ನಗರದ ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗಂಗಾಪೂಜೆ, ಕಳಶಸ್ಥಾಪನೆ, ಭಾವನಾ ಮಹರ್ಷಿ ಮತ್ತು ಭದ್ರಾವತಿ ದೇವಿಯ ಕಲ್ಯಾಣೋತ್ಸವ, ಲಾಜಾ ಹೋಮ, ವಿಶೇಷ ಪೂಜೆಯನ್ನು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಾದ ಉಲ್ಲೂರುಪೇಟೆಯ ಆರ್.ಕಿರಣ್, ಮಾರುತಿನಗರದ ಲಿಖಿತ, ಗಾಂಧಿನಗರದ ಸೌಮ್ಯಶ್ರೀ, ಜಂಗಮಕೋಟೆಯ ವೈ.ಸಿ.ಪಲ್ಲವಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಂಗೀತ ಕಚೇರಿಯನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಹಾಡುಹಾರಿಕೆ – ವಿದ್ವಾನ್ ಎಸ್.ವಿ.ರಾಮಮೂರ್ತಿ, ಪಿಟೀಲು ವಿದ್ವಾನ್ ಆರ್.ಜಗದೀಶ್‌ಕುಮಾರ್, ಮೃದಂಗ ವಿದ್ವಾನ್ ಎಸ್.ಎನ್.ಲಕ್ಷ್ಮೀನಾರಾಯಣ, ಖಂಜಿರ ಕೆ.ವಿ.ಕೃಷ್ಣಮೂರ್ತಿ ನುಡಿಸಿದರು.
ಸಂಜೆಗೆ ವೀರಾಂಜನೇಯಸ್ವಾಮಿ, ಭದ್ರಾವತಿ ಹಾಗೂ ಭಾವನಾ ಮಹರ್ಷಿಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಲಾಯಿತು.
ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ಬಿ.ಲಕ್ಷ್ಮೀನಾರಾಯಣಪ್ಪ, ಬಾಬು.ಟಿ. ಲಕ್ಷ್ಮೀನಾರಾಯಣಪ್ಪ, ಗೋಪಾಲ್, ಸಿ. ಲಕ್ಷ್ಮೀನಾರಾಯಣ, ಪುರುಷೋತ್ತಮ್, ದಾಸಪ್ಪನವರ ಪಾರ್ಥಸಾರಥಿ, ಪದ್ಮಶಾಲಿ ಯುವಜನ ಸೇವಾ ಸಂಘದ ಅಧ್ಯಕ್ಷ ನಾಗೇಶ್, ಅನಿಲ್, ನಾಗರಾಜ್, ಮುರಳಿ, ಪ್ರದೀಪ್, ಪವನ್ ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -