ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಫಲಿತಾಂಶವು ಈ ಬಾರಿ ಕ್ಷೇತ್ರದಲ್ಲಿ ಜೆ.ಡಿ.ಎಸ್ ಪರವಾಗಿದೆ. ಐದು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಮೂರನ್ನು, 17 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಲ್ಲಿ 9 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡು ಜೆಡಿಎಸ್ ಪಕ್ಷ ಯಶಸ್ಸನ್ನು ಕಂಡಿದೆ.
ಕಳೆದ ಬಾರಿ ನಾಲ್ಕು ಜಿ.ಪಂ ಕ್ಷೇತ್ರಗಳಲ್ಲಿ 3 ಸ್ಥಾನ ಪಡೆದಿದ್ದ, 16 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಲ್ಲಿ 11 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಸಾಕಷ್ಟು ಹಿನ್ನಡೆಯನ್ನು ಕಂಡಿದೆ. ಅಬ್ಲೂಡು ಕ್ಷೇತ್ರವು ಈ ಹಿಂದೆಯೂ ಜೆಡಿಎಸ್ ಪಕ್ಷದ್ದಾಗಿದ್ದು ಈ ಬಾರಿಯೂ ಮುಂದುವರೆದಿದೆ. ಕಾಂಗ್ರೆಸ್ ವಶದಲ್ಲಿದ್ದ ಚೀಮಂಗಲ ಕ್ಷೇತ್ರವನ್ನು ಈ ಬಾರಿ ಜೆಡಿಎಸ್ ತನ್ನದಾಗಿಸಿಕೊಂಡಿದ್ದಲ್ಲದೆ ಹೊಸ ಕ್ಷೇತ್ರ ಗಂಜಿಗುಂಟೆಯಲ್ಲೂ ವಿಜಯ ಸಾಧಿಸಿದೆ.
ಕಳೆದ ಬಾರಿ 16 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿದ್ದವು. ಅವುಗಳಲ್ಲಿ ಜೆಡಿಎಸ್ ಪಕ್ಷವು ಕೇವಲ 5 ಸ್ಥಾನಗಳನ್ನಷ್ಟೆ ಗಳಿಸಿತ್ತು. ಆದರೆ ಈ ಬಾರಿ ಹೆಚ್ಚುವರಿಯಾದ ಕುಂಬಿಗಾನಹಳ್ಳಿ ಕ್ಷೇತ್ರವೂ ಸೇರಿದಂತೆ ಒಟ್ಟು 9 ಸ್ಥಾನಗಳನ್ನು ಜೆಡಿಎಸ್ ಪಕ್ಷವು ಗಳಿಸಿದೆ. ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳಾದ ಭಕ್ತರಹಳ್ಳಿ, ಚೀಮಂಗಲ, ಗಂಜಿಗುಂಟೆ, ಪಲಿಚೆರ್ಲು ಮತ್ತು ತುಮ್ಮನಹಳ್ಳಿಯನ್ನು ಜೆಡಿಎಸ್ ಪಕ್ಷವು ತನ್ನದಾಗಿಸಿಕೊಂಡಿದೆ. ಕಳೆದ ಬಾರಿ ಜೆಡಿಎಸ್ ಪಾಲಾಗಿದ್ದ ಅಬ್ಲೂಡು ಮತ್ತು ಆನೂರು ಕ್ಷೇತ್ರಗಳನ್ನು ಕಾಂಗ್ರೆಸ್ ಈ ಬಾರಿ ಗಳಿಸಿಕೊಂಡಿದೆ. ಆದರೂ 8 ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದು ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.
ಸಂಸದ ಕೆ.ಎಚ್.ಮುನಿಯಪ್ಪ ಅವರ ಅಣ್ಣನ ಮಗ ಕೆ.ಎಂ. ಸತೀಶ್, ಕಳೆದ ಬಾರಿ ಜಂಗಮಕೋಟೆ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಗೆದ್ದಿದ್ದರು. ಈ ಬಾರಿ ಅವರು ದಿಬ್ಬೂರಹಳ್ಳಿ ಕ್ಷೇತ್ರದಿಂದ ಪುನಃ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ. ಮಾಜಿ ಶಾಸಕ ದಿ.ಮುಸಿಶಾಮಪ್ಪ ಅವರ ಮಗ ಹಾಗೂ ಹಾಲಿ ಶಾಸಕ ಎಂ.ರಾಜಣ್ಣ ಅವರ ಬಾವಮೈದ ಡಾ.ಎ.ಎಂ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದು ಅವರ ಪ್ರಥಮ ಚುನಾವಣೆ ಹಾಗೂ ಗಂಜಿಗುಂಟೆ ಕ್ಷೇತ್ರವೂ ನೂತನ ಕ್ಷೇತ್ರವಾಗಿರುವುದು ವಿಶೇಷವಾಗಿದೆ.
ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರವು ಇದುವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈ ಹಿಂದೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿದ್ದ ವಿನುತಾ ಶ್ರೀನಿವಾಸ್ ಅವರು ಚೀಮಂಗಲ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಮತದಾರರು ಹೊಸ ಅಭ್ಯರ್ಥಿ ಜೆಡಿಎಸ್ ಪಕ್ಷದ ತನುಜಾ ರಘು ಅವರನ್ನು ಆಯ್ಕೆ ಮಾಡಿದ್ದಾರೆ.
ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಒಂದಾಗಿದ್ದೇವೆಂದು ಘೋಷಿಸಿ ಮತಯಾಚಿಸಿದರೂ ಕಾಂಗ್ರೆಸ್ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದೆ. ಆಡಳಿತಾರೂಢ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕುವ ಮೂಲಕ ಜಯದ ನಗೆ ಬೀರಿದೆ.
- Advertisement -
- Advertisement -
- Advertisement -