು ಹೋಲಿಸಿ, ಅವೆರಡರ ನಡುವಿನ ಅಂತರವನ್ನು ಲೆಕ್ಕ ಹಾಕುತ್ತದೆ. ಉಪಗ್ರಹ ಕಳುಹಿಸಿದ ಸಂಕೇತಗಳು ಬೆಳಕಿನ ವೇಗದಲ್ಲಿ ಚಲಿಸುವುದರಿಂದ ಉಪಗ್ರಹ ಮತ್ತು ರಿಸಿವರ್ ನಡುವಿನ ದೂರವನ್ನು ಬೆಳಕಿನ ವೇಗವನ್ನು ಸಮಯದೊಂದಿಗೆ ಗುಣಿಸಿ ಕಂಡುಹಿಡಿಯಲಾಗುತ್ತದೆ. ಈಗ ತಾನಿರುವ ಸ್ಥಳವನ್ನು ಅಕ್ಷಾಂಶ, ರೇಖಾಂಶ ಹಾಗೂ ಎತ್ತರ ಈ ವಿವರಗಳೊಡನೆ ರಿಸಿವರ್ ಬಹಿರಂಗಪಡಿಸುತ್ತದೆ. ಅಂದರೆ ರಿಸಿವರ್ ಯಾರ ಬಳಿ ಇರುತ್ತದೋ ಆ ವ್ಯಕ್ತಿಗೆ ತಾನಿರುವ ತಾಣದ ಮಾಹಿತಿ ದೊರೆಯುತ್ತದೆ.
ಸಂಕೇತ ಆರಂಭಗೊಂಡ ಮತ್ತು ಅದನ್ನು ಸ್ವೀಕರಿಸಿದ ಸಮಯಗಳ ಅಂತರ ಅತ್ಯಂತ ಮಹತ್ವದ್ದು. ಇಲ್ಲಿ ಬೆಳಕಿನ ವೇಗ ಅತಿ ಹೆಚ್ಚಿದ್ದು ಸಮಯದಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸವಾದರೂ ‘ದೂರ’ ದಲ್ಲಿ ಬಹಳೇ ವ್ಯತ್ಯಯ ಉಂಟಾಗಬಹುದು. ಉದಾಹರಣೆಗೆ ಒಂದೇ ಒಂದು ಮೈಕ್ರೋಸೆಕೆಂಡ್ ಹೆಚ್ಚುಕಡಿಮೆಯಾದರೆ, ನಾವು ಬಯಸುವ ಜಾಗ ನಿಜವಾಗಿ ಇರುವುದಕ್ಕಿಂತ 300 ಮೀ ಆಚೀಚೆ ಇದೆಯೆಂದು ನಮ್ಮ ರಿಸಿವರ್ ತೋರಿಸುವ ಸಂಭವವಿರುತ್ತದೆ. ಆದ್ದರಿಂದ, ಉಪಗ್ರಹದಲ್ಲಿರುವ ಮತ್ತು ರಿಸಿವರಿನಲ್ಲಿರುವ ಗಡಿಯಾರಗಳಲ್ಲಿ ತಾಳಮೇಳವಿರಬೇಕು. ದೀರ್ಘಕಾಲ ಸಮರ್ಪಕವಾಗಿ ಚಲಿಸುವುದು ಅಣುಗಡಿಯಾರವೊಂದೇ. ಉಪಗ್ರಹಗಳಲ್ಲ್ಲಿ ಅಣುಗಡಿಯಾರವನ್ನೇ ಅಳವಡಿಸಿಡುತ್ತಾರೆ. ಆದರೆ ಗ್ರಾಹಕ ಸ್ನೇಹಿ ರಿಸಿವರ್‍ನಲ್ಲಿ ದುಬಾರಿ ವೆಚ್ಚದ ಅಣುಗಡಿಯಾರ ಕಷ್ಟಸಾಧ್ಯ. ಇದಕ್ಕೆಂದೇ ವಿಜ್ಞಾನಿಗಳು ಉಪಾಯವೊಂದನ್ನು ಹುಡುಕಿದ್ದಾರೆ. ರಿಸಿವರ್ ನಲ್ಲಿ ಸಾಧಾರಣವಾದ ಕ್ವಾಟ್ರ್ಜ್ ಗಡಿಯಾರವಿರುತ್ತದೆ. ಆದರೆ ಅದು ಉಪಗ್ರಹಗಳ ವೇಳೆಯನ್ನು ಅನುಸರಿಸಿ ಆಗಾಗ ತನ್ನ ವೇಳೆಯನ್ನು ಬದಲಾಯಿಸಿಕೊಳ್ಳುತ್ತಿರುತ್ತದೆ. ಹೀಗೆ ಕಡಿಮೆ ವೆಚ್ಚದಲ್ಲಿ ಅಣುಗಡಿಯಾರದ ನಿಖರತೆಯನ್ನು ಪಡೆಯುವ ಬಗೆಯನ್ನು ರಿಸಿವರ್ ಹೊಂದಿದೆ.
ನಾವಿರುವ ಸ್ಥಳದ ಅತಿ ನಿಖರವಾದ ವಿವರಗಳು ಬೇಕೆಂದರೆ ಅಧಿಕ ದುಡ್ಡು ಸುರಿಯಲು ತಯಾರಿರಬೇಕು. ಮುಂದುವರೆದ ದೇಶಗಳಲ್ಲಿ ನೀವು ನಿಂತ ಜಾಗದ ನಕ್ಷೆಯನ್ನು ಅತಿ ನಿಖರವಾಗಿ ಅಂದರೆ ಒಂದು ಸೆಂಟಿಮೀಟರ್ ವ್ಯತ್ಯಾಸದೊಳಗೆ ತಿಳಿಸುವ ಅತ್ಯಾಧುನಿಕವಾದ ಜಿಪಿಎಸ್ ಉಪಕರಣ ಕೂಡ ಇಂದು ಲಭ್ಯ.
2000 ದ ನಂತರದಲ್ಲಿ ತಂತ್ರಜ್ಞಾನದ ಪ್ರಗತಿ ಎಲ್ಲಾ ಕಡೆ ಸುಲಲಿತವಾಗಿ ಕಾರ್ಯವಹಿಸುವ ಜಿಪಿಎಸ್‍ಗಳ ಆವಿಷ್ಕಾರಕ್ಕೆ ಕಾರಣವಾಗಿದೆ.
ಇಂದಿಗೂ ಅಧಿಕೃತ ಮಾಲೀಕನೆಂದರೆ ಹಿರಿಯಣ್ಣ ಅಮೆರಿಕಾ. ಐರೋಪ್ಯ ಒಕ್ಕೂಟ ಗೆಲಿಲಿಯೋ ಎಂಬ ಪೂರಕ ಉಪಗ್ರಹ ವ್ಯವಸ್ಥೆಯನ್ನೂ, ರಷ್ಯಾ ಗ್ಲೊನಾಸ್ ಸಿದ್ಧಗೊಳಿಸುತ್ತಿದೆ. ಭಾರತದಲ್ಲಿಯೂ 774 ಕೋಟಿ ರೂಪಾಯಿಗಳ ಜಿಪಿಎಸ್ ಪೂರಕ ಯೋಜನೆ ಗಗನ್ ತಯಾರಾಗುತಿದೆ.
ಜಿಪಿಎಸ್ ತಂತ್ರಜ್ಞಾನ ಮನೋರಂಜನೆಯ ಸಾಧನವಾಗಿಯೂ ಉಪಯೋಗವಾಗುತ್ತಿದೆ.
ಭೂಮಿ, ಸಮುದ್ರ ಮತ್ತು ಆಕಾಶ ಹೀಗೆ ಎಲ್ಲೆಲ್ಲಿ ಈ ಉಪಗ್ರಹಗಳ ಸಂಕೇತಗಳು ತಲುಪುತ್ತವೋ ಅಲ್ಲೆಲ್ಲಾ ಕಡೆ ಜಿಪಿಎಸ್ ಸೇವೆಯನ್ನು ಬಳಸಿಕೊಳ್ಳಲು ಸಾಧ್ಯವೆಂದು ಹೇಳಿದೆವಷ್ಟೆ? ಇತ್ತೀಚೆಗೆ ಅಗಾಧವಾಗಿ ಬೆಳೆದು ನಿಂತಿರುವ ಕಂಪ್ಯೂಟರ್ ತಂತ್ರಜ್ಞಾನ ಹಾಗೂ ಜಿಪಿಎಸ್ ಜಂಟಿಯಾಗಿ ಹತ್ತಾರು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಗಗನದಲ್ಲಿ ವಿಮಾನಯಾನಕ್ಕೆ, ನೀರಿನಲ್ಲಿ ವೃತ್ತಿಪರ ಮೀನುಗಾರರಿಗೆ ಮತ್ತು ಸಮುದ್ರಗಾಮಿಗಳಿಗೆ ನಿರ್ದೇಶನ ನೀಡುವ ಜಿಪಿಎಸ್ ಭೂಮಿಯಲ್ಲಿ ತಂತ್ರಜ್ಞಾನ ಸುಧಾರಣೆಯೊಂದಿಗೆ ಈಗೀಗ ಕಡಿಮೆ ವೆಚ್ಚದ ಜಿಪಿಎಸ್ ಆಧಾರಿತ ಉಪಕರಣಗಳು ಸಾರ್ವಜನಿಕರಲ್ಲೂ ಹೆಚ್ಚು ಪ್ರಸಿದ್ಧಿ ಪಡೆಯತೊಡಗಿವೆ. ಸ್ವಂತದ ವಾಹನಗಳಲ್ಲಿ ನೇವಿಗೇಟರ್ ಅಥವಾ ಪಥನಿರ್ದೇಶನಕ್ಕೆಂದು ಜಿಪಿಎಸ್‍ನ್ನು ಇತರ ತಂತ್ರಜ್ಞಾನಗಳೊಂದಿಗೆ ಅಳವಡಿಸಿಕೊಳ್ಳಬಹುದಾಗಿದೆ. ಇಡೀ ಭೂಮಿಯ ನಕಾಶೆಯೊಂದಿಗೆ ಇಚ್ಛಿತ ಸ್ಥಳದ ವಿವರಗಳನ್ನೂ ನೀಡುವ ‘ಗೂಗಲ್ ಅರ್ಥ್’ ಜಾಲತಾಣ ಜೊತೆಗೆ ಫೋನು, ಕ್ಯಾಮೆರಾಗಳನ್ನು ಬಳಸಿಕೊಂಡು ಹೆಚ್ಚು ಮಾಹಿತಿ ಪಡೆಯಬಹುದಾಗಿದೆ. ಸೆಲ್ ಫೋನುಗಳಲ್ಲಿ ಕೂಡ ಜಿಪಿಎಸ್ ಸೇವೆ ಲಭ್ಯವಿದ್ದು ಬೆರಳತುದಿಯಲ್ಲಿ ಸುತ್ತಲ ಜಗತ್ತಿನ ವಿವರಗಳು ದೊರೆಯುತ್ತವೆ.
ಮೊದಮೊದಲು ಕಾರಿನಲ್ಲಿ ಸಂಚರಿಸುವವರಿಗೆ ಮಾತ್ರವೇ ಮಾರ್ಗದರ್ಶಿಯಾಗಿ ಜಿಪಿಎಸ್ ಬಳಕೆಯಾಗುತ್ತಿತ್ತು. ಚಾಲಕರು ರಸ್ತೆಯಿಂದ ತಮ್ಮ ಕಣ್ಣನ್ನು ಕೀಳದೇ, ಸಿಡಿಯಿಂದ ಸೂಚನೆಗಳನ್ನು ಆಲಿಸುತ್ತ ಮಾರ್ಗಕ್ರಮಿಸುತ್ತಿದ್ದರು. ಉದಾಹರಣೆಗೆ, ನೀವು ಹೊಸ ಊರಿನಲ್ಲಿ ಕಾರು ಓಡಿಸುತ್ತಿದ್ದೀರೆಂದುಕೊಳ್ಳಿ. ನೀವು ತಲುಪಬೇಕಾದ ಜಾಗವನ್ನು ಜಿಪಿಎಸ್ ಗೆ ಫೀಡ್ ಮಾಡಿ ನೀವು ಹೊರಡಿ. ಯಾವ ಮಾರ್ಗ ನಿಮಗೆ ಸಮೀಪ, ಅಲ್ಲಿಗೆ ತಲುಪುವುದು ಹೇಗೆ ಇತ್ಯಾದಿ ವಿವರಗಳನ್ನು ಉಪಕರಣವು ನಿಮಗೆ ಸೂಚಿಸುತ್ತದೆ. ತಲೆಬಿಸಿಯಿಲ್ಲದೆ ನೀವು ನಿಗದಿತ ಸ್ಥಾನವನ್ನು ತಲುಪಬಹುದು.
ಈಗೀಗ ಜಿಪಿಎಸ್ ಜೊತೆ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮಾರುಕಟ್ಟೆಯ ಬೆಲೆಗಳೂ ತಗ್ಗಿ ಹತ್ತು ಹಲವಾರು ಉಪಯೋಗಗಳು ಜನರಿಗೆ ಲಭ್ಯವಾಗಿವೆ. ಭೌಗೋಳಿಕ ಸ್ಥಳಗಳ ವಿವರಗಳಿರುವ ವಿವಿಧ ಸಿಡಿಗಳು ದೊರೆಯುತ್ತವೆ. ಬೇರೆ ಊರಿಗೆ ಹೋಗುವಾಗ ಅದಕ್ಕನುಗುಣವಾದ ಸಿಡಿಯನ್ನು ನಮ್ಮ ಕಂಪ್ಯೂಟರಿನಲ್ಲಿ ಹಾಕಿಕೊಳ್ಳಬೇಕಾಗುತ್ತದೆ.
ಕರಾರುವಾಕ್ ಜಾಗತಿಕ ಮಾಹಿತಿಯನ್ನು ಬಯಸುವ ಯಾವುದೇ ವ್ಯಾಪಾರ ಕ್ಷೇತ್ರದಲ್ಲೂ ಜಿಪಿಎಸ್ಸನ್ನು ಬಳಸಿಕೊಳ್ಳಬಹುದು. ಸರ್ವೆ ಇಲಾಖೆಯಲ್ಲಿ ಸಮರ್ಥವಾಗಿ ಬಳಸಿಕೊಂಡರೆ, ದೂರದೂರದ ಸ್ಥಳಗಳನ್ನು ಅತ್ಯಂತ ನಿಖರವಾಗಿ ಹಾಗೂ ಮಿತವ್ಯಯದಲ್ಲಿ ಗುರುತಿಸಬಹುದು. ಹಾಗೆಯೇ ಫೋನು ಡೈರೆಕ್ಟರಿಗಳಲ್ಲಿ, ಹಳದಿಪುಟಗಳಲ್ಲಿ, ಪ್ರವಾಸೋದ್ಯಮದಲ್ಲಿ, ಮೂಲಭೂತಸೌಕರ್ಯ, ಸಂಪರ್ಕ ಈ ಮುಂತಾದ ಕ್ಷೇತ್ರಗಳಲ್ಲಿ ಜಿಪಿಎಸ್ ಯಶಸ್ವೀ ತಂತ್ರಜ್ಞಾನಮಿತ್ರನಾಗಲಿದೆ. ಚಾರಣ, ಬೇಟೆ, ಗುಡ್ಡಗಾಡಿನ ಆಟೋಟ ಹೀಗೆ ವಿನೋದ ಕ್ರೀಡೆಗಳಲ್ಲಿಯೂ ಕೂಡ ಜನರು ತಾವಿರುವ ತಾಣದ ಹಾಗೂ ಅದರ ಮೂಲಕ ಗಮ್ಯಸ್ಥಾನದತ್ತ ತಮ್ಮ ಪ್ರಗತಿಯನ್ನು ಲೆಕ್ಕಹಾಕಲು ಜಿಪಿಎಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಆಟೋಮೊಬೈಲುಗಳಲ್ಲಿ ತುರ್ತುಪರಿಸ್ಥಿತಿ ಎದುರಾದರೆ, ಗುಂಡಿ ಒತ್ತಿ ತಾವಿರುವ ಸ್ಥಳವನ್ನು ತಿಳಿಸಿ ಅಲ್ಲಿಯೇ ಸಹಾಯ ಪಡೆಯುವುದೂ ಕೂಡ ಜಿಪಿಎಸ್ ನಿಂದ ಸಾಧ್ಯವಿದೆ.
ಕೇಂದ್ರಸ್ಥಳದಲ್ಲಿದ್ದುಕೊಂಡು ವಿವಿಧ ವೇಳೆಗಳಲ್ಲಿ ಅನೇಕ ವಾಹನಗಳ, ಜನರ ಮೇಲ್ವಿಚಾರಣೆ ಮಾಡಲು ಜಿಪಿಎಸ್ ಅತ್ಯಂತ ಸಮರ್ಥವಾದ ತಂತ್ರಜ್ಞಾನವಾಗಿದೆ. ಉದಾಹರಣೆಗೆ, ದೂರದಲ್ಲಿದ್ದುಕೊಂಡೇ ಅಪರಾಧಿಗಳನ್ನು ಕೊಂಡೊಯ್ಯುವ, ಸಾಮಾನು ಸರಂಜಾಮು ಒಯ್ಯುತ್ತಿರುವ ಮತ್ತು ಪೋಲೀಸರ ವಾಹನಗಳ ಹಾಗೂ ಸಾರ್ವಜನಿಕ ಬಸ್ಸುಗಳ ನಿಗರಾನಿ ವಹಿಸಲು ಜಿಪಿಎಸ್ ಸೇವೆಯಿಂದ ಸಾಧ್ಯ. ಈ ಕೆಲಸಕ್ಕೆ ಜಿಪಿಎಸ್ ರಿಸಿವರಿನೊಂದಿಗೆ ಅವಶ್ಯಕ ತಂತ್ರಾಂಶ, ಸಂಪರ್ಕಕ್ಕೆ ಫೋನು ಅಥವಾ ರೇಡಿಯೋ ಅಲೆಗಳ ಬಿತ್ತರ ಈ ವ್ಯವಸ್ಥೆ ಇರಬೇಕಾಗುತ್ತದೆ. ಶಾಲೆಗೆ ಹೋದ ಮಗು ದಾರಿ ತಪ್ಪಿದರೆ ಅದರ ಕೈಯ್ಯಲ್ಲಿರುವ ಜಿಪಿಎಸ್ ವಾಚು ಸೂಸುತ್ತಿರುವ ರೇಡಿಯೋ ಅಲೆಗಳು ದೂರದಲ್ಲಿರುವ ತಂದೆತಾಯಂದಿರಿಗೆ ಸಹಾಯ ಮಾಡಬಲ್ಲವು. ಚಾರಣಕ್ಕೆ ಹೋಗುವವರು ಜಿಪಿಎಸ್ ಆಧಾರಿತ ಇಲೆಕ್ಟ್ರಾನಿಕ್ ಉಪಕರಣಗಳಿದ್ದರೆ ತಾವು ಓಡಾಡುವ ಸ್ಥಳದ ವಿವರಗಳೆಲ್ಲವನ್ನೂ ಪಡೆಯಬಹುದು.
ಅಮೆರಿಕದಂಥಹ ಮುಂದುವರೆದ ದೇಶಗಳಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಹೊಂದಿರುವ ರೈತರು ಹಾಗೂ ಕಂಪೆನಿಗಳು ಜಿಪಿಎಸ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿಯೂ ಬಳಸಿಕೊಳ್ಳುತ್ತಿದ್ದಾರೆ. ಮಣ್ಣುಪರೀಕ್ಷೆಯಿಂದ ಹಿಡಿದು ನೆಲಕ್ಕೆ ನೀರು, ಗೊಬ್ಬರ, ಕೀಟನಾಶಕಗಳ ಸಿಂಪಡಣೆ ಮತ್ತು ಕಟಾವಿನವರೆಗೆ ಎಲ್ಲಾ ಹಂತದಲ್ಲಿಯೂ ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ ಅಲ್ಲಿ ನೆರವು ನೀಡುತ್ತದೆ.
ಬಹುಶಃ ಮನೆಯೊಳಗಿನ ಹಾಗೂ ಗಣಿಯಾಳದ ಆವರಣದ ಹೊರತಾಗಿ ಬೇರೆಲ್ಲೆಡೆಯಲ್ಲಿಯೂ ಜಿಪಿಎಸ್ ಸೇವೆಯನ್ನು ಬಳಸಿಕೊಳ್ಳಬಹುದೇನೋ. ಅಂದ ಹಾಗೆ, ಉಪಗ್ರಹ ಜಾಲ ಬಿತ್ತರಿಸುವ ಜಿಪಿಎಸ್ ಸೇವೆ ಎಲ್ಲರಿಗೂ ಉಚಿತ. ಆದರೆ ಅದಕ್ಕೆ ಪೂರಕವಾದ ರಿಸಿವರ್, ಯಂತ್ರಾಂಶ, ತಂತ್ರಾಂಶಗಳು, ಆಗಾಗ ಅವುಗಳ ಅಪ್‍ಗ್ರೇಡ್ ಹೀಗೆ ಗ್ರಾಹಕನ ಜೇಬಿಗೆ ಕತ್ತರಿ ತಪ್ಪಿದ್ದಲ್ಲ.
ಸರೋಜ ಪ್ರಕಾಶ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!