ಎಲ್ಲೆಡೆ ತಾಪಮಾನ ಏರುತ್ತಿದೆ. ಹಸಿರು ಪರಿಸರವನ್ನು ವೃದ್ಧಿಸುವುದೊಂದೇ ನಮಗುಳಿದ ಮಾರ್ಗ. ಹುಟ್ಟಿದ ತಾಲ್ಲೂಕಿಗೆ ಸೇವೆ ಮಾಡುವ ಉದ್ದೇಶದಿಂದ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಚಲನಚಿತ್ರ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ಆರ್.ಚಂದ್ರು ಅಭಿಮಾನಿಗಳ ಬಳಗದ ವತಿಯಿಂದ ಪ್ರಾರಂಭವಾದ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಿ ಗಿಡವನ್ನು ನೆಟ್ಟು ಅವರು ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಗಿಡಮರಗಳನ್ನು ನಾಶಪಡಿಸುತ್ತಿರುವುದರಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಗರೀಕರಣ ಹಾಗೂ ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿದು ಬೃಹದಾಕಾರದ ಕಟ್ಟಡಗಳನ್ನು ನಿರ್ಮಾಣ ಮಾಡಲು ಹೊರಟಿರುವುದರಿಂದ, ಸ್ವತಃ ವಿಪತ್ತುಗಳನ್ನು ನಾವೇ ನಮ್ಮಲ್ಲಿಗೆ ಬರಮಾಡಿಕೊಳ್ಳುವಂತಾಗಿದೆ. ಗಿಡಮರಗಳನ್ನು ಸಂರಕ್ಷಣೆ ಮಾಡುವ ಬದಲಿಗೆ ಅವುಗಳನ್ನು ನಾಶಪಡಿಸುತ್ತಾ ಹೋದಂತೆಲ್ಲಾ ಪರಿಸರದಲ್ಲಿ ಪ್ರಾಣಿ, ಪಕ್ಷಿ ಸಂಕುಲಗಳು ಕಣ್ಮರೆಯಾಗುವುದರ ಜೊತೆಗೆ, ವಾತಾವರಣದಲ್ಲಿ ತಾಪಮಾನ ಹೆಚ್ಚಾಗುವುದು. ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ತಾತ್ವಾರ ಉಂಟಾಗಲಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು, ರೈತರು ಎಲ್ಲರೂ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವಂತಾಗಬೇಕು ಎಂದರು.
ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಬೇಡ, ತಾಂತ್ರಿಕ ಯುಗದಲ್ಲಿ ಪ್ರತಿದಿನ ಪರಿ ಸರ ನಾಶವಾಗುವುದನ್ನು ಕಂಡು ಬುದ್ಧಿ ಜೀವಿಗಳು, ಪರಿಸರ ವಾದಿಗಳು ಇಂದು ಪಟ್ಟಣ ಪ್ರದೇಶ ಬಿಟ್ಟು ಹಳ್ಳಿ ಗಾಡಿನಲ್ಲಿ ವಾಸಿಸುತ್ತಿದ್ದಾರೆ. ವಾಹನಗಳ ಓಡಾಟ ಹೆಚ್ಚಾಗಿದೆ. ವಾಹನಗಳು ಬಿಡುವ ಹೊಗೆಯಿಂದ ಜನರು ರೋಗ, ರುಜಿನ ಗಳಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಪರಿಸರವೂ ನಾಶವಾಗುತ್ತಿದೆ. ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರ ಹೆಚ್ಚು ಸಸಿ ನೆಟ್ಟು ಪರಿಸರ ಉಳಿಸುವುದೆಂದು ಅಭಿಪ್ರಾಯಪಟ್ಟರು.
ತಮ್ಮ ಗ್ರಾಮಗಳಲ್ಲಿ ನೆಟ್ಟ ಗಿಡವನ್ನು ಕಾಪಾಡುವ ಉತ್ಸಾಹವಿರುವವರು ನಮ್ಮನ್ನು ಸಂಪರ್ಕಿಸಿದಲ್ಲಿ ನಾವೇ ಸ್ವತಃ ಆಯಾ ಗ್ರಾಮಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಬರುತ್ತೇವೆ. ರಸ್ತೆ ಅಗಲೀಕರಣದಿಂದಾಗಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದ ನಡುವೆ ರಸ್ತೆ ಬದಿಯ ಹಳೆಯ ಮರಗಳನ್ನೆಲ್ಲಾ ಕಡಿಯಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ರಸ್ತೆ ಬದಿಯಲ್ಲೆಲ್ಲಾ ಗಿಡಗಳನ್ನು ನೆಡುವುದಾಗಿ ಅವರು ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲೂ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರ್.ಚಂದ್ರು ಅಭಿಮಾನಿಗಳ ಬಳಗದ ತಾಲ್ಲೂಕು ಅಧ್ಯಕ್ಷ ವಿಜಯ್, ಪಿಎಸ್‌ಐ ಪ್ರದೀಪ್ ಪೂಜಾರಿ, ಉಪನ್ಯಾಸಕ ವೆಂಕಟೇಶ್, ಡಿ.ಟಿ.ಸತ್ಯನಾರಾಯಣರಾವ್, ಚಂದ್ರು, ಆಟೋ ಚಾಲಕ ಸಂಘದ ಅಧ್ಯಕ್ಷ ಅಪ್ಪು, ಸುರೇಶ್, ಮುರಳಿ, ಹನುಮಪ್ಪ, ರಂಜಿತ್, ಬಿ.ಆರ್.ಅನಂತಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -