24.1 C
Sidlaghatta
Tuesday, November 5, 2024

ಗೃಹಿಣಿಯರೇ, ನಿಮ್ಮತನವನ್ನು ಕಳೆದುಕೊಳ್ಳಬೇಡಿ

- Advertisement -
- Advertisement -

ಸುಮಾರು ಇಪ್ಪತ್ತೆಂಟರ ಆಸುಮಾಸಿನಲ್ಲಿರುವ ಗೃಹಿಣಿ. ಮೂರು ವರ್ಷದ ಮಗನಿದ್ದಾನೆ. ಉನ್ನತ ಶಿಕ್ಷಣ ಪಡೆದು ಮದುವೆಯಾಗಿ ಈಗ ಪೂರ್ಣಪ್ರಮಾಣದಲ್ಲಿ ಹೋಮ್ ಮೇಕರ್ ಆಗಿದ್ದಾರೆ. ನನ್ನ ಹತ್ತಿರ ಆಪ್ತಸಲಹೆಗಾಗಿ ಬಂದಿದ್ದರು. ಪ್ರಾರಂಭದ ಪರಿಚಯದ ನಂತರ ನಾನು ಕೇಳಿದೆ, “ಏನಮ್ಮಾ ನಿನ್ನ ಸಮಸ್ಯೆ, ನನ್ನಿಂದ ಏನು ಸಹಾಯವನ್ನು ಅಪೇಕ್ಷಿಸುತ್ತೀರಾ?”
ಮಾತುಗಳು ಕಣ್ಣೀರಿನ ರೂಪದಲ್ಲಿ ಮಾತ್ರ ಹೊರಬಂದವು. ಆಪ್ತಸಲಹೆಯ ನೀತಿಸಂಹಿತೆಯಂತೆ ನಾನು ಯಾವುದೇ ರೀತಿಯಲ್ಲಿ ಸಮಾಧಾನ ಮಾಡದೆ ಅವಳಿಗೆ ತನ್ನ ದುಃಖವನ್ನು ಹೊರಹಾಕಲು ಸೂಚಿಸಿದೆ. ಅವಳು ಮಾತನಾಡುವ ಸ್ಥಿತಿಗೆ ಬಂದ ನಂತರ ಹೇಳಿದ್ದರ ಸಾರಾಂಶ ಇಷ್ಟು.
ಮನೆಯಲ್ಲಿ ಅತ್ತೆ ಮಾವ ಇದ್ದಾರೆ. ಹತ್ತಿರದಲ್ಲೇ ಮದುವೆಯಾದ ಇಬ್ಬರು ನಾದಿನಿಯರೂ ಇದ್ದಾರೆ. ಪತಿಗೆ ಯಾವುದೇ ವಿಚಾರದಲ್ಲಿ ಸ್ವಂತ ನಿಲುವೇ ಇಲ್ಲ. ಎಲ್ಲದಕ್ಕೂ ಅಪ್ಪ ಅಮ್ಮನನ್ನು ಕೇಳಿ ಮಾಡು, ಅವರಿಗೆ ಬೇಸರಪಡಿಸಬೇಡ ಎನ್ನುತ್ತಾರೆ. ಅವರೋ ಮಾತೆತ್ತಿದರೆ ತಪ್ಪು ಹುಡುಕಿ ಹೀಯಾಳಿಸುವವರು. ಜೊತೆಗೆ ಪತಿಯೊಡನೆ ಏನೇ ಹೇಳಿಕೊಂಡರು ಅದು ದೊಡ್ಡ ನಾದಿನಿಗೆ ತಲುಪಿ, ಮರುದಿನ ಅವರಿಂದ ಉಪದೇಶ, ಬೈಗುಳ ಎಲ್ಲಾ ಕೇಳಬೇಕು.
ಮದುವೆಯಾದ ಆರಂಭದಲ್ಲಿ ಉದ್ಯೋಗದಲ್ಲಿದ್ದ ಈಕೆಗೆ ಒಂದು ದಿನ ಶಾಕ್ ಕಾದಿತ್ತು. ಬೆಳಿಗ್ಗೆ ಕಛೇರಿಗೆ ಹೊರಟು ನಿಂತವಳನ್ನು ತಡೆದು ನೀನು ಇವತ್ತಿನಿಂದ ಹೋಗುವಂತಿಲ್ಲ ಎಂದು ನಿರ್ಬಂಧಿಸಲಾಯಿತು. ನಂತರದಿಂದ ಮನೆಯಲ್ಲಿ ಅಡುಗೆಯವಳಾಗಿ, ಕೆಲಸದವಳಾಗಿ ಉಳಿದುಬಿಟ್ಟಳು. ಅತ್ತೆ ಮಾವನ ಸೇವೆ, ನಾದಿನಿಯ ಮಕ್ಕಳಿಗೆ ಊಟೋಪಚಾರ ಒದಗಿಸುವುದರಲ್ಲೇ ದಿನಕಳೆಯುತ್ತಿದ್ದಳು. ಮನೆಯಲ್ಲಿ ಹಿರಿಯರೆದುರು ಟೀವೀ ನೋಡುವುದಿರಲಿ, ಕುಳಿತುಕೊಳ್ಳುವಂತೆಯೂ ಇಲ್ಲ. ಹೊರಗಡೆ ಹೋಗಲು, ತೌರು ಮನೆಗೆ ಬರಲು ಮಾವನ ಅಪ್ಪಣೆ ಕೇಳಬೇಕು ಮತ್ತು ಅದು ಸಾಮಾನ್ಯವಾಗಿ ಸಿಗುವುದೇ ಇಲ್ಲ. ಮಗನೊಡನೆ ಆಟ, ನಗು ಎಲ್ಲವೂ ನಿಷಿದ್ಧ. ಆ ಮಗು ಕೂಡ ಇವರ ದಬ್ಬಾಳಿಕೆ ಹೆದರಿ ಯಾವಾಗಲೂ ಅಮ್ಮನಿಗೆ ಆತುಕೊಂಡಿರುತ್ತದೆ. ಇದೆಲ್ಲ ಸಾಲದೂ ಎಂಬಂತೆ ನೀನು ಮಗೂನ್ನ ಹಾಳುಮಾಡಿದ್ದೀಯಾ, ನಿನ್ನಿಂದಾಗಿ ಮನೆಯವರಿಗೆಲ್ಲಾ ಬೇಸರ ಎನ್ನುವ ಅಪವಾದಗಳು ಮನೆಯವರಿಂದ ಜೊತೆಗೆ ಪತಿಯಿಂದ ಕೂಡ. ತೌರು ಮನೆಯವರು ಮಧ್ಯಪ್ರವೇಶ ಮಾಡಿದಾಗಲೆಲ್ಲಾ ಹೆಚ್ಚಿನ ರಾದ್ಧಾಂತ. ನಿನ್ನ ಅಗತ್ಯವೇ ನನಗಿಲ್ಲ ಎನ್ನುವಂತೆ ವರ್ತಿಸುವ ಗಂಡ. ಹಾಗಿದ್ದರೂ ಈಗ ಇವಳು ಮತ್ತೆ ಎರಡು ತಿಂಗಳ ಗರ್ಭಿಣಿ. ಇತ್ತೀಚೆಗೆ ಇವಳ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್‍ಗಳು ಮತ್ತು ಜೀವವಿಮಾ ಪಾಲಿಸಿಗಳ ನಾಮಿನೇಷನ್‍ನ್ನು ಮಾವನ ಹೆಸರಿಗೆ ಬದಲಾಯಿಸಲು ಪತಿ ಪ್ರಾರಂಭಿಸಿದ್ದರು.
“ಸಾರ್ ನನಗೆ ಅಲ್ಲಿಗೆ ಹೋಗಲು ಇಷ್ಟವೇ ಇಲ್ಲ. ತೊಂಬತ್ತು ವರ್ಷ ಬದುಕಿದ್ದರೂ ಅಲ್ಲಿ ನಾನು ಸತ್ತಂತೆಯೇ ಇರಬೇಕು. ಅದಕ್ಕೆ ಅಲ್ಲಿಗೆ ಯಾಕೆ ಹೋಗಬೇಕು?” ಕೇಳಿದಳು.
ಆತ್ಮಹತ್ಯೆಗೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದಾಳೆಯೇ? ಅವಳು ಇಲ್ಲಿಯವರೆಗೆ ಆಡಿದ ಮಾತುಗಳನ್ನು ಮನಸ್ಸಿನಲ್ಲೇ ನಾನು ರೀವೈಂಡ್ ಮಾಡಿ, ಹೆಚ್ಚಿನ ಸೂಚನೆಗಳು ಸಿಗುತ್ತವೆಯೇ ನೋಡಿದೆ. ಇಲ್ಲ ಸಧ್ಯಕ್ಕಂತೂ ಅಂತಹ ಸೂಚನೆಗಳಿಲ್ಲ. ಈಗ ಆಡಿರುವುದು ಪೂರ್ಣ ಹತಾಷೆಯ ಮಾತುಗಳು. ಆದರೂ ಮುಂದೊಂದು ದಿನ ಪರಿಸ್ಥಿತಿ ಎಂತಹ ತಿರುವನ್ನು ಪಡೆದರೂ ಆಶ್ಚರ್ಯವೇನಿಲ್ಲ.
ಆಪ್ತಸಲಹೆಯ ಮೂಲ ಉದ್ದೇಶ ನಮ್ಮೆದುರಿಗಿರುವ ವ್ಯಕ್ತಿ ತನಗೆ ಕಷ್ಟ ಅನ್ನಿಸುವ ಸಂದರ್ಭಗಳನ್ನು ನಿಭಾಯಿಸುವುದು ಹೇಗೆ ಎಂದು ಮಾನಸಿಕ ತಯಾರಿಕೊಡುವುದು. ಇದಕ್ಕಾಗಿ ಸಾಕಷ್ಟು ಸಮಯದ ಅಗತ್ಯವಿರುತ್ತದೆ. ಹಾಗಾಗಿ ವಾರಕ್ಕೊಮ್ಮೆಯಂತೆ ಸುಮಾರು ಹತ್ತು ಹನ್ನೆರೆಡು ವಾರಗಳಾದರೂ ಆ ವ್ಯಕ್ತಿ ಆಪ್ತಸಲಹೆಕಾರರ ಹತ್ತಿರ ಹೋಗಬೇಕಾಗುತ್ತದೆ. ಇಲ್ಲಿ ಬರೀ ಕೆಲವೇ ಗಂಟೆಗಳಲ್ಲಿ ನನ್ನಿಂದ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಹಾಗಾಗಿ ನನ್ನ ಕಾರ್ಯತಂತ್ರ ಸಂಪೂರ್ಣ ಬೇರೆಯೇ ಆಗಿರಬೇಕು ಎಂದು ಯೋಚಿಸಿದೆ.
“ಸರಿಯಮ್ಮ, ನಿಮ್ಮ ಹತಾಷೆ, ನೋವು ಎಲ್ಲದರಿಂದ ಹೊರಬರಲು ನೀವು ಈಗ ಏನು ಮಾಡಬಹುದು ಎಂದು ನಿಮಗನ್ನಿಸುತ್ತದೆ?” ಅವಳನ್ನು ಯೋಚಿಸಲು ಪ್ರಚೋದನೆ ಕೊಡುವ ಉದ್ದೇಶದಿಂದ ಕೇಳಿದೆ. ತಾನು ಏನೇ ಮಾಡಿದರೂ ಅದಕ್ಕೆ ಪ್ರತಿಯಾಗಿ ಇತರರು ಏನೇನು ಮಾಡಬಹುದು ಎಂದು ಮತ್ತೆ ಹಳೆÀಯ ಘಟನೆಗಳನ್ನು ಉದಾಹರಿಸಿ ಹೇಳತೊಡಗಿದಳು. ಒಂದೆರೆಡು ಗಂಟೆಗಳಲ್ಲಿ ಮುಗಿಸಿಬೇಕಾದ ಆಪ್ತಸಲಹೆಯಾದ್ದರಿಂದ ನಾನು ಡೈರೆಕ್ಟಡ್ ಕೌನ್ಸೆಲ್ಲಿಂಗ್ ತಂತ್ರಗಳನ್ನು ಬಳಸಲೇಬೇಕಾಗಿತ್ತು.
“ನೋಡಮ್ಮಾ, ನಿಮ್ಮ ಪರಿಸ್ಥಿತಿಗೆ ಕಾರಣ ಯಾರೇ ಅಂತ ನಿಮಗನ್ನಿಸಿದರೂ ಅವರೆಲ್ಲಾ ಸರಿಯಾಗುತ್ತಾರೆಂದು ಆಶಿಸುತ್ತಾ ಕೂತರೆ ನಿಮ್ಮ ಜೀವನ ಮುಗಿದು ಹೋಗಿರುತ್ತದೆ. ನಮ್ಮ ಸುತ್ತಲೂ ಎಂತವರೇ ಇದ್ದರೂ ಅವರೆಲ್ಲರ ಮಧ್ಯೆ ಸಮಾಧಾನದಲ್ಲಿ ಬದುಕುವ ರೀತಿಯನ್ನು ನಾವು ಕಂಡುಕೊಳ್ಳಬೇಕು. ಅದಕ್ಕಾಗಿ ನಮ್ಮ ನಂಬಿಕೆ, ಯೋಚನೆ, ಕ್ರಿಯೆ, ಪ್ರತಿಕ್ರಿಯೆಗಳನ್ನೆಲ್ಲಾ ಬದಲಾಯಿಸಿಕೊಳ್ಳಬೇಕು. ಇಲ್ಲಿಯರೆಗೆ ನೀವು ಹೇಗೆ ವರ್ತಿಸುತ್ತಾ ಬಂದಿದ್ದೀರಾ ಅಂತ ವಿಚಾರ ಮಾಡೋಣ. ಪತಿಯೊಡನೆ ಹಂಚಿಕೊಂಡ ಭಾವನೆಗಳು ನಾದಿನಿಯರಿಗೆ ತಿಳಿದಾಗ ಪತಿಯೊಡನೆ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸದೇ ಅವರೊಡನೆ ಆಪ್ತವಿಚಾರಗಳನ್ನು ಹೇಳಿಕೊಳ್ಳುವುದನ್ನೇ ನಿಲ್ಲಿಸಿದಿರಿ; ನಾದಿನಿಯರನ್ನು ನಿಮ್ಮ ವೈಯುಕ್ತಿಕ ವಿಚಾರದಲ್ಲಿ ತಲೆಹಾಕಬಾರದೆಂದು ನಯವಾಗಿ ಎಚ್ಚರಿಸಲಿಲ್ಲ. ನಿಮ್ಮ ಉದ್ಯೋಗವನ್ನು ಮುಂದುವರಿಸಲೇಬೇಕೆಂದು ಧೃಡವಾದ ನಿಲುವನ್ನು ನೀವು ತೆಗೆದುಕೊಳ್ಳಲಿಲ್ಲ. ನೀವು ಮಾಡುವ ಪ್ರತಿ ಕೆಲಸಕ್ಕೂ ಅತ್ತೆ ಮಾವನ ಒಪ್ಪಿಗೆಯನ್ನು ನಿರೀಕ್ಷಿಸುತ್ತಾ ಹೋದಿರಿ. ಕುಟುಂಬಕ್ಕೆ ಸಂಬಂಧಿಸದ ನಿಮ್ಮ ಖಾಸಗೀ ವಿಚಾರಗಳಲ್ಲಿ- ಉದಾಹರಣೆಗೆ ಸ್ನೇಹಿತರ ಮನೆಗೆ, ತೌರಿಗೆ ಹೋಗುವುದು, ಮಗನೊಡನೆ ಹಾಡಿ ಆಡಿ, ಕುಣಿಯುವುದು-ಕೂಡ ನಿಮಗೆ ಬೇಕಾದಂತೆ ನಡೆದುಕೊಳ್ಳುತ್ತಾ ಹೋಗಲಿಲ್ಲ. ನಾನು ಏನು ಮಾಡಿದರೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಯೋಚನೆಮಾಡುತ್ತಾ ನಿಮ್ಮ ಕ್ರಿಯೆಯನ್ನು ಬದಲಾಯಿಸಿಕೊಳ್ಳುತ್ತಾ ಹೋದಿರಿ. ಈಗ ನಿಮಗಿಷ್ಟವಿರದ ಗರ್ಭವನ್ನು ಉಳಿಸಿಕೊಳ್ಳಬೇಕೇ ಬೇಡವೇ ಎನ್ನುವುದನ್ನು ಅತ್ತೆ ಮಾವಂದಿರು ನಿರ್ಧರಿಸಬೇಕು ಎಂದು ನೀವು ಹೇಳುವುದನ್ನು ನೋಡಿದರೆ, ನೀವು ನಿಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡುಬಿಟ್ಟಿದ್ದೀರಾ ಅನ್ನಿಸುವುದಿಲ್ಲವಾ?” ಸರಳವಾಗಿ ವಿವರಿಸುತ್ತಾ ಹೋದೆ.
“ಸಾರ್ ನನಗೆ ಬೇಕಾದಂತೆ ಮಾಡಿದ್ದರೆ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ನಾನು ಕೆಲವೊಮ್ಮೆ ಅವರ ಮಾತುಗಳಿಗೆ ಪ್ರತ್ಯುತ್ತರವನ್ನು ನೀಡಿದ್ದೆ, ಆಗೆಲ್ಲಾ ಅದೊಂದು ದೊಡ್ಡ ರಾದ್ಧಾಂತವೇ ಆಗಿಬಿಟ್ಟಿತ್ತು.” ಅವಳು ಅಸಹಾಯಕತೆಯನ್ನು ವ್ಯಕ್ತಪಡಿಸಿದಳು.
ನಂತರದ ಮಾತುಕಥೆಯಲ್ಲಿ ನಾವು ಹೇಳಿದ್ದರ ಸಾರಾಂಶ ಇಷ್ಟು, “ನೋಡಮ್ಮಾ ಇಲ್ಲೇ ನೀವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿದಿದ್ದು ಮತ್ತು ನಿಮ್ಮ ಈ ದೌರ್ಬಲ್ಯವನ್ನೇ ಎಲ್ಲರೂ ಉಪಯೋಗಿಸುತ್ತಿರುವುದು. ಈಗ ನೀವು ಪದೇ ಪದೇ ಆದ ಕಹಿ ಅನುಭವಗಳಿಂದ ಪತಿ ಮತ್ತವರ ಕುಟುಂಬದಿಂದ ಮಾನಸಿಕವಾಗಿ ನಿಮ್ಮನ್ನು ವಿಚ್ಛೇದಗೊಳಿಸಿಕೊಂಡುಬಿಟ್ಟಿದ್ದೀರಾ. ಈಗ ಇದೇ ಪರಿಸ್ಥಿತಿಯಲ್ಲಿ ಜೀವಮಾನವಿಡೀ ಮುಂದುವರೆಯವುದು ಅಥವಾ ಕಾನೂನಿನ ವಿಚ್ಛೇದನಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದುಕೊಂಡು ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುವುದು-ಇವೆರೆಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ನಿಮ್ಮ ಸ್ವಂತಿಕೆಯನ್ನು ಧೃಡಪಡಿಸಿಕೊಳ್ಳುತ್ತಾ ಹೋದಾಗ ಪತಿ ಮತ್ತವರ ಕುಟುಂಬದವರ ಪ್ರತಿಕ್ರಿಯೆ ಬೇರೇನೇ ಆಗುತ್ತಾ ಹೋಗಿ, ಮುಂದೆ ವಿಚ್ಛೇದನದ ಅಗತ್ಯ ಬೀಳದೇ ಇರಬಹುದು ಅಥವಾ ಅದಕ್ಕೆ ಬೇಗನೆ ವೇದಿಕೆ ಸಿದ್ಧವಾಗಲೂಬಹುದು. ಆದರೆ ಹೀಗೆ ನಿಮ್ಮ ವ್ಯಕ್ತತ್ವಕ್ಕೆ ಒಂದು ಗಟ್ಟಿತನ ತಂದುಕೊಳ್ಳುವುದು ಬರೀ ಕೌಟುಂಬಿಕ ಜೀವನಕ್ಕಷ್ಟೇ ಅಲ್ಲ, ನಿಮ್ಮ ವ್ಯಾವಹಾರಿಕ ಜೀವನಕ್ಕೂ ಅನುಕೂಲಕರ. ಮನೆಯಿಂದ ಹೊರಗಡೆ ನಿಮ್ಮ ಈ ವ್ಯಕ್ತಿತ್ವವನ್ನು ದುರುಪಯೋಗಪಡಿಸಿಕೊಳ್ಳುವವರು ಹೆಚ್ಚಾಗಿರುತ್ತಾರೆ. ಹಾಗಾಗಿ ನೀವು ಹೆಚ್ಚು ಕ್ರಿಯಾಶೀಲರಾಗದಿದ್ದರೆ ಪರಿಸ್ಥಿತಿಗಳು ಬದಲಾಗಲಾರದು. ಇಲ್ಲಿಯವರೆಗೆ ಮಾಡಿದಂತೆ, ಇತರರ ಪ್ರತಿಕ್ರಿಯೆಗಳಿಗೆ ಕಾಯತ್ತಾ ಕೂರದೆ ನಿಮಗೆ ಸರಿಯೆನಿಸಿದ್ದನ್ನು ಮಾಡುವ ಧೃಡತೆಯನ್ನು ಬೆಳೆಸಿಕೊಳ್ಳವ ತರಬೇತಿಯ ಅಗತ್ಯ ನಿಮಗಿದೆ. ನಿಮ್ಮ ಗಟ್ಟಿತನ್ನವನ್ನು ತೋರಿಸಲು ಈಗ ನಿಮಗೆ ಸರಿಯಾದ ಅವಕಾಶವೂ ಇದೆ. ನಿಮ್ಮ ಎರಡು ತಿಂಗಳ ಗರ್ಭವನ್ನು ಮುಂದುವರಿಸಬೇಕೇ ಬೇಡವೇ ಎಂದು ತಾಯಿಯಾಗಿ ನೀವೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಿ. ಅದರಂತೆ ಮುಂದುವರೆದು ಅದನ್ನು ಪತಿಗೆ ಮಾತ್ರ ತಿಳಿಸಿ.”
ಹೀಗೆ ಸಾಕಷ್ಟು ಮಾತುಕತೆಯಾದ ನಂತರ ಅವಳಿಗೆ ತಾನು ಇಲ್ಲಿಯವರೆಗೆ ತಪ್ಪಿದ್ದೆಲ್ಲಿ ಎಂದು ತಿಳಿಯತೊಡಗಿತು. ಹಾಗಿದ್ದರೂ ಇಷ್ಟು ದಿನ ಮೈಗೂಡಿರುವ ಸ್ವಭಾವನ್ನು ಏಕಾಏಕಿ ಬದಲಾಯಿಸಿಕೊಳ್ಳುವುದು ಸುಲಭವಲ್ಲ. ನಾವು ಮಾಡಬೇಕೆಂದುಕೊಂಡಿದ್ದನ್ನು ವಾಸ್ತವ ಪರಿಸ್ಥಿತಿಗಳು ಎದುರಾದಾಗ ಮಾಡಲಾಗದೇ ಮತ್ತೆ ಮತ್ತೆ ಹಳೆಯ ದಾರಿಗಳಲ್ಲೇ ನಾವು ನಡೆಯುತ್ತಾ ಕೊರಗುತ್ತಾ ಇರುತ್ತೇವೆ. ಹಾಗಾಗಿ ಸಂಪೂರ್ಣ ಬದಲಾವಣೆಗೆ ಸಮಯ ಮತ್ತು ಸೂಕ್ತ ಸಹಾಯ ಎರಡರ ಅಗತ್ಯವೂ ಇರುತ್ತದೆ. ಇದರ ಬಗೆಗೆ ಅವಳಲ್ಲಿ ಅರಿವನ್ನು ಮೂಡಿಸಿ ಆಪ್ತಸಲಹೆಯನ್ನು ಮುಗಿಸಿದೆ.
ಇದು ನಮ್ಮಲ್ಲಿ ಸಾಕಷ್ಟು ಹೆಣ್ಣುಮಕ್ಕಳ ಪರಿಸ್ಥಿತಿ. ಹೆಚ್ಚಿನವರಿಗೆ ಕೌಟುಂಬಿಕ ವಾತಾವರಣ ಇಷ್ಟು ಅಸಹನೀವಾಗಿಲ್ಲದಿದ್ದರೂ, ಒಟ್ಟಾರೆ ನಾವು ಅವರಿವರಿಗಾಗಿ ಬದುಕುತ್ತಿದ್ದೇವೆ, ತಮ್ಮತನವನ್ನು ಸಂಪೂರ್ಣ ಕಳೆದುಕೊಂಡಿದ್ದೇವೆ ಅನ್ನಿಸುತ್ತಿರಬಹದು. ಜೊತೆಗೆ ಕುಟುಂಬಕ್ಕಾಗಿ ಹೆಣ್ಣು ತ್ಯಾಗಮಾಡಬೇಕು ಎಂದೆಲ್ಲಾ ಉಪದೇಶಿಸುವ ಹಿರಿಯರು, ಧರ್ಮಗುರುಗಳೂ ಸಾಕಷ್ಟು ದಾರಿತಪ್ಪಿಸುತ್ತಾರೆ. ಇಂತಹ ಚಿಂತನೆಯನ್ನು ವೈಭವೀಕರಿಸಿ ಹೆಣ್ಣನ್ನು ದೈವತ್ವಕ್ಕೇರಿಸಿ ತೋರಿಸುವ ಸಿನಿಮಾಗಳಿಗೆ, ಧಾರವಾಹಿಗಳಿಗೆ ಮತ್ತು ಅದನ್ನು ಒದ್ದೆ ಕಣ್ಣುಗಳಿಂದ ಆನಂದಿಸುವ ಸ್ತ್ರೀಯರಿಗೂ ಕೊರತೆಯೇನಿಲ್ಲ. ಇಂತಹ ವಿಷಮ ಪರಿಸ್ಥಿತಿಗಳಲ್ಲೂ ಸಂಸಾರ ಮತ್ತು ತಮ್ಮ ವೃತ್ತಿ ಅಥವಾ ಹವ್ಯಾಸಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿರುವ ಗೃಹಿಣಿಯರು ಸಾಕಷ್ಟು ಜನ ನಮ್ಮ ಸುತ್ತಲೂ ಇದ್ದಾರೆ.
ಹಾಗಾಗಿ ಹೋಮ್ ಮೇಕರ್‍ಗಳು ತಮ್ಮ ಪರಿಸ್ಥಿತಿಗೆ ಕಾರಣಗಳನ್ನು ತಮ್ಮಿಂದ ಹೊರಗೆ ಅಂದರೆ ಸಂಸಾರ, ಸಮಾಜ, ಧರ್ಮ, ಕಾನೂನು ಮುಂತಾದವುಗಳಲ್ಲಿ ಹುಡುಕ ಹೊರಟರೆ ಜೀವನವೆಲ್ಲಾ ಗೊಣಗುತ್ತಲೇ ಇರಬೇಕಾಗುತ್ತದೆ. ಮೊದಲು ತಮಗೆ ಬೇಕಾಗಿರುವುದೇನು ಎನ್ನುವುದನ್ನು ಗೃಹಿಣಿಯರು ಖಚಿತಪಡಿಸಿಕೊಳ್ಳಬೇಕು. ಹಾಗೊಮ್ಮೆ ಅವರಿಗೆ ಈಗಿರುವ ಪರಿಸ್ಥಿತಿಗಳು ಸಮಾಧಾನಕಾರ ಅನ್ನಿಸಿದರೆ ಬಲವಂತವಾಗಿ ಇತರರನ್ನು ಅನುಕರಿಸಬೇಕಿಲ್ಲ. ಬರೇ ಮನೆ ಮಕ್ಕಳು ಅಂತ ಬದುಕುತ್ತಿರುವ ಸಾಕಷ್ಟು ಗೃಹಿಣಿಯರು ತೃಪ್ತಿಯಿಂದ ಇದ್ದಾರೆ. ಅಂತವರು ಸ್ತ್ರೀಸ್ವಾತಂತ್ರದ ಹಣೆಪಟ್ಟಿ ಹಚ್ಚಿಕೊಂಡು ತಮ್ಮ ನೆಮ್ಮದಿ ಹಾಳುಮಾಡಿಕೊಳ್ಳಬೇಕಿಲ್ಲ. ಕೆಲವರಿಗೆ ಪರಿಸ್ಥಿತಿಗಳು ಬದಲಾಗಬೇಕು ಅನ್ನಿಸಿದರೆ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು, ಪ್ರಯತ್ನವನ್ನು ಮಾಡಬೇಕು. ಹಾಗೆ ಮಾಡುವಾಗ ಕುಟುಂಬಕ್ಕೆ ಅವರು ಕೊಡಬಹುದಾದ ಸಮಯ ಕಡಿಮೆಯಾಗಿ, ಪತಿ, ಅತ್ತೆ, ಮಾವ, ಮಕ್ಕಳು, ಹೀಗೆ ಎಲ್ಲರಿಂದ ತಕರಾರುಗಳು ಬಂದೇ ಬರುತ್ತವೆ. ಇದನ್ನೆಲ್ಲಾ ನಿಭಾಯಿಸಲು ಹಿಂಜರಿದರೆ ಮತ್ತೆ ಹಳೆಯ ದಾರಿಯಲ್ಲೇ ನಡೆಯುತ್ತಾ ಇರಬೇಕಾಗುತ್ತದೆ. ನಿಭಾಯಿಸುವುದು ಅಂದರೆ ಕಟುಮಾತುಗಳು ಅಥವಾ ಜಗಳ ಅಂತಂದುಕೊಳ್ಳಬೇಕಿಲ್ಲ. ನಿಮ್ಮ ಅಭೀಪ್ರಾಯವನ್ನು ಎಲ್ಲರೊಡನೆ ಹಂಚಿಕೊಂಡು ಅವರ ಸಲಹೆ ಸಹಕಾರವನ್ನು ಕೇಳಿ. ನಿಧಾನವಾಗಿ ನಮ್ಮ ವ್ಯಕ್ತಿತ್ವವನ್ನು ಧೃಡಪಡಿಸಿಕೊಳ್ಳುತ್ತಾ ಹೋದಂತೆ ಹೆಚ್ಚಿನ ಕುಟುಂಬಗಳು ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಾ ಹೋಗುತ್ತವೆ. ಜೊತೆಗೆ ಗೃಹಿಣಿಯರು ತಮ್ಮ ಸ್ವಂತಿಕೆಯನ್ನು ಕಂಡುಕೊಂಡಾಗ ಬರುವ ಸುಖ ಸಂತೋಷಗಳನ್ನು ಎಲ್ಲರಿಗೂ ಹಂಚಲು ಸಾಧ್ಯವಾಗುತ್ತದೆ. ಇಂತಹ ಯಾವ ಪ್ರಯತ್ನವನ್ನೇ ಮಾಡದೆ ನಿಮ್ಮ ಪರಿಸ್ಥಿತಿಗಳಿಗೆ ಅವರಿವರನ್ನು ದೂಷಿಸುತ್ತಾ ಕುಳಿತಿದ್ದರೆ ನೀವು ಇದ್ದಲ್ಲೇ ಇರುವ ಸಾಧ್ಯತೆಗಳೇ ಹೆಚ್ಚು ಎಂದು ಮರೆಯಬಾರದು.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!